ಅಸ್ಸಾಂನಲ್ಲಿ ಮುಖ್ಯಮಂತ್ರಿ ಆಯ್ಕೆ ಕಗ್ಗಂಟು: ಸರ್ಬಾನಂದ, ಹಿಮಂತ ಶರ್ಮಾಗೆ ದಿಲ್ಲಿಗೆ ಬುಲಾವ್

Update: 2021-05-08 07:09 GMT
ಸರ್ಬಾನಂದ ಸೋನೊವಾಲ್

ಗುವಾಹಟಿ: ಅಸ್ಸಾಂನ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಉದ್ಬವಿಸಿರುವಾಗಲೇ , ಬಿಜೆಪಿ ಕೇಂದ್ರ ನಾಯಕತ್ವವು ಹಾಲಿ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹಾಗೂ  ರಾಜ್ಯದ ಅತ್ಯಂತ ಪ್ರಭಾವಶಾಲಿ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರನ್ನು ಶನಿವಾರ  ಹೊಸದಿಲ್ಲಿಗೆ ಕರೆಸಿಕೊಂಡಿದೆ.

ಕಳೆದ ತಿಂಗಳ ಚುನಾವಣೆಯ ಫಲಿತಾಂಶಗಳು ಮೇ 2 ರಂದು ಪ್ರಕಟವಾಗಿ ಬಿಜೆಪಿ ನಿರ್ಣಾಯಕ ಗೆಲುವು ಸಾಧಿಸಿದ್ದರೂ, ಅಸ್ಸಾಂನಲ್ಲಿ ಇನ್ನೂ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿಲ್ಲ. ಪಶ್ಚಿಮಬಂಗಾಳ, ತಮಿಳುನಾಡಿನಲ್ಲಿ ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸಿದ್ದಾರೆ. 

ಸೋನೊವಾಲ್ ಮತ್ತು ಶರ್ಮಾ ಇಬ್ಬರಿಗೂ ಇಂದು ಬೆಳಿಗ್ಗೆ 10 ಗಂಟೆಯೊಳಗೆ ದಿಲ್ಲಿಯನ್ನು ತಲುಪಲು ತಿಳಿಸಲಾಗಿದೆ. ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಪಕ್ಷವು ಇಬ್ಬರೂ ನಾಯಕರೊಂದಿಗೆ ಮುಖಾಮುಖಿಯಾಗಿ ಚರ್ಚಿಸಲು ಬಯಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಅಸ್ಸಾಂ ಬಿಜೆಪಿಯಲ್ಲಿ ಯಾವುದೇ ರೀತಿಯ ಬಣ ರಾಜಕೀಯ ತಪ್ಪಿಸಲು ಹೀಗೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಅಸ್ಸಾಂನ ಸ್ಥಳೀಯ ಸೋನೊವಾಲ್-ಕಾಚಾರಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಸೋನೊವಾಲ್ ಹಾಗೂ  ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಂಚಾಲಕ  ಶರ್ಮಾ ಅವರು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ  ಮುಖಂಡ  ಬಿ.ಎಲ್.ಸಂತೋಷ್ ಇತರರನ್ನು  ಶನಿವಾರ, ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಸ್ಸಾಂನಲ್ಲಿ ಮಾರ್ಚ್-ಎಪ್ರಿಲ್ ಚುನಾವಣೆಗೆ ಮೊದಲು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News