ಕೋವಿಡ್ ವಿರುದ್ಧ ಹೋರಾಟಕ್ಕೆ ವಿದೇಶಿ ನೆರವಿನ ಕುರಿತು ಪಾರದರ್ಶಕತೆ ಏಕಿಲ್ಲ: ರಾಹುಲ್ ಗಾಂಧಿ

Update: 2021-05-05 17:56 GMT

ಹೊಸದಿಲ್ಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಪಡೆದಿರುವ ವಿದೇಶಿ ನೆರವಿನಲ್ಲಿ "ಪಾರದರ್ಶಕತೆ" ಏಕಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಪ್ರಶ್ನೆಗಳನ್ನು ಎತ್ತಿದ್ದಾರೆ ಹಾಗೂ  ಸರ್ಕಾರದಿಂದ ಉತ್ತರಗಳನ್ನು ಕೋರಿದ್ದಾರೆ.

ಕೋವಿಡ್ ವಿದೇಶಿ ನೆರವಿನ ಬಗ್ಗೆ ಪ್ರಶ್ನೆಗಳು: ಭಾರತವು ಯಾವ ಸರಬರಾಜುಗಳನ್ನು ಪಡೆದುಕೊಂಡಿದೆ? ಅವುಗಳು ಎಲ್ಲಿವೆ? ಅದರಿಂದ ಯಾರು ಲಾಭ ಪಡೆಯುತ್ತಿದ್ದಾರೆ? ಅವುಗಳನ್ನು ರಾಜ್ಯಗಳಿಗೆ ಹೇಗೆ ಹಂಚಲಾಗುತ್ತದೆ? ಇದರಲ್ಲಿ ಏಕೆ ಪಾರದರ್ಶಕತೆ ಇಲ್ಲ? ಕೇಂದ್ರ ಸರಕಾರದಿಂದ ಇದಕ್ಕೆ ಏನಾದರೂ ಉತ್ತರ ಇದೆಯೇ? ಎಂದು  ಟ್ವೀಟ್ ನಲ್ಲಿ ರಾಹುಲ್ ಪ್ರಶ್ನಿಸಿದರು.

ವಿದೇಶದಿಂದ ಪಡೆದಿರುವ ಕೋವಿಡ್ ಪರಿಹಾರದ ಬಗ್ಗೆ ಕಾಂಗ್ರೆಸ್ ಪಾರದರ್ಶಕತೆಯನ್ನು ಬಯಸುತ್ತಿದೆ ಹಾಗೂ ಅದನ್ನು ಎಲ್ಲಿಂದ ಮತ್ತು ಹೇಗೆ ಬಳಸಲಾಗಿದೆ ಎಂಬುದರ ಕುರಿತು ಸಾರ್ವಜನಿಕ ವಿವರಗಳನ್ನು ನೀಡುವಂತೆ ಸರ್ಕಾರವನ್ನು ಕೇಳಿದೆ.

ಮತ್ತೊಂದು ಟ್ವೀಟ್ ನಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗ ನಿಭಾಯಿಸುವಲ್ಲಿ, ವ್ಯಾಕ್ಸಿನೇಷನ್ ಹಾಗೂ ಜನರಿಗೆ ಉದ್ಯೋಗವನ್ನು ಕೊಡುವುದರಲ್ಲಿ  ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

“ಲಸಿಕೆ ಇಲ್ಲ, ಉದ್ಯೋಗವೂ ಇಲ್ಲ. ಜನರು ಕೊರೋನವೈರಸ್ ನ  ತೀವ್ರತೆಯನ್ನು ಎದುರಿಸುತ್ತಿದ್ದಾರೆ. ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ”ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News