ಮದುವೆಗಳನ್ನು ಮನೆಗಳಲ್ಲಿ ಮಾತ್ರ ನಡೆಸುವಂತೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶ

Update: 2021-05-09 11:50 GMT

ಬೆಂಗಳೂರು, ಮೇ 9: ಕೊರೋನ ಸೋಂಕು ಹರಡುವುದನ್ನು ನಿಯಂತ್ರಿಸುವ ದೃಷ್ಟಿಯಿಂದ ನಾಳೆ(ಮೇ 10)ಯಿಂದ ರಾಜ್ಯಾದ್ಯಂತ ಹೇರಿರುವ ಲಾಕ್‍ಡೌನ್ ಹಿನ್ನೆಲೆಯಲ್ಲಿ ಈಗಾಗಲೇ ನಿಗದಿಯಾದ ಮದುವೆಗಳನ್ನು ಮನೆಗಳಲ್ಲಿ ಮಾತ್ರ ನಡೆಸುವಂತೆ ನಿರ್ಬಂಧ ಹೇರಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಇಂದಿಲ್ಲಿ ಆದೇಶ ಹೊರಡಿಸಿದ್ದಾರೆ.

ಮದುವೆ ಸಮಾರಂಭಗಳಿಗೆ ಹೆಣ್ಣು-ಗಂಡಿನ ಕಡೆಯವರು ಸೇರಿದಂತೆ ಕೇವಲ 40 ಜನರಷ್ಟೆ ಭಾಗವಹಿಸಬೇಕು. ಕಲ್ಯಾಣ ಮಂಟಪ ಅಥವಾ ಸಭಾಂಗಣಗಳಲ್ಲಿ ಮದುವೆ ಸಮಾರಂಭವನ್ನು ನಡೆಸುವಂತಿಲ್ಲ ಎಂದು ಆದೇಶದಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಜಂಟಿ ಆಯುಕ್ತರಿಂದ ಹಾಗೂ ಜಿಲ್ಲೆಗಳಿಂದ ಆಯಾ ವ್ಯಾಪ್ತಿಯ ತಹಶಿಲ್ದಾರರುಗಳಿಂದ ಮದುವೆ ಆಮಂತ್ರಣ ಪತ್ರಿಕೆ ಜೊತೆಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು.

ಮದುವೆ ಅರ್ಜಿಯನ್ನು ಆಧರಿಸಿ 40 ಪಾಸ್‍ಗಳನ್ನು ವಿತರಿಸಲಾಗುವುದು. ಪಾಸ್ ಇದ್ದವರಿಗೆ ಮಾತ್ರ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದು. ಒಂದು ವೇಳೆ ಮೇಲ್ಕಂಡ ನಿಯಮಗಳನ್ನು ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಮಂಜುನಾಥ್ ಪ್ರಸಾದ್ ಹೊರಡಿಸಿರುವ ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News