ಕೋವಿಡ್ ಲಸಿಕೆಯ ಫಾರ್ಮುಲಾವನ್ನು ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಬಾರದು ಎಂದ ಬಿಲ್ ಗೇಟ್ಸ್

Update: 2021-05-01 10:04 GMT

ಹೊಸದಿಲ್ಲಿ : ಕೋವಿಡ್ ಲಸಿಕೆ ತಂತ್ರಜ್ಞಾನ ಸಂಬಂಧಿತ ಪೇಟೆಂಟ್‍ಗಳ ಕುರಿತಂತೆ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಇತ್ತೀಚೆಗೆ ನೀಡಿರುವ ಹೇಳಿಕೆ ಸಾಕಷ್ಟು ವಿವಾದಕ್ಕೀಡಾಗಿದೆಯಲ್ಲದೆ ಹಲವು ಟ್ವಿಟ್ಟರಿಗರು ಗೇಟ್ಸ್ ಅವರನ್ನು `ಲಸಿಕೆ ಜನಾಂಗೀಯವಾದಿ' (ವ್ಯಾಕ್ಸಿನ್ ರೇಸಿಸ್ಟ್) ಎಂದು ಟೀಕಿಸಿದ್ದಾರೆ.

ಬ್ರಿಟಿಷ್ ಸುದ್ದಿ ಸಂಸ್ಥೆ ಸ್ಕೈ ನ್ಯೂಸ್‍ಗೆ ಎಪ್ರಿಲ್ 25ರಂದು ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಗೇಟ್ಸ್, ಕೋವಿಡ್ ಲಸಿಕೆಗಳ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಹಾಗೂ ತಯಾರಿಸುವ ಫಾರ್ಮುಲಾ ವನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುವುದು ಉತ್ತಮವೇ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, "ಈ ವಿಚಾರದಲ್ಲಿ ನಮ್ಮನ್ನು ತಡೆ ಹಿಡಿದಿರುವುದು ಬೌದ್ಧಿಕ ಆಸ್ತಿ ಹಕ್ಕಲ್ಲ, ಲಸಿಕೆಯ ಫಾರ್ಮುಲಾವನ್ನು ಇತರರೊಂದಿಗೆ ಹಂಚಿಕೊಳ್ಳಲು ಅದು ಅಡುಗೆಯ ರೆಸಿಪಿಯಲ್ಲ" ಎಂದು ಅವರು ಹೇಳಿದ್ದಾರೆ.

"ಜಗತ್ತಿನಲ್ಲಿ ಎಷ್ಟೊಂದು ಲಸಿಕೆ ಫ್ಯಾಕ್ಟರಿಗಳಿವೆ ಹಾಗೂ ಜನರು ಲಸಿಕೆಗಳ ಸುರಕ್ಷತೆಯ ಬಗ್ಗೆ ಗಂಭೀರವಾಗಿದ್ದಾರೆ. ಒಂದು ಲಸಿಕೆಯನ್ನು ಒಂದು ಫ್ಯಾಕ್ಟರಿಯಿಂದ (ಉದಾ: ಜಾನ್ಸನ್ ಎಂಡ್ ಜಾನ್ಸನ್)  ಭಾರತಕ್ಕೆ ಸ್ಥಳಾಂತರಿಸಿ ಅಲ್ಲಿ ಲಸಿಕೆ ತಯಾರಿಸುವುದಕ್ಕಿಂತ, ನಮ್ಮ ಹಣದಲ್ಲೇ, ಒಂದೇ ಸಂಸ್ಥೆಯಲ್ಲಿ ಲಸಿಕೆ ತಯಾರಿಸಬಹುದಾಗಿದೆ. ಲಸಿಕೆ ಕೇವಲ ಒಂದು ಫಾರ್ಮುಲಕ್ಕೆ ಸೀಮಿತವಾಗಬಾರದು" ಎಂದೂ ಬಿಲ್ ಗೇಟ್ಸ್ ಹೇಳಿದ್ದರು.

ಆದರೆ ಬಿಲ್ ಗೇಟ್ಸ್ ಅವರ ಈ ಹೇಳಿಕೆಗಳು ಅವರ ಸಮಾಜಸೇವಾ ಕಾರ್ಯಗಳ ಬೆಂಬಲಿಗರಿಂದಲೂ ಟೀಕೆಗೆ ಗುರಿಯಾಗಿವೆ.

ಭಾರತದಲ್ಲಿ ಹಾಗೂ ಶ್ರೀಲಂಕಾದಲ್ಲಿ ಕೂಡ ಹಲವು ಟ್ವಿಟರಿಗರು ಬಿಲ್ ಗೇಟ್ಸ್  ಅವರ ಹೇಳಿಕೆಯನ್ನು ಖಂಡಿಸಿದ್ದಾರೆ. ಶ್ರೀಲಂಕಾ ಮೂಲದ ಲೇಖಕ, ಇಂಡಿಕಾ ಎಂಬ ಟ್ಟಿಟ್ಟರ್ ಹ್ಯಾಂಡಲ್ ಇರುವವರು ಪ್ರತಿಕ್ರಿಯಿಸಿ "ಬಿಲ್ ಗೇಟ್ಸ್ ಒಬ್ಬ ಲಸಿಕೆ ಜನಾಂಗೀಯವಾದಿ. ಎಲ್ಲಾ ಲಸಿಕೆಗಳ ಪೈಕಿ ಶೇ60ರಷ್ಟು ಲಸಿಕೆ ತಯಾರಿಸುವ  ಭಾರತೀಯ ಸಂಸ್ಥೆಗಳು 'ಸುರಕ್ಷಿತವಲ್ಲ' ಎಂದು ಅವರು ಅಂದುಕೊಂಡಿದ್ದಾರೆ,'' ಎಂದು ಬರೆದಿದ್ದಾರೆ.

ಸ್ವತಂತ್ರ ಪತ್ರಕರ್ತ ಜೋರ್ಡನ್ ಶೆಚೆಟೆಲ್ ಪ್ರತಿಕ್ರಿಯಿಸಿ, "ಸೆಪ್ಟೆಂಬರ್ 2019ರಲ್ಲಿ ಬಿಲ್ ಗೇಟ್ಸ್ ಅವರು ಬಯೋಎನ್‍ಟೆಕ್‍ನಲ್ಲಿ  55 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದರು. ಈ ಸಂಸ್ಥೆ ನಂತರ ಎಂಆರ್‍ಎನ್‍ಎ ಲಸಿಕೆ ತಯಾರಿಸಲು ಫೈಝರ್ ಜತೆ ಪಾಲುದಾರಿಕೆ ನಡೆಸಿದೆ.  ಗೇಟ್ಸ್ ಅವರ ಆ ಹೂಡಿಕೆ ಈಗ 550 ಮಿಲಿಯನ್ ಡಾಲರ್ ಗೂ  ಹೆಚ್ಚಾಗಿದೆ. ಇನ್ನು ಯಾವುದೇ ಪ್ರಶ್ನೆಗಳಿಲ್ಲ,'' ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೊಬ್ಬರು ಪ್ರತಿಕ್ರಿಯಿಸಿ "ಉದಾರವಾದಿಗಳು ನಿಧಾನವಾಗಿ ಬಿಲ್ ಗೇಟ್ಸ್ ಕೆಟ್ಟವರು ಎಂದು ಅರಿಯಲಾರಂಭಿಸಿರುವುದು ಖುಷಿ ನೀಡಿದೆ. ಅವರು ಯಾವತ್ತೂ ಹೀಗೆಯೇ ಲಾಭವನ್ನೇ ಎಲ್ಲಕ್ಕಿಂತ  ಹೆಚ್ಚಾಗಿ ಪರಿಗಣಿಸುವ ಏಕಸ್ವಾಮ್ಯವಾದಿ,'' ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News