ಕೋವಿಡ್ ಕರ್ತವ್ಯದಲ್ಲಿದ್ದ ಸರಕಾರಿ ಅಧಿಕಾರಿಗಳನ್ನು ಎಳೆದಾಡಿದ ಪ್ರಕರಣ: ಪ್ರೊಬೆಷನರಿ ಐಎಎಸ್ ಅಧಿಕಾರಿಯಿಂದ ದೂರು ದಾಖಲು

Update: 2021-05-08 18:37 GMT

ಬೆಂಗಳೂರು: ಕೋವಿಡ್ ವಾರ್ ರೂಂಗೆ ತೆರಳಿ ಐಎಎಸ್ ಅಧಿಕಾರಿ ಸಹಿತ ಸಿಬ್ಬಂದಿಗಳ ಮೇಲೆ ಹಲ್ಲೆ ಯತ್ನ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ 50ರಿಂದ 60 ಜನರ ಗುಂಪಿನ ವಿರುದ್ಧ ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಗೆ ಸಂಬಂಂಧಿಸಿದಂತೆ ಪ್ರೊಬೆಷನರಿ ಐಎಎಸ್ ಅಧಿಕಾರಿ ಯಶವಂತ್ ಗುರುಕಾರ್ ಅವರು ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಎ. 30ರಂದು ಬೆಳಗ್ಗೆ 11ರಿಂದ 12 ಗಂಟೆ ಸಮಯದಲ್ಲಿ ಬೊಮ್ಮನಹಳ್ಳಿ ವಲಯ ಕೋವಿಡ್ ವಾರ್ ರೂಮ್ ಉಸ್ತುವಾರಿ ನಿರ್ವಹಣಾ ಅಧಿಕಾರಿಯಾಗಿರುವ ಯಶವಂತ ಗುರುಕಾರ್ ಹೆಚ್.ಎಸ್.ಆರ್. ಲೇಔಟ್ ಬಿಡಿಎ ಕಾಂಪ್ಲೆಕ್ಸ್ ನಲ್ಲಿರುವ ಕೋವಿಡ್ ವಾರ್ ರೂಮ್ ಗೆ ಭೇಟಿ ನೀಡಿದ್ದ ವೇಳೆ ಕೋವಿಡ್ ರೋಗಿಗಳಿಗೆ ಬೆಡ್ ಬುಕ್ಕಿಂಗ್ ಮಾಡುವ ವಿಚಾರವಾಗಿ ವಾರ್ ರೂಮ್ ಬಳಿ ಸುಮಾರು 50ರಿಂದ 60 ಅಪರಿಚಿತರು ಪ್ರತಿಭಟನೆ ಮಾಡಿ ಕೋವಿಡ್ ವಾರ್ ರೂಮ್ ಗೆ ಮುತ್ತಿಗೆ ಹಾಕಿ ಜಂಟಿ ಆಯುಕ್ತ ರಾಮಕೃಷ್ಣ ಅವರೊಂದಿಗೆ ಅನುಚಿತವಾಗಿ ವರ್ತಿಸಿದರು. ಯಶವಂತ್ ಹಾಗೂ ರಾಮಕೃಷ್ಣ ಅವರನ್ನು ಎಳೆದಾಡಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪ್ರೊಬೆಷನರಿ ಐಎಎಸ್ ಅಧಿಕಾರಿ ಯಶವಂತ್ ಗುರುಕಾರ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬೆಡ್‌ ಬ್ಲಾಕಿಂಗ್‌ ಹಗರಣದಲ್ಲಿ ಹೆಸರಿಸಲ್ಪಟ್ಟಿರುವ ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಬೆಂಬಲಿಗರು ಕೆಲ ದಿನಗಳ ಹಿಂದೆ ಬೊಮ್ಮನಹಳ್ಳಿ ಝೋನ್‌ ಕೋವಿಡ್‌ ವಾರ್‌ ರೂಮ್‌ ಗೆ ತೆರಳಿ ಹಲ್ಲೆ ಯತ್ನ ನಡೆಸಿ, ಬೆದರಿಕೆ ಹಾಕಿದ್ದ ಪ್ರಕರಣ ನಡೆದಿತ್ತು. ಈ ಕುರಿತಾದಂತೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News