ಆಸ್ಟ್ರೇಲಿಯ ಆಟಗಾರರಿಗೆ ವಾಪಸಾಗಲು ವಿಮಾನ ಸೌಲಬ್ಯ ಇಲ್ಲ: ಸಿಎ ಮುಖ್ಯಸ್ಥ ಹಾಕ್ಲೆ

Update: 2021-05-03 18:39 GMT

ಮೆಲ್ಬೋರ್ನ್,ಮೇ 3: ಐಪಿಎಲ್ ಮುಗಿದ ನಂತರ ಕೋವಿಡ್ ಎರಡನೇ ಅಲೆಯಿಂದ ತೊಂದರೆಗೊಳಗಾಗಿರುವ ಭಾರತದಿಂದ ತನ್ನ ಆಟಗಾರರನ್ನು ಕರೆತರಲು ಚಾರ್ಟರ್ ಫ್ಲೈಟ್ ವ್ಯವಸ್ಥೆ ಮಾಡುವ ಯಾವುದೇ ಯೋಜನೆಯನ್ನು ಕ್ರಿಕೆಟ್ ಆಸ್ಟ್ರೇಲಿಯ ಹೊಂದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯ ಮುಖ್ಯಸ್ಥ ನಿಕ್ ಹಾಕ್ಲೆ ಸೋಮವಾರ ಹೇಳಿದ್ದಾರೆ.

ಕೆಕೆಆರ್‌ನ ಇಬ್ಬರು ಆಟಗಾರರಿಗೆ ಕೋವಿಡ್ ಸೋಂಕು ತಗಲಿದ ವಿಚಾರ ಬಹಿರಂಗಗೊಳ್ಳುವ ಮೊದಲೇ ಹಾಕ್ಲೆ ಹೇಳಿಕೆ ನೀಡಿದ್ದರು. ಆದರೆ ಸೋಮವಾರ ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯವನ್ನು ಮುಂದೂಡಲಾಗಿದೆ.

 ಆಸ್ಟ್ರೇಲಿಯದ ವೇಗಿ ಪ್ಯಾಟ್ ಕಮ್ಮಿನ್ಸ್ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹ ಆಟಗಾರರಾದ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್‌ಗೆ ಕೋವಿಡ್ -19 ಸೋಂಕು ತಗಲಿರುವುದು ದೃಢಪಟ್ಟಿದೆ. ಮೇ 30 ರಂದು ಪಂದ್ಯಾವಳಿ ಮುಕ್ತಾಯಗೊಂಡ ನಂತರ ಆಸ್ಟ್ರೇಲಿಯ ಆಟಗಾರರಿಗೆ ಚಾರ್ಟರ್ ಫ್ಲೈಟ್ ವ್ಯವಸ್ಥೆ ಮಾಡುವಂತೆ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಕ್ರಿಸ್ ಲಿನ್ ಇತ್ತೀಚೆಗೆ ಕ್ರಿಕೆಟ್ ಆಸ್ಟ್ರೇಲಿಯವನ್ನು ಕೋರಿದ್ದರು.

  ಆಸ್ಟ್ರೇಲಿಯ ಸರಕಾರ ಇತ್ತೀಚೆಗೆ ತನ್ನ ಪ್ರಜೆಗಳನ್ನು ಭಾರತದಿಂದ ಹಿಂದಿರುಗುವುದನ್ನು ನಿಷೇಧಿಸಿತ್ತು. ಭಾರತ ಸಾಂಕ್ರಾಮಿಕ ರೋಗದ ತೀವ್ರತರವಾದ ಎರಡನೇ ಅಲೆಯನ್ನು ಎದುರಿಸುತ್ತಿದೆ. ಇದು ದಿನನಿತ್ಯ ಸಾವಿರಾರು ಮಂದಿಯ ಸಾವಿಗೆ ಕಾರಣವಾಗುತ್ತಿದೆ.

ಆಸ್ಟ್ರೇಲಿಯದ ಆ್ಯಡಮ್ ಝಂಪಾ, ಆಂಡ್ರೂ ಟೈ ಮತ್ತು ಕೇನ್ ರಿಚರ್ಡ್ಸನ್ ಕೂಡ ಐಪಿಎಲ್‌ನ ಭಾಗವಾಗಿದ್ದರು .ಆದರೆ ನಿಷೇಧ ಘೋಷಣೆಯ ಮೊದಲು ಅವರು ಭಾರತದಿಂದ ಆಸ್ಟ್ರೇಲಿಯಕ್ಕೆ ಹಾರಿದ್ದಾರೆ. ಇನ್ನೂ ಲೀಗ್‌ನಲ್ಲಿ ಆಸ್ಟ್ರೇಲಿಯದ ಹಾಲಿ ಮತ್ತು ಮಾಜಿ ಆಟಗಾರರು ಹಲವು ಮಂದಿ ಇದ್ದಾರೆ. ಅವರು ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಸ್ಟೀವ್ ಸ್ಮಿತ್ ಮುಂತಾದವರು ಐಪಿಎಲ್‌ನ ವಿವಿಧ ತಂಡಗಳ ಪರ ಆಡುತ್ತಿದ್ದಾರೆ. ಮಾಜಿ ನಾಯಕ ರಿಕಿ ಪಾಂಟಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

   ಜೂನ್ 18ರಿಂದ ಸೌತಾಂಪ್ಟನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಪರ್ಧಿಸಲು ಸಜ್ಜಾ ಗಿರುವ ಭಾರತ ಮತ್ತು ನ್ಯೂಝಿಲ್ಯಾಂಡ್ ಆಟಗಾರರೊಂದಿಗೆ ಇಂಗ್ಲೆಂಡ್‌ಗೆ ಪ್ರಯಾಣಿಸುವ ಯೋಜನೆಯನ್ನು ಹೊಂದಿಲ್ಲ ಎಂದು ಮ್ಯಾಕ್ಸ್‌ವೆಲ್ ಇತ್ತೀಚೆಗೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News