ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ 11 ಬಲಿ: ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ

Update: 2021-05-04 04:34 GMT
ಫೈಲ್ ಫೋಟೊ

ಕೊಲ್ಕತ್ತಾ/ ದೆಹಲಿ: "ಬಂಗಾಳದಲ್ಲಿ ಚುನಾವಣೆ ಬಳಿಕ ವಿರೋಧ ಪಕ್ಷಗಳ ಕಾರ್ಯಕರ್ತರನ್ನು ಗುರಿ ಮಾಡಿ ವ್ಯಾಪಕ ಹಿಂಸಾಚಾರ ನಡೆಯುತ್ತಿದ್ದು, ಈ ಬಗ್ಗೆ ಸಮಗ್ರ ವರದಿ ಸಲ್ಲಿಸಬೇಕು" ಎಂದು ಕೇಂದ್ರ ಗೃಹ ಸಚಿವಾಲಯ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚನೆ ನೀಡಿದೆ. ರವಿವಾರ ಸಂಜೆಯಿಂದ ನಡೆದ ಹಿಂಸಾಚಾರದಲ್ಲಿ 11 ಮಂದಿ ಜೀವ ಕಳೆದುಕೊಂಡಿದ್ದಾರೆ.

ಪಕ್ಷದ ಆರು ಕಾರ್ಯಕರ್ತರು ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ ಎಂದು ಬಿಜೆಪಿ ಹೇಳಿದ್ದರೆ, ತಮ್ಮ ಪಕ್ಷದ ನಾಲ್ವರು ಮೃತಪಟ್ಟಿದ್ದಾರೆ ಎಂದು ಟಿಎಂಸಿ ಹೇಳಿಕೊಂಡಿದೆ. ತನ್ನ ಸಾಕುನಾಯಿಯನ್ನು ಗೂಂಡಾಗಳು ಹೇಗೆ ಹತ್ಯೆ ಮಾಡಿದ್ದಾರೆ ಎಂಬ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಕಾರಣಕ್ಕಾಗಿ ಕೊಲ್ಕತ್ತಾದಲ್ಲಿ ಕಾರ್ಯಕರ್ತನೊಬ್ಬನ ಹತ್ಯೆಯಾಗಿದೆ ಎಂದು ಬಿಜೆಪಿ ಹೇಳಿದೆ. ಅಂತೆಯೇ ನಾರ್ತ್ 24 ಪರಗಣ ಜಿಲ್ಲೆಯಲ್ಲಿ ಗುಂಪಿನಿಂದ ತನ್ನ ಮಗನನ್ನು ರಕ್ಷಿಸಲು ಮುಂದಾದ ಮಹಿಳೆಯ ಹತ್ಯೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದ ಐಎಸ್‌ಐಎಫ್‌ನ ಒಬ್ಬ ಕಾರ್ಯಕರ್ತ ಹತ್ಯೆಯಾಗಿದ್ದಾನೆ ಎಂದು ಪಕ್ಷ ಹೇಳಿಕೊಂಡಿದೆ.

ಹಲವು ಜಿಲ್ಲೆಗಳಲ್ಲಿ ಹಿಂಸಾಚಾರ ಸಂಭವಿಸಿದ್ದು, ರಾಜ್ಯಪಾಲ ಜಗದೀಪ್ ಧನ್‌ಕರ್ ರಾಜ್ಯದ ಗೃಹ ಕಾರ್ಯದರ್ಶಿ, ಡಿಜಿಪಿ ಮತ್ತು ಕೊಲ್ಕತ್ತಾ ಪೊಲೀಸ್ ಆಯುಕ್ತರನ್ನು ರಾಜಭವನಕ್ಕೆ ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ. ಬಳಿಕ ಮಮತಾ ಬ್ಯಾನರ್ಜಿಯವರು ರಾಜ್ಯಪಾಲರನ್ನು ಭೇಟಿ ಮಾಡಿದ ವೇಳೆ, "ಚುನಾವಣೋತ್ತರ ಹಿಂಸಾಚಾರ, ಗಲಭೆ, ಲೂಟಿ ಮತ್ತು ಹತ್ಯೆಗಳನ್ನು ಕೊನೆಗೊಳಿಸಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು" ಎಂದು ಸೂಚಿಸಿದರು.

ಪರಿಸ್ಥಿತಿ ಅವಲೋಕನಕ್ಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಎರಡು ದಿನಗಳ ಬಂಗಾಳ ಭೇಟಿಗಾಗಿ ಮಂಗಳವಾರ ಕೊಲ್ಕತ್ತಾಗೆ ತೆರಳಲಿದ್ದಾರೆ. ಟಿಎಂಸಿ ಕಾರ್ಯಕರ್ತರ ದೌರ್ಜನ್ಯವನ್ನು ವಿರೋಧಿಸಿ ಈ ತಿಂಗಳ 5ರಂದು ದೇಶವ್ಯಾಪಿ ಧರಣಿ ನಡೆಸುವುದಾಗಿ ಅವರು ಪ್ರಕಟಿಸಿದ್ದಾರೆ.

ನಾಲ್ಕು ಸಾವಿರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಮನೆಗಳನ್ನು ರಾತ್ರೋರಾತ್ರಿ ಧ್ವಂಸ ಮಾಡಲಾಗಿದೆ. ಕನಿಷ್ಠ 100 ಅಂಗಡಿಗಳನ್ನು ಲೂಟಿ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯಾ ಆರೋಪಿಸಿದ್ದಾರೆ. ಬಿಜೆಪಿಯ ಶಾಸಕ ಬಂಕಿಮ್ ಘೋಷ್ ಮೇಲೂ ಹಲ್ಲೆ ನಡೆದಿದೆ ಎಂದು ಆಪಾದಿಸಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಮತ್ತು ಕೇಂದ್ರ ಗೃಹ ಸಚಿವರಿಗೆ ವರದಿ ನೀಡುವುದಾಗಿ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ. "ಆಡಳಿತ ವರ್ಗ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಮೌನವಾಗಿದ್ದು, ನಿಷ್ಕ್ರಿಯರಾಗಿದ್ದಾರೆ" ಎಂದು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News