ಸೆಂಟ್ರಲ್ ವಿಸ್ತಾ ಯೋಜನೆ: ಮಧ್ಯ ಪ್ರವೇಶಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್

Update: 2021-05-07 12:28 GMT

ಹೊಸದಿಲ್ಲಿ : ರಾಜಧಾನಿ ದಿಲ್ಲಿ ಕೋವಿಡ್‍ನಿಂದ ತತ್ತರಿಸುತ್ತಿದ್ದರೂ ಕೇಂದ್ರ ಸರಕಾರ ತನ್ನ ಮಹತ್ವಾಕಾಂಕ್ಷೆಯ ಹಾಗೂ ಅಷ್ಟೇ ವಿವಾದಿತ ಸೆಂಟ್ರಲ್ ವಿಸ್ತಾ ಯೋಜನೆಯ ಕಾಮಗಾರಿಯನ್ನು   ಕೈಗೆತ್ತಿಕೊಂಡಿರುವುದನ್ನು ಪ್ರಶ್ನಿಸಿ ಹಾಗೂ ಕಾಮಗಾರಿಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅಪೀಲನ್ನು ಸುಪ್ರೀಂ ಕೋರ್ಟ್ ಇಂದು  ವಜಾಗೊಳಿಸಿದೆ. ಈ ಪ್ರಕರಣ ಈಗಾಗಲೇ ದಿಲ್ಲಿ ಹೈಕೋರ್ಟ್ ಮುಂದಿರುವುದರಿಂದ ಸೋಮವಾರ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ನ್ಯಾಯಾಲಯಕ್ಕೆ ಅಪೀಲುದಾರರು ಮನವಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಹಿಂದೆ ಅಪೀಲುದಾರರು ದಿಲ್ಲಿ ಹೈಕೋರ್ಟಿಗೆ ಮನವಿ ಸಲ್ಲಿಸಿದ್ದು ಮುಂದಿನ ವಿಚಾರಣೆಯನ್ನು ಹೈಕೋರ್ಟ್ ಮೇ 17ಕ್ಕೆ ನಿಗದಿ ಪಡಿಸಿತ್ತು.

"ಈ ಪ್ರಕರಣ ಹೈಕೋರ್ಟ್ ಮುಂದೆ ಬಾಕಿಯಿರುವುದರಿಂದ ಹಾಗೂ  ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿರುವುದನ್ನು ಈ ಅಪೀಲಿನಲ್ಲಿ ಪ್ರಶ್ನಿಸಲಾಗಿರುವುದರಿಂದ ನಾವು ಮಧ್ಯ ಪ್ರವೇಶಿಸಲು ಬಯಸುವುದಿಲ್ಲ, ಹೈಕೋರ್ಟ್ ಈ ಪ್ರಕರಣದ ಶೀಘ್ರ ವಿಚಾರಣೆ ನಡೆಸುವಂತೆ ಕೋರಿ ಸಲ್ಲಿಸಲಾಗುವ ಅಪೀಲನ್ನು ಪರಿಗಣಿಸಬಹುದು ಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.

ಸೆಂಟ್ರಲ್ ವಿಸ್ತಾ ಯೋಜನೆಗೆ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ಜನವರಿ 5ರಂದು ಹಸಿರು ನಿಶಾನೆ ನೀಡಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News