ಕೊರೋನ ಸಾವು-ನೋವುಗಳು: ನಿರ್ಲಕ್ಷಿಸಲ್ಪಟ್ಟ ಮಾನಸಿಕ ಕಾರಣಗಳು

Update: 2021-05-05 06:38 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೈಹಿಕ ಆರೋಗ್ಯವನ್ನೇ ನಿರ್ಲಕ್ಷಿಸಿರುವ ದೇಶವೊಂದು ಮಾನಸಿಕ ಆರೋಗ್ಯದ ಕುರಿತಂತೆ ಯಾಕೆ ಕಾಳಜಿ ವಹಿಸಿಲ್ಲ ಎಂದು ಕೇಳುವುದು ಮೂರ್ಖತನವಾಗುತ್ತದೆ. ದೇಶಾದ್ಯಂತ ನಡೆಯುತ್ತಿರುವ ಸಾವುನೋವುಗಳಿಗೆ ಸರಕಾರ ಯಾವ ಕೀಳರಿಮೆಯೂ ಇಲ್ಲದೆ ಕೊರೋನದ ಮುದ್ರೆಯನ್ನು ಒತ್ತಿ ತನ್ನನ್ನು ರಕ್ಷಿಸಿಕೊಳ್ಳಲು ಮುಂದಾಗಿದೆ. ಆದರೆ ಕೊರೋನದಿಂದಾಗಿ ದೇಶದ ಆರೋಗ್ಯ ಕ್ಷೇತ್ರ ವಿಶ್ವದ ಮುಂದೆ ಬೆತ್ತಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಮೋದಿ ನೇತೃತ್ವದ ಸರಕಾರ ಆರೋಗ್ಯ ಕ್ಷೇತ್ರದಲ್ಲಿ ನಡೆಸಿದ ಹಸ್ತಕ್ಷೇಪ, ಸಾರ್ವಜನಿಕ ಆಸ್ಪತ್ರೆಗಳ ನಿರ್ಲಕ್ಷ, ಪತಂಜಲಿಯಂತಹ ಸ್ವಯಂಘೋಷಿತ ವೈದ್ಯಕೀಯ ಸಂಸ್ಥೆಗಳಿಗೆ, ಬಾಬಾಗಳಿಗೆ ನೀಡಿದ ಮಹತ್ವ ಇವೆಲ್ಲದರ ಪರಿಣಾಮವನ್ನು ದೇಶ ಇಂದು ಅನುಭವಿಸುತ್ತಿದೆ. ದೇಶಾದ್ಯಂತ ಕೊರೋನ ಸ್ಫೋಟಿಸಿದ ಕಾರಣದಿಂದ ಆಕ್ಸಿಜನ್ ಕೊರತೆ ಎದುರಾಗಿದೆ ಎಂದು ಸರಕಾರ ಹೇಳುತ್ತಿದೆಯಾದರೂ, ಕೊರೋನ ಆಗಮಿಸುವ ಮೊದಲೇ ದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ನೂರಾರು ಉದಾಹರಣೆಗಳಿವೆ. ಗೋರಖ್ ಪುರದಲ್ಲಿ ಮಕ್ಕಳ ಮಾರಣ ಹೋಮ ಇನ್ನೂ ಹಸಿಯಾಗಿಯೇ ಇದೆ. ಕೊರೋನವನ್ನು ಎದುರಿಸಲು ಸರಕಾರ ಸಂಪೂರ್ಣ ವಿಫಲವಾದ ಪರಿಣಾಮವಾಗಿ, ಇಂದು ನಮ್ಮ ರಾಜಕಾರಣಿಗಳು ಸ್ಮಶಾನವನ್ನೇ ಪರಿಹಾರವಾಗಿ ನೆಚ್ಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ , ಜನರು ಈ ದೇಶದಲ್ಲಿ ಎಂದೂ ಇಲ್ಲದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಇಂದು ಹೇಗೆ ಆಕ್ಸಿಜನ್‌ನ ಅಗತ್ಯ ಜನರಿಗಿದೆಯೋ ಹಾಗೆಯೇ, ಮಾನಸಿಕ ಒತ್ತಡಗಳಿಂದ ಪಾರಾಗುವುದಕ್ಕೆ ಮಾನಸಿಕ ತಜ್ಞರ ನೆರವಿನ ಅಗತ್ಯವೂ ಇದೆ. ಆದರೆ ಆರೋಗ್ಯ ಕ್ಷೇತ್ರದ ಈ ಮಗ್ಗುಲನ್ನು ಯಾರೂ ಚರ್ಚಿಸುತ್ತಲೇ ಇಲ್ಲ. ಭಾರತ ಇನ್ನೂ ಮಾನಸಿಕ ಆರೋಗ್ಯವನ್ನು ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ಆದುದರಿಂದಲೇ, ಇಲ್ಲಿ ವಾಮಾಚಾರಗಳು ಒಂದು ವೈದ್ಯಕೀಯ ಚಿಕಿತ್ಸೆಯಾಗಿ ಇನ್ನೂ ಅಸ್ತಿತ್ವದಲ್ಲಿವೆೆ. ‘ಸ್ಕಿರೆಫ್ರೇನಿಯಾ’ದಂತಹ ಕಾಯಿಲೆಗಳ ಕುರಿತಂತೆ ದೇಶದ ದೊಡ್ಡ ಸಂಖ್ಯೆಯ ಜನರಿಗೆ ಇನ್ನೂ ಅರಿವಿಲ್ಲ. ಇಲ್ಲಿ ಎಲ್ಲ ಮಾನಸಿಕ ಕಾಯಿಲೆಗಳೂ ‘ಹುಚ್ಚು’ ಎನ್ನುವ ಒಂದು ಪದದಲ್ಲಿ ವ್ಯಾಖ್ಯಾನಿಸಲ್ಪಡುತ್ತವೆ. ಆದುದರಿಂದಲೇ ದೈಹಿಕ ಆರೋಗ್ಯದ ಶುಶ್ರೂಷೆಗೆ ಆಸ್ಪತ್ರೆಗಳಿಗೆ ಮುಕ್ತವಾಗಿ ಭೇಟಿ ನೀಡಿದಂತೆ, ಮಾನಸಿಕ ಆಸ್ಪತ್ರೆಗಳಿಗೆ ಭೇಟಿ ಕೊಡಲು ಜನರು ಹಿಂಜರಿಯುತ್ತಾರೆ. ಅದೇನೋ ತಪ್ಪು ಮಾಡಿದವರಂತೆ, ಮಾನಸಿಕ ಆಸ್ಪತ್ರೆಗೆ ಕದ್ದು ಮುಚ್ಚಿ ಓಡಾಡುವವರೇ ಅಧಿಕ. ಹೇಗೆ ವಿವಿಧ ಒತ್ತಡಗಳನ್ನು ದೇಹ ತಾಳಿಕೊಳ್ಳಲಾರದೋ, ಹಾಗೆಯೇ ಮನಸ್ಸು ಕೂಡ ತಾಳಿಕೊಳ್ಳದು. ದೇಹಕ್ಕಿಂತ ಸೂಕ್ಷ್ಮವಾದುದು ಮನಸ್ಸು. ಅನೇಕ ಸಂದರ್ಭಗಳಲ್ಲಿ ದೈಹಿಕವಾಗಿ ನಾವು ಅನುಭವಿಸುವ ಹಲವು ಕಾಯಿಲೆಗಳಿಗೆ ಮನಸ್ಸೇ ಕಾರಣವಾಗಿರುತ್ತದೆ. ಜ್ವರ, ಶೀತ, ನೋವು ಹೇಗೆ ದೇಹವನ್ನು ಕಾಡಬಹುದೋ, ಹಾಗೆಯೇ ಮನಸ್ಸನ್ನು ಅಥವಾ ಮೆದುಳನ್ನೂ ಹಲವು ಒತ್ತಡಗಳು ಕಾಡಬಹುದು. ಅವುಗಳಿಗೂ ಔಷಧಿಗಳು ಕೆಲವೊಮ್ಮೆ ಅನಿವಾರ್ಯವಾಗುತ್ತವೆ. ಮಾನಸಿಕ ತಜ್ಞರ ಜೊತೆಗೆ ಕೌನ್ಸಿಲಿಂಗ್ ಮಾಡಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಬಹುಮುಖ್ಯವಾಗಿದೆ. ಆದರೆ ದುರದೃಷ್ಟವಶಾತ್ ಮಾನಸಿಕ ಆರೋಗ್ಯವನ್ನು ದೇಶ ಸಂಪೂರ್ಣ ನಿರ್ಲಕ್ಷಿಸಿದೆ. ಆದುದರಿಂದಲೇ ಭಾರತ ಇಂದು ಖಿನ್ನತೆ, ಆತ್ಮಹತ್ಯೆಯಂತಹ ರೋಗಗಳಿಗೆ ಅತಿ ವೇಗವಾಗಿ ಬಲಿಯಾಗುತ್ತಿರುವ ದೇಶವೆಂದು ಗುರುತಿಸಲ್ಪಡುತ್ತಿದೆ.

  ವಿಶ್ವಸಂಸ್ಥೆ ಹೇಳುವಂತೆ ಭಾರತದಲ್ಲಿ ದೊಡ್ಡ ಪ್ರಮಾಣದ ಮಾನಸಿಕ ತಜ್ಞರ ಕೊರತೆಯಿದೆ. ಭಾರತದಲ್ಲಿ ಒಂದು ಲಕ್ಷ ಜನರಿಗೆ ಶೇ. 0.3ರಷ್ಟು ಮಾತ್ರ ಮಾನಸಿಕ ವೈದ್ಯರಿದ್ದಾರಂತೆ. ಅವರನ್ನು ಉಪಚರಿಸುವ ದಾದಿಯರ ಸಂಖ್ಯೆ ಶೇ.0.12. ಈ ದೇಶದಲ್ಲಿ 6 ಕೋಟಿಗೂ ಅಧಿಕ ಮಂದಿ ಖಿನ್ನತೆಯ ಸಮಸ್ಯೆಯನ್ನು ಎದುರಿಸುತ್ತಿದ್ದರೆ, 4 ಕೋಟಿಗೂ ಅಧಿಕ ಜನರು ಉದ್ವೇಗದಂತಹ ಕಾಯಿಲೆಗಳಿಂದ ನರಳುತ್ತಿದ್ದಾರೆ. ಜಾಗತಿಕ ಆತ್ಮಹತ್ಯೆ ಪ್ರಕರಣದಲ್ಲಿ ಶೇ. 36.6ರಷ್ಟು ಕೊಡುಗೆ ಭಾರತದ್ದಾಗಿದೆ. ಮಾನಸಿಕ ಒತ್ತಡಗಳೇ ಬಹುತೇಕ ಆತ್ಮಹತ್ಯೆಗಳಿಗೆ ಕಾರಣ ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ. ಮಾನಸಿಕ ಆರೋಗ್ಯದ ಕಾರಣದಿಂದಾಗಿ ದೇಶವೂ ಭಾರೀ ಪ್ರಮಾಣದ ಆರ್ಥಿಕ ನಷ್ಟಗಳನ್ನು ಭವಿಷ್ಯದಲ್ಲಿ ಎದುರಿಸಬೇಕಾಗುತ್ತದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ. ಕೊರೋನವನ್ನು ನಿರ್ವಹಿಸುವ ಈ ಸಂದರ್ಭದಲ್ಲಿ ಮಾನಸಿಕ ತಜ್ಞರನ್ನು ಸಂಪೂರ್ಣವಾಗಿ ಹೊರಗಿಡಲಾಗಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ನಮ್ಮ ನಡುವೆ ಕೊರೋನ ವೈರಸ್‌ಗಿಂತ ಹೆಚ್ಚು ಹಾನಿಯನ್ನು ಎಸಗುತ್ತಿರುವುದು ಭಯ, ಆತಂಕ, ಅಭದ್ರತೆಯಂತಹ ಮಾನಸಿಕ ಅವಸ್ಥೆಗಳು. ಕೊರೋನ ಶ್ವಾಸಕೋಶಕ್ಕೆ ಹಾನಿಯನ್ನುಂಟು ಮಾಡಿದರೆ, ಈ ವೈರಸ್‌ಗಳು ನೇರವಾಗಿ ಮೆದುಳಿಗೇ ದಾಳಿ ಮಾಡುತ್ತಿವೆ ಮತ್ತು ಅದರ ಪರಿಣಾಮವನ್ನು ದೇಹ ಅನುಭವಿಸಬೇಕಾಗಿದೆ. ಆದುದರಿಂದ ಕೊರೋನ ನಿರ್ವಹಿಸಲು ಮಾನಸಿಕ ತಜ್ಞರ ಭಾಗವಹಿಸುವಿಕೆಯೂ ಅತ್ಯಗತ್ಯವಾಗಿದೆ.

 ನೋಟು ನಿಷೇಧ ಈ ದೇಶದಲ್ಲಿ ಜನರ ಮಾನಸಿಕ ಒತ್ತಡದ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯ ಪಡುತ್ತಾರೆ. ಆರ್ಥಿಕ ಹಿಂಜರಿತ, ಭವಿಷ್ಯದ ಕುರಿತ ಅಭದ್ರತೆ ಜನರನ್ನು ಆತಂಕ, ಖಿನ್ನತೆಗೀಡು ಮಾಡುತ್ತಿವೆ. ಅಂತಿಮವಾಗಿ ಇವುಗಳು ಜನರನ್ನು ಆತ್ಮಹತ್ಯೆಗಳಿಗೆ ದೂಡುತ್ತಿವೆ. ಇದೀಗ ಕೊರೋನ ಮತ್ತು ಲಾಕ್‌ಡೌನ್ ಜೊತೆ ಜೊತೆಯಾಗಿ ಜನರ ಮೇಲೆ ದಾಳಿ ಮಾಡಿವೆ. ಕೊರೋನ ದೇಹವನ್ನು ಪ್ರವೇಶಿಸುವ ಮೊದಲು ಜನರ ಮೆದುಳನ್ನು ಹೊಕ್ಕಿ ಬಿಡುತ್ತದೆ. ಕೊರೋನ ಸಾಂಕ್ರಾಮಿಕ ರೋಗವಾಗಿರುವುದರಿಂದ ಜನರಲ್ಲಿ ಗೀಳುರೋಗಗಳು ಅತಿಯಾಗಿವೆ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ. ಕೊರೋನ ಎದುರಿಸುವುದಕ್ಕೆ ಕೈತೊಳೆಯುವುದು, ಶುಚಿತ್ವ ಮೊದಲಾದವುಗಳು ಅತಿ ಅಗತ್ಯ. ಆದರೆ ಬಹುತೇಕ ಜನರು ಕೊರೋನಕ್ಕೆ ಹೆದರಿ ಪದೇ ಪದೇ ಕೈತೊಳೆಯುವುದನ್ನು ಗೀಳುರೋಗವಾಗಿಸಿಕೊಂಡಿದ್ದಾರೆ. ಅನಗತ್ಯವಾಗಿ ಪದೇ ಪದೇ ಸ್ನಾನ ಮಾಡುವುದು, ಕೈ ಮುಖಗಳನ್ನು ಐದು ನಿಮಿಷಕ್ಕೊಮ್ಮೆ ತೊಳೆದುಕೊಳ್ಳುವುದು, ಸ್ಪರ್ಶಗಳಿಗೆ ಹೆದರುವುದು, ಎಲ್ಲಿ ನೋಡಿದರಲ್ಲಿ ಕೊರೋನ ವೈರಸ್‌ಗಳನ್ನೇ ಕಾಣುವುದು ಮತ್ತು ಆತಂಕಗೊಳ್ಳುವುದು ಜನರಲ್ಲಿ ಹೆಚ್ಚುತ್ತಿವೆ. ಸಣ್ಣ ಕೆಮ್ಮು ಕಾಣಿಸಿಕೊಂಡಾಕ್ಷಣ ತನಗೆ ಕೊರೋನ ಬಂದಿರಬಹುದೇ ಎಂದು ಆಸ್ಪತ್ರೆಗಳಿಗೆ ತೆರಳುವುದು ಅಥವಾ ಯಾರಲ್ಲಾದರೂ ಸಣ್ಣ ಶೀತ ಜ್ವರ ಕಾಣಿಸಿಕೊಂಡಾಕ್ಷಣ, ಕೊರೋನ ಆಗಿರಬೇಕು ಎಂದು ಭೀತಿಗೊಂಡು ಮೂಲೆ ಸೇರುವುದು .... ಇತ್ಯಾದಿ ಪ್ರಕರಣಗಳು ಅಧಿಕವಾಗಿವೆ. ಇವುಗಳು ಅವರ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಮಾನಸಿಕ ದೌರ್ಬಲ್ಯ ಕೊರೋನ ಸೋಂಕು ಇಲ್ಲದಿದ್ದರೂ ಅವರನ್ನು ರೋಗಿಗಳಂತೆ ಬದುಕುವುದಕ್ಕೆ ಒತ್ತಾಯಿಸುತ್ತಿದೆ. ಇತ್ತ ಲಾಕ್‌ಡೌನ್ ಜನರ ಆರ್ಥಿಕ ಸ್ಥಿತಿಯನ್ನು ಸಂಪೂರ್ಣ ಚಿಂದಿಯಾಗಿಸಿದೆ. ಕೊರೋನಕ್ಕಿಂತಲೂ ಜನರು ಲಾಕ್‌ಡೌನ್‌ಗೆ ಹೆದರಿ ಬದುಕುತ್ತಿದ್ದಾರೆ. ನಿರುದ್ಯೋಗ, ಆರ್ಥಿಕ ನಷ್ಟ ಇವೆಲ್ಲದರಿಂದಾಗಿ ಅವರು ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ದೇಶಾದ್ಯಂತ ಜನರಲ್ಲಿ ಭವಿಷ್ಯದ ಕುರಿತಂತೆ ನಿರಾಶೆಗಳು ಹೆಚ್ಚುತ್ತಿವೆ ಎಂದು ಮಾನಸಿಕ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಇದರ ಪರಿಣಾಮವಾಗಿ ಆತ್ಮಹತ್ಯೆ ಸಿಡ್ರೋಮ್‌ಗಳು ಕೂಡ ಹೆಚ್ಚುತ್ತಿವೆ. ಇವರಿಗೆಲ್ಲ ವೈದ್ಯರ ಸಾಂತ್ವನದ ಅಗತ್ಯವಿದೆ. ಆದರೆ ಲಾಕ್‌ಡೌನ್‌ನ ಕಾರಣದಿಂದಾಗಿ ಅಳಿದುಳಿದ ಮಾನಸಿಕ ವೈದ್ಯರೂ ಇವರ ಕೈಗೆ ಎಟಕುತ್ತಿಲ್ಲ. ಕೊರೋನ ಮತ್ತು ಲಾಕ್‌ಡೌನ್ ಎರಡರಿಂದ ಬಾಧಿತರಾದವರು ರೋಗವನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲರಾಗುತ್ತಿರುವುದು ಇದೇ ಕಾರಣಕ್ಕೆ. ದೇಶಾದ್ಯಂತ ಹೆಚ್ಚುತ್ತಿರುವ ಸಾವುನೋವುಗಳಿಗೆೆ ಆಕ್ಸಿಜನ್ ಕೊರತೆಯಷ್ಟೇ ಅಲ್ಲ, ಮಾನಸಿಕ ತಜ್ಞರ ಸಲಹೆ, ಸಾಂತ್ವನಗಳ ಕೊರತೆಯೂ ಪ್ರಮುಖ ಕಾರಣವಾಗಿದೆ. ಆದುದರಿಂದ, ಕೊರೋನ ಮತ್ತು ಲಾಕ್‌ಡೌನ್ ಬಾಧಿತರ ಶುಶ್ರೂಷೆಗೆ ಇರುವ ಮಾನಸಿಕ ವೈದ್ಯರನ್ನು ಆಸ್ಪತ್ರೆಗಳು ಸಮರ್ಪಕವಾಗಿ ಬಳಸಿಕೊಳ್ಳುವುದು ಅತ್ಯಗತ್ಯವಾಗಿದೆ. ಆದುದರಿಂದ, ಕೊರೋನಾ ನಿರ್ವಹಿಸುವ ಎಲ್ಲ ಆಸ್ಪತ್ರೆಗಳು ಸೋಂಕಿತರಿಗೆ ಮಾನಸಿಕ ವೈದ್ಯರನ್ನು ಕಡ್ಡಾಯವಾಗಿ ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಕ್ರಮ ತೆಗೆದುಕೊಂಡರೆ, ಜನರಲ್ಲಿ ಭುಗಿಲೆದ್ದಿರುವ ಭೀತಿ, ಆತಂಕಗಳನ್ನು ಭಾರೀ ಪ್ರಮಾಣದಲ್ಲಿ ಕಡಿಮೆಗೊಳಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News