ಕೇರಳದ ಕಾಂಗ್ರೆಸ್ ಅಭ್ಯರ್ಥಿ ವಿ.ವಿ. ಪ್ರಕಾಶ್ ನಿಧನ

Update: 2021-04-29 06:45 GMT

ತಿರುವನಂತಪುರ: ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಬೂರು ಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿ ವಿ.ವಿ.ಪ್ರಕಾಶ್ ಅವರು ಹೃದಯ ಸ್ತಂಬನದಿಂದ ಗುರುವಾರ ಮುಂಜಾನೆ  ನಿಧನರಾದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.

ಪಕ್ಷದ ಮಲಪ್ಪುರಂ ಜಿಲ್ಲಾಧ್ಯಕ್ಷರೂ ಆಗಿದ್ದ ಪ್ರಕಾಶ್ ಅವರಿಗೆ ಎದೆ ನೋವು ಕಾಣಿಸಿಕೊಂಡ ಬಳಿಕ ಮುಂಜಾನೆ 3 ಗಂಟೆ ಸುಮಾರಿಗೆ ಮಂಜೇರಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಪಾರ್ಥಿವ ಶರೀರವನ್ನು ನಾಯಕರು ಹಾಗೂ ಕಾರ್ಯಕರ್ತರ ದರ್ಶನಕ್ಕಾಗಿ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಒಂದು ಗಂಟೆ ಇಡಲಾಗಿತ್ತು.

ಇತ್ತೀಚೆಗೆ ನೀಡಿದ್ದ ಸಂದರ್ಶನವೊಂದರಲ್ಲಿ ಈ ಬಾರಿ ನೀಲಂಬೂರು ಕ್ಷೇತ್ರದಿಂದ ಗೆಲುವು ಸಾಧಿಸುವುದಾಗಿ ಪ್ರಕಾಶ್ ವಿಶ್ವಾಸ ವ್ಯಕ್ತಪಡಿಸಿದ್ದರು. ಈ ಕ್ಷೇತ್ರವು 2016ರಲ್ಲಿ ಎಲ್‍ಡಿಎಫ್ ಪಾಲಾಗುವ ಮೊದಲು ಕಾಂಗ್ರೆಸ್ ಭದ್ರಕೋಟೆಯಾಗಿತ್ತು.

ಕೇರಳ ಚುನಾವಣೆಯ ಮತ ಎಣಿಕೆಗೆ 3 ದಿನಗಳು ಬಾಕಿ ಇರುವಾಗ ಪ್ರಕಾಶ್ ಮೃತಪಟ್ಟಿದ್ದಾರೆ.
 ಪ್ರಕಾಶ್ ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿದ್ದು, ಕೆಎಸ್ ಯು ಹಾಗೂ ಯೂತ್ ಕಾಂಗ್ರೆಸ್ ನಲ್ಲಿ ಪ್ರಮುಖ ನಾಯಕತ್ವ ನಿರ್ವಹಿಸಿದ ನಂತರ ತಿರುವನಂತಪುರದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 2011ರಲ್ಲಿ ಥವನೂರು ಕ್ಷೇತ್ರದಿಂದ ಎಲ್ ಡಿ ಎಫ್ ನ ಕೆ.ಟಿ.ಜಲೀಲ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News