ಡಬ್ಲ್ಯುಟಿಒದಲ್ಲಿ ಭಾರತಕ್ಕೆ ಸಹಾಯ ಮಾಡುವುದು ಬೇಡ: 12 ರಿಪಬ್ಲಿಕನ್ ಸಂಸದರಿಂದ ಬೈಡನ್ ಸರಕಾರದ ಮೇಲೆ ಒತ್ತಡ

Update: 2021-05-05 19:05 GMT

ವಾಶಿಂಗ್ಟನ್, ಮೇ 5: ಕೊರೋನ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)ಯ ಕೆಲವು ನಿಯಮಗಳನ್ನು ಬದಲಾಯಿಸುವಂತೆ ಕೋರಿ ಭಾರತ ಮತ್ತು ದಕ್ಷಿಣ ಆಫ್ರಿಕ ಸಲ್ಲಿಸಿರುವ ಪ್ರಸ್ತಾವಗಳಿಗೆ ಬೆಂಬಲ ನೀಡಬಾರದು ಎಂಬುದಾಗಿ ರಿಪಬ್ಲಿಕನ್ ಪಕ್ಷದ 12 ಸಂಸದರು ಜೋ ಬೈಡನ್ ಸರಕಾರವನ್ನು ಒತ್ತಾಯಿಸಿದ್ದಾರೆ.

ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ನಿಯಮಗಳ ಕೆಲವೊಂದು ವ್ಯಾಪಾರ ಸಂಬಂಧಿ ನಿರ್ಬಂಧಗಳಲ್ಲಿ ವಿನಾಯಿತಿ ನೀಡುವಂತೆ ಈ ದೇಶಗಳು ಡಬ್ಲ್ಯುಟಿಒಗೆ ಮನವಿ ಮಾಡಿದ್ದವು.

ಬೌದ್ಧಿಕ ಆಸ್ತಿ ಹಕ್ಕುಗಳನ್ನು ಅಮೆರಿಕ ತೊರೆದರೆ ಅದು ಸಂಶೋಧನೆ ಮತ್ತು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಅಂತಿಮವಾಗಿ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆಯಲ್ಲಿ ಕಡಿತವುಂಟಾಗುತ್ತದೆ ಎಂದು 12 ಪ್ರಭಾವಿ ರಿಪಬ್ಲಿಕನ್ ಸಂಸದರು ಅಮೆರಿಕದ ವ್ಯಾಪಾರ ಪ್ರತಿನಿಧಿ ಕ್ಯಾತರೀನ್ ಟಾಯ್‌ಗೆ ಮಂಗಳವಾರ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಭಾರತ ಹಾಗೂ ದಕ್ಷಿಣ ಆಫ್ರಿಕಗಳ ನೇತೃತ್ವದಲ್ಲಿ 60 ಅಭಿವೃದ್ಧಿಶೀಲ ದೇಶಗಳು ಡಬ್ಲ್ಯುಟಿಒಗೆ ಸಲ್ಲಿಸಿರುವ ಪ್ರಸ್ತಾವಕ್ಕೆ ಪ್ರತಿಯಾಗಿ ಅವರು ಈ ವಾದ ಮಂಡಿಸಿದ್ದಾರೆ.

‘‘ಬೌದ್ಧಿಕ ಆಸ್ತಿ ಹಕ್ಕು ನಿಯಮಗಳ ಕೆಲವು ಅಂಶಗಳಿಂದ ವಿನಾಯಿತಿ ಕೋರಿ ಭಾರತ, ದಕ್ಷಿಣ ಆಫ್ರಿಕ ಮತ್ತು ಇತರ ದೇಶಗಳು ಸಲ್ಲಿಸಿರುವ ಮನವಿಯನ್ನು ವಿರೋಧಿಸುವುದನ್ನು ಅಮೆರಿಕ ಮುಂದುವರಿಸಬೇಕು’’ ಎಂದು ಅವರು ಹೇಳಿದ್ದಾರೆ.

ಪತ್ರಕ್ಕೆ ರಿಪಬ್ಲಿಕನ್ ಸಂಸದರಾದ ಜಿಮ್ ಜೋರ್ಡಾನ್, ಡ್ಯಾರೆಲ್ ಇಸಾ, ಸ್ಟೀವ್ ಚಾಬಟ್, ಲೂಯೀ ಗೋಹ್ಮರ್ಟ್, ಮ್ಯಾಟ್ ಗೇಟ್ಸ್, ಮೈಕ್ ಜಾನ್ಸನ್, ಟಾಮ್ ಟಿಫಾನಿ, ತಾಮಸ್ ಮ್ಯಾಸೀ, ಡ್ಯಾನ್ ಬಿಶಪ್, ಮಿಶೆಲ್ ಫಿಶ್ಬಾಕ್, ಸ್ಕಾಟ್ ಫಿಝರಾಲ್ಡ್ ಮತ್ತು ಕ್ಲಿಫ್ ಬೆಂಟ್ಝ್ ಸಹಿ ಹಾಕಿದ್ದಾರೆ.

ಅಮೆರಿಕ ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತಿದೆ: ಬೈಡನ್

ಕೊರೋನ ವೈರಸ್ ಎರಡನೇ ಅಲೆಯನ್ನು ಎದುರಿಸುತ್ತಿರುವ ಭಾರತಕ್ಕೆ ವಸ್ತುಗಳು ಮತ್ತು ಯಂತ್ರದ ಭಾಗಗಳನ್ನು ಕಳುಹಿಸುವ ಮೂಲಕ ಅಮೆರಿಕ ಗಣನೀಯ ಪ್ರಮಾಣದಲ್ಲಿ ಸಹಾಯ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.

ಈವರೆಗೆ, ಅಮೆರಿಕ ಅಂತರ್‌ರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (ಯುಎಸ್‌ಏಡ್)ಯ ಪ್ರಾಯೋಜಕತ್ವದಲ್ಲಿ ಸರಕುಗಳನ್ನು ಹೊತ್ತ ಆರು ವಿಮಾನಗಳು ಭಾರತಕ್ಕೆ ಹೊರಟಿವೆ. ಆರೋಗ್ಯ ಕಾಳಜಿಯ ವಸ್ತುಗಳು, ಆಮ್ಲಜನಕ ಸಿಲಿಂಡರ್‌ಗಳು, ಎನ್95 ಮಾಸ್ಕ್‌ಗಳು ಮತ್ತು ಔಷಧಿಗಳನ್ನು ಈ ವಿಮಾನಗಳು ಹೊತ್ತಿವೆ.

‘‘ನಾವು ಬ್ರೆಝಿಲ್‌ಗೆ ಸಹಾಯ ಮಾಡುತ್ತಿದ್ದೇವೆ. ನಾವು ಭಾರತಕ್ಕೆ ಗಣನೀಯ ಪ್ರಮಾಣದಲ್ಲಿ ಸಹಾಯ ಮಾಡುತ್ತಿದ್ದೇವೆ. ನಾನು ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಮಾತನಾಡಿದ್ದೇನೆ. ಅವರಿಗೆ ಈಗ ಬೇಕಾಗಿರುವುದು ವಸ್ತುಗಳು ಮತ್ತು ಲಸಿಕೆಗಳನ್ನು ಸಂಗ್ರಹಿಸಿಡುವ ಯಂತ್ರಗಳ ಬಿಡಿಭಾಗಗಳು. ನಾವು ಅವುಗಳನ್ನು ಕಳುಹಿಸುತ್ತಿದ್ದೇವೆ’’ ಎಂದು ಶ್ವೇತಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News