ಚುನಾವಣಾ ಆಯೋಗದ ಭರವಸೆಯ ಬಳಿಕ ಉ.ಪ್ರ. ಪಂಚಾಯತ್ ಚುನಾವಣೆಯ ಮತ ಎಣಿಕೆಗೆ ಅನುಮತಿ ನೀಡಿದ ಸುಪ್ರೀಂ

Update: 2021-05-01 09:26 GMT

ಹೊಸದಿಲ್ಲಿ: ಚುನಾವಣಾ ಆಯೋಗದ ಭರವಸೆಯ ಬಳಿಕ ರವಿವಾರ ಪಂಚಾಯತ್ ಚುನಾವಣೆಯ ಮತ ಎಣಿಕೆ ನಡೆಸಲು ಉತ್ತರಪ್ರದೇಶದ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಶನಿವಾರ ಅನುಮತಿ ನೀಡಿದೆ.

ಕೋವಿಡ್ ಉಲ್ಬಣಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದ ಶಿಕ್ಷಕರ ಸಂಘಟನೆಯು, ನಾಲ್ಕು ಹಂತದ ಚುನಾವಣೆಯ ವೇಳೆ ಕರ್ತವ್ಯದ  ಸಂದರ್ಭದಲ್ಲಿ 700 ಶಿಕ್ಷಕರು ಮೃತಪಟ್ಟಿದ್ದು, ಮತ ಎಣಿಕೆಯನ್ನು ಮುಂದೂಡಬೇಕೆಂದು ಅರ್ಜಿ ಸಲ್ಲಿಸಿತ್ತು.

ಎಲ್ಲಾ ಮತ ಎಣಿಕೆ ಕೇಂದ್ರಗಳಲ್ಲಿ ಹಿರಿಯ ಅಧಿಕಾರಿಗಳು ಕೋವಿಡ್ ಶಿಷ್ಟಾಚಾರಗಳನ್ನು ಅನುಸರಿಸಬೇಕೆಂದು ನ್ಯಾಯಾಲಯವು ಒತ್ತಾಯಿಸಿದೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ.

ಅರ್ಜಿಯ ವಿಚಾರಣೆಯ ವೇಳೆ ಮತ ಎಣಿಕೆಯನ್ನು ವಿಳಂಬ ಮಾಡಬಹುದೇ ಎಂದು ಸುಪ್ರೀಂಕೋರ್ಟ್ ಚುನಾವಣಾ ಆಯೋಗವನ್ನು ಕೇಳಿದೆ. 

ಇಂತಹ ಪರಿಸ್ಥಿತಿಯಲ್ಲಿ ಮತ ಎಣಿಕೆ ನಡೆಯಬೇಕೆ? ವೈದ್ಯಕೀಯ ಸೌಲಭ್ಯವನ್ನು ಸುಧಾರಿಸಿದ ಬಳಿಕ ಮತ ಎಣಿಕೆ ನಡೆಸಬಹುದೇ?. ಮೂರು ವಾರಗಳ ಕಾಲ ಮತ ಎಣಿಕೆ ಮುಂದೂಡಿದರೆ ಸ್ವರ್ಗ ಕಳಚಿ ಬೀಳುವುದಿಲ್ಲ. ಶಿಕ್ಷಕರ ಸಂಘವು ಅರ್ಜಿ ಸಲ್ಲಿಸಿದೆ.  ಅವರು ಕೆಲಸ ಮಾಡಲು ಬಯಸುತ್ತಿಲ್ಲ. ನೀವು ಹೇಗೆ ಪರಿಸ್ಥಿತಿ ನಿಭಾಯಿಸುತ್ತೀರಿ ಎಂದು  ನ್ಯಾಯಾಲಯ ಕೇಳಿದೆ.

ನಾವು ಮತಎಣಿಕೆ ನಡೆಸಲು ನಿರ್ಧರಿಸಿದ್ದೇವೆ ಎಂದು ರಾಜ್ಯ ಚುನಾವಣಾ ಆಯೋಗವು ಸುಪ್ರೀಂಕೋರ್ಟ್‍ಗೆ ತಿಳಿಸಿತು.

ಎಣಿಕಾ ಕೇಂದ್ರಗಳ ಬಳಿ ಇರುವ ಪ್ರದೇಶಗಳಲ್ಲಿ ಕಫ್ರ್ಯೂ ವಿಧಿಸಲಾಗುವುದು ಹಾಗೂ ಫಲಿತಾಂಶಗಳು ಹೊರ ಬಂದ ನಂತರ ಉತ್ತರಪ್ರದೇಶದಲ್ಲಿ ಯಾವುದೇ ವಿಜಯೋತ್ಸವ ರ್ಯಾಲಿಗಳಿಗೆ ಅನುಮತಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗವು ಭರವಸೆ ನೀಡಿತು.

ಎಲ್ಲಾ ಮತ ಎಣಿಕಾ ಕೇಂದ್ರಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಉಳಿಸಿಕೊಳ್ಳುವಂತೆ ಸುಪ್ರೀಂಕೋರ್ಟ್ ಅಧಿಕಾರಿಗಳಿಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News