ಇಸ್ರೋದಿಂದ ಮೂರು ಅಗ್ಗದ ವೆಂಟಿಲೇಟರ್ ಗಳು ಮತ್ತು ಆಮ್ಲಜನಕ ಸಾಂದ್ರಕ ಅಭಿವೃದ್ಧಿ

Update: 2021-05-09 16:21 GMT

ತಿರುವನಂತಪುರ, ಮೇ 9: ಆಮ್ಲಜನಕ ಮತ್ತು ವೆಂಟಿಲೇಟರ್ಗಳ ಕೊರತೆಯಿಂದ ದೇಶಾದ್ಯಂತ ಹಲವಾರು ಕೋವಿಡ್-19 ರೋಗಿಗಳು ಸಾವನ್ನಪ್ಪುತ್ತಿರುವ ಈ ಸಂದರ್ಭದಲ್ಲಿ ಇಲ್ಲಿಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಕ್ರಮ ಸಾರಾಭಾಯಿ ಅಂತರಿಕ್ಷ ಕೇಂದ್ರ (ವಿಎಸ್ಎಸ್ಸಿ)ವು ಮೂರು ವಿವಿಧ ಮಾದರಿಗಳ ವೆಂಟಿಲೇಟರ್ಗಳನ್ನು ಮತ್ತು ಆಮ್ಲಜನಕ ಸಾಂದ್ರಕವನ್ನು ಅಭಿವೃದ್ಧಿಗೊಳಿಸಿರುವುದಾಗಿ ರವಿವಾರ ತಿಳಿಸಿದೆ.

‌ಈ ವೆಂಟಿಲೇಟರ್ಗಳು ಮತ್ತು ಆಮ್ಲಜನಕ ಸಾಂದ್ರಕದ ವಾಣಿಜ್ಯ ಉತ್ಪಾದನೆಗಾಗಿ ಈ ತಿಂಗಳಲ್ಲಿಯೇ ತಂತ್ರಜ್ಞಾನವನ್ನು ವರ್ಗಾಯಿಸಲಾಗುವುದು ಎಂದು ವಿಎಸ್ಎಸ್ಸಿ ನಿರ್ದೇಶಕ ಎಸ್.ಸೋಮನಾಥ ಅವರು ತಿಳಿಸಿದರು.

ಇಸ್ರೋ ಅಭಿವೃದ್ಧಿಗೊಳಿಸಿರುವ ವೆಂಟಿಲೇಟರ್ಗಳಿಗೆ ಸುಮಾರು ಒಂದು ಲಕ್ಷ ರೂ.ಬೆಲೆ ನಿಗದಿಯಾಗುವ ಸಾಧ್ಯತೆಯಿದ್ದು,ಹಾಲಿ ಐದು ಲಕ್ಷ ರೂ.ಬೆಲೆಯಿರುವ ಮಿನಿ ಸಾಂಪ್ರದಾಯಿಕ ವೆಂಟಿಲೇಟರ್ಗಳಿಗೆ ಹೋಲಿಸಿದರೆ ಮಿತವ್ಯಯಿ ಮತ್ತು ನಿರ್ವಹಿಸಲು ಸುಲಭವಾಗಿವೆ.
 
ಈ ವೆಂಟಿಲೇಟರ್ಗಳ ವಿನ್ಯಾಸ ಮತ್ತು ವೈಶಿಷ್ಟಗಳನ್ನು ಅವಲಂಬಿಸಿ ಅವುಗಳನ್ನು ಪ್ರಾಣ,ವಾಯು ಮತ್ತು ಸ್ವಸ್ಥ ಎಂದು ಹೆಸರಿಸಲಾಗಿದೆ. ಎಲ್ಲ ಮೂರೂ ವೆಂಟಿಲೇಟರ್ಗಳು ಬಳಕೆದಾರ ಸ್ನೇಹಿಯಾಗಿದ್ದು,ಸಂಪೂರ್ಣ ಸ್ವಯಂಚಾಲಿತವಾಗಿವೆ,ಟಚ್ ಸ್ಕ್ರೀನ ಸೌಲಭ್ಯಗಳನ್ನು ಹೊಂದಿದ್ದು ಎಲ್ಲ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿವೆ. 

ವೈದ್ಯರು ಮತ್ತು ತಜ್ಞರು ಇವುಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸಿದ್ದಾರೆ ಮತ್ತು ಅಂತರಾಷ್ಟ್ರೀಯ ಮಾನದಂಡಗಳನ್ನು ಪಾಲಿಸಿವೆ ಎಂದು ದೃಢಪಡಿಸಿದ್ದಾರೆ ಎಂದು ತಿಳಿಸಿದ ಸೋಮನಾಥ,ಮೊದಲ ಅಲೆಯ ಸಂದರ್ಭದಲ್ಲಿ 2020 ಮಾರ್ಚ್ನಲ್ಲಿಯೇ ವಿಎಸ್ಎಸ್ಸಿ ಈ ವೆಂಟಿಲೇಟರ್ಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಆದರೆ ವರ್ಷಾಂತ್ಯದ ವೇಳೆಗೆ ಸಾಂಕ್ರಾಮಿಕದ ಭೀತಿ ಕಡಿಮೆಯಾಗಿದ್ದರಿಂದ ಕಾರ್ಯವು ನಿಧಾನಗೊಂಡಿತ್ತು. ಎರಡನೇ ಅಲೆಯ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯವನ್ನು ಚುರುಕುಗೊಳಿಸುವಂತೆ ಸಂಸ್ಥೆಗೆ ಸೂಚಿಸಲಾಗಿತ್ತು ಎಂದರು.
 
‘ಪ್ರಾಣ’ವೆಂಟಿಲೇಟರ್ ಅಂಬು ಬ್ಯಾಗ್ನ ಸ್ವಯಂಚಾಲಿತ ಒತ್ತಡದ ಮೂಲಕ ರೋಗಿಯ ಉಸಿರಾಟಕ್ಕೆ ಅನುಕೂಲವನ್ನು ಕಲ್ಪಿಸುತ್ತದೆ,‘ಸ್ವಸ್ಥ’ ವಿದ್ಯುತ್ ಶಕ್ತಿಯ ಅಗತ್ಯವಿಲ್ಲದೆ ಕಾರ್ಯ ನಿರ್ವಹಿಸುತ್ತದೆ ಮತ್ತು ‘ವಾಯು’ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಬೆಲೆಯ ವೆಂಟಿಲೇಟರ್ಗಳಿಗೆ ಸಮನಾದ ಅಗ್ಗದ ವೆಂಟಿಲೇಟರ್ ಆಗಿದೆ. ವೈದ್ಯಕೀಯ ವಾಯು/ಆಮ್ಲಜನಕ ಅಥವಾ ವಾತಾವರಣದಲ್ಲಿಯ ವಾಯುವಿನಿಂದ ಕಾರ್ಯ ನಿರ್ವಹಿಸುವಂತೆ ಇವುಗಳನ್ನು ರೂಪಿಲಾಗಿದೆ ಎಂದು ಅವರು ತಿಳಿಸಿದರು.

ಸುಲಭವಾಗಿ ಸಾಗಿಸಬಹುದಾದ ‘ಶ್ವಾಸ’ ಹೆಸರಿನ ವೈದ್ಯಕೀಯ ಆಮ್ಲಜನಕ ಸಾಂದ್ರಕವನ್ನೂ ವಿಎಸ್ಎಸ್ಸಿ ಅಭಿವೃದ್ಧಿಗೊಳಿಸಿದೆ. ಇದು ಪ್ರತಿ ನಿಮಿಷಕ್ಕೆ 10 ಲೀ.ಸಂವರ್ಧಿತ ಆಮ್ಲಜನಕವನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದ್ದು,ಏಕಕಾಲಕ್ಕೆ ಇಬ್ಬರು ರೋಗಿಗಳಿಗೆ ಬಳಸಬಹುದಾಗಿದೆ. ಇದು ಪ್ರೆಷರ್ ಸ್ವಿಂಗ್ ಅಡ್ಸಾರ್ಪ್ಶನ್(ಪಿಎಸ್ಎ) ಮೂಲಕ ವಾತಾವರಣದಲ್ಲಿಯ ನೈಟ್ರೋಜನ್ ಅನಿಲವನ್ನು ಪ್ರತ್ಯೇಕಗೊಳಿಸುವ ಮೂಲಕ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಸೋಮನಾಥ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News