ಸರಕಾರದ ವೈಫಲ್ಯ ಮನಗಂಡು ಆಮ್ಲಜನಕ ವಿತರಣೆ ಪರಿಶೀಲನೆಗೆ ರಾಷ್ಟ್ರೀಯ ಕಾರ್ಯಪಡೆ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್

Update: 2021-05-08 15:25 GMT

ಹೊಸದಿಲ್ಲಿ,ಮೇ 8: ಕೋವಿಡ್ ವಿರುದ್ಧ ಹೋರಾಟದ ಭಾಗವಾಗಿ ದೇಶಾದ್ಯಂತ ವೈದ್ಯಕೀಯ ಆಕ್ಸಿಜನನ್ನು ವೈಜ್ಞಾನಿಕ,ವೈಚಾರಿಕ ಹಾಗೂ ಸಮಾನತೆಯ ಆಧಾರದಲ್ಲಿ ವಿತರಣೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲು ಸುಪ್ರೀಂಕೋರ್ಟ್ 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ಶುಕ್ರವಾರ ರಚಿಸಿದೆ. ಕೋವಿಡ್-19 ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳ ಲಭ್ಯತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದಂತಹ ಕ್ರಮಗಳನ್ನು ಕೂಡಾ ಕಾರ್ಯಪಡೆಯು ಸೂಚಿಸಲಿದೆ. 

ಭವಿಷ್ಯದಲ್ಲಿ ವೈದ್ಯಕೀಯ ತುರ್ತುಸ್ಥಿತಿಯ ಸನ್ನಿವೇಶಗಳಲ್ಲಿ ಪೂರ್ವಸಿದ್ಧತೆಯನ್ನು ಖಾತರಿಪಡಿಸಲು ಪರಿಹಾರಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳಲು ಕೂಡಾ ಅದು ರಾಜ್ಯಗಳಿಗೆ ನೆರವು ನೀಡಲಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಹಾಗೂ ಎಂ.ಆರ್.ಶಾ ನೇತೃತ್ವದ ದ್ವಿಸದಸ್ಯ ನ್ಯಾಯಪೀಠವು ನೂತನ ಸಮಿತಿಯನ್ನು ರಚಿಸಿ, ಆದೇಶ ಹೊರಡಿಸಿದೆ. ನೂತನ ಕಾರ್ಯಪಡೆಯು ಒಂದು ವಾರದೊಳಗೆ ಕಾರ್ಯಾರಂಭಿಸಲಿದೆ.
  
‘‘ಕೊರೋನಾ ಸಾಂಕ್ರಾಮಿದ ವಿರುದ್ಧ ವೈಜ್ಞಾನಿಕ ಹಾಗೂ ವಿಶೇಷ ಜ್ಞಾನ ಆಧಾರಿತವಾದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ರೂಪಿಸುವುದೇ ಈ ಕಾರ್ಯಪಡೆಯ ರಚನೆಯ ಹಿಂದಿರುವ ತಾರ್ಕಿಕತೆಯಾಗಿದೆ. ದೇಶದ ಪ್ರಮುಖ ತಜ್ಞರು ಈ ಕಾರ್ಯಪಡೆಯೊಂದಿಗೆ ಸದಸ್ಯರಾಗಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಕೈಜೋಡಿಸುವರೆಂದು ನಾವು ನಿರೀಕ್ಷಿಸುತ್ತೇವೆ. ಇದರಿದಾಗಿ ಹಿಂದೆಂದೂ ಕಂಡಿರದಂತಹ ಮಾನವಕುಲದ ಈ ಬಿಕ್ಕಟ್ಟನ್ನು ನಿಭಾಯಿಸಲು ವೈಜ್ಞಾನಿಕ ಕಾರ್ಯತಂತ್ರವನ್ನು ರೂಪಿಸಲು ಹಾಗೂ ಚಿಂತನೆಗಳ ಸಮ್ಮಿಲನಕ್ಕೆ ಅವಕಾಶ ಲಭಿಸಲಿದೆ ’’ ಎಂದು ನ್ಯಾಯಾಲಯವು ತನ್ನ ಅಂತಿಮ ಆದೇಶದಲ್ಲಿ ತಿಳಿಸಿದೆ. ಕಾರ್ಯಪಡೆಯು ತನ್ನ ವರದಿಗಳನ್ನು ಕೇಂದ್ರ ಹಾಗೂ ನ್ಯಾಯಾಲಯಕ್ಕೆ ಸಲ್ಲಿಸಲಿದೆ.
     
12 ಮಂದಿ ಸದಸ್ಯರ ಸಮಿತಿಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದ ಅಧ್ಯಕ್ಷ ಹಾಗೂ ಕಾರ್ಯಕಾರಿ ನಿರ್ದೇಶಕ ಡಾ.ದೇವಿಪ್ರಸಾದ್ ಶೆಟ್ಟಿ, ಪಶ್ಚಿಮಬಂಗಾಳ ಆರೋಗ್ಯ ವಿಜ್ಞಾನ ವಿವಿಯ ಮಾಜಿ ಕುಲಪತಿ ಡಾ.ಭಾಬತೋಶ್ ಬಿಸ್ವಾಸ್,ಗುರ್ಗಾಂವ್ನ ಮೇದಾಂತ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್ಸ್ಟಿಟ್ಯೂಟ್ನ ಆಡಳಿತ ನಿರ್ದೇಶಕ ಹಾಗೂ ಚೇರ್ಮನ್ ಡಾ.ನರೇಶ್ ಟ್ರೆಹಾನ್ ಕೂಡಾ ಇದ್ದಾರೆ. ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹಾಗೂ ಕೇಂದ್ರ ಸಂಪುಟ ಕಾರ್ಯದರ್ಶಿಯವರನ್ನು ಸಮಿತಿಯ ಸದಸ್ಯರಾಗಿ ಕೇಂದ್ರ ಸರಕಾರವು ಆಯ್ಕೆ ಮಾಡಿದೆ. ಸಂಪುಟ ಕಾರ್ಯದರ್ಶಿಯವರು ಸಮಿತಿಯ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
  
ಶುಕ್ರವಾರ ಕಾರ್ಯಪಡೆಯ ಸ್ಥಾಪನೆಗೆ ಆದೇಶಿಸಿದ ನ್ಯಾಯಾಲಯವು, ವಿವಿಧ ರಾಜ್ಯಗಳಿಗೆ ವೈದ್ಯಕೀಯ ಆಮ್ಲಜನಕದ ವಿತರಣೆ ವ್ಯವಸ್ಥೆಯಲ್ಲಿ ಸುಧಾರಣೆ ಮಾಡುವಂತೆಯೂ ನ್ಯಾಯಾಲಯ ಕರೆ ನೀಡಿದೆ. ಆ್ಯಂಬುಲೆನ್ಸ್ ವ್ಯವಸ್ಥೆ, ಕೆಳಸ್ತರದ ಕೋವಿಡ್ ರೋಗಿಗಳ ಪಾಲನಾ ಕೇಂದ್ರಗಳು ಹಾಗೂ ಮನೆಯಲ್ಲಿ ಕ್ವಾರಂಟೈನ್ನಲ್ಲಿರುವ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲು ಕೇಂದ್ರ ಸರಕಾರ ವಿಫಲವಾಗಿದೆಯೆಂದು ನ್ಯಾಯಾಲಯ ತಿಳಿಸಿದೆ.

ಆಕ್ಸಿಜನ್ ಕೊರತೆಯ ಸಮಸ್ಯೆಯನ್ನು ಅಖಿಲ ಭಾರತ ಮಟ್ಟದಲ್ಲಿ ಪರಾಮರ್ಶಿಸಬೇಕಾದ ಅಗತ್ಯವಿದೆ. ವೈದ್ಯಕೀಯ ಆಮ್ಲಜನಕದ ಲೆಕ್ಕಪರಿಶೋಧನೆಯು ಅತ್ಯವಶ್ಯಕವಾಗಿದೆ. ಒಮ್ಮೆ ಆಕ್ಸಿಜನ್ನ ದಾಸ್ತಾನು ಬಿಡುಗಡೆಯಾದ ಬಳಿಕ ಅವುಗಳ ಸಮರ್ಪಕ ಬಳಕೆಯ ಹೊಣೆಗಾರಿಕೆ ಯಾರದು? ಎಂದು ನ್ಯಾಯಾಲಯ ಪ್ರಶ್ನಿಸಿತು.

ಕೇಂದ್ರ ಸರಕಾರವು ಕೋವಿಡ್-19 ಸಾಂಕ್ರಾಮಿಕದ ಸಂಭಾವ್ಯ ಮೂರನೆ ಅಲೆಯನ್ನ ಎದುರಿಸಲು ಕೇಂದ್ರ ಸರಕಾರವು ಸಿದ್ಧತೆಯನ್ನು ನಡೆಸುತ್ತಿದೆಯೇ ಎಂಬುದನ್ನು ತಾನು ತಿಳಿಯಬಯಸುವುದಾಗಿಯೂ ನ್ಯಾಯಾಲಯ ಈ ಸಂದರ್ಭದಲ್ಲಿ ತಿಳಿಸಿತು. ಒಂದು ವೇಳೆ ದೇಶದಲ್ಲಿ ಮೂರನೆ ಅಲೆ ಅಪ್ಪಳಿಸಿದಲ್ಲಿ ಆಮ್ಲಜನಕ, ಔಷಧಿ ಹಾಗೂ ಆಸ್ಪತ್ರೆ ಹಾಸಿಗೆಗಳ ಕೊರತೆಯು ಇನ್ನಷ್ಟು ಬಿಗಡಾಯಿಸಲಿದೆ ಎಂದು ಅದು ಅಭಿಪ್ರಾಯಿಸಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News