ಕಣ್ಮರೆಯಾದ ಕೆಂಪು ಶಾಲಿನ ಧೀಮಂತ ನಾಯಕ

Update: 2021-05-11 07:22 GMT

ಅಷ್ಟೇನು ಎತ್ತರವಲ್ಲದ ಗಟ್ಟಿಮಸ್ತಾದ ಆಳು. ಬಿಳಿ ಪೈಜಾಮ, ಅದೇ ಬಿಳಿಬಣ್ಣದ ಜುಬ್ಬಾ. ಬಾಚಣಿಗೆಗೆ ಸಾಲದ ತಲೆಗೂದಲು. ಆದರೆ ತಲೆತುಂಬಾ ಗಟ್ಟಿ ಹೋರಾಟದ ಜಗಜಟ್ಟಿ ಕನಸುಗಳು. ಯಾವತ್ತೂ ಎಡ ಭುಜದ ಮೇಲೆ ಕೆಂಪುಶಾಲು. ಕೆಂಪುಶಾಲು ಇಲ್ಲದ ಅವರನ್ನು ನೋಡಿದ ನೆನಪು ನನಗಂತೂ ಇಲ್ಲವೇ ಇಲ್ಲ. ಮನೆಯಲ್ಲಿದ್ದಾಗ ಹತ್ತಿಅರಳೆಯ ಒಳ ಕಿಸೆಯ ಹೊಲಿಗೆ ಮಾಡಿದ ದೇಸೀ ಬನಿಯನ್. ನಿಸ್ಸಂದೇಹವಾಗಿ ಅವರು ದಾವಣಗೆರೆಯ ಕಾಂ. ಎಚ್.ಕೆ. ರಾಮಚಂದ್ರಪ್ಪ. ಅವರನ್ನು ಯಾರೊಬ್ಬರೂ ರಾಮಚಂದ್ರಪ್ಪ ಅಂತ ಕರೆದುದನ್ನು ನಾನಂತೂ ಕೇಳಿಲ್ಲ. ಅವರು ಎಚ್. ಕೆ. ಆರ್. ಎಂತಲೇ ಹೆಸರುವಾಸಿ. ಓದು, ಬರಹ, ನಾಟಕ, ಸಿನೆಮಾಕ್ಕಿಂತ ಅವರಿಗೆ ಕೂಲಿ ಕಾರ್ಮಿಕ ಬದುಕು ಕಲಿಸಿದ ಪಾಠ ದೊಡ್ಡದು. ಅವರು ಬದುಕಿರುವಾಗಲೇ ದಾವಣಗೆರೆಯಲ್ಲಿ ಎಚ್.ಕೆ.ಆರ್. ಹೆಸರಿನ ಶ್ರಮಜೀವಿಗಳ ನಗರವೂ ನಿರ್ಮಾಣಗೊಂಡು ಬಹಳ ವರ್ಷಗಳೇ ಆಗಿವೆ. ಬಹುಪಾಲು ದುಡಿಯುವ ವರ್ಗಗಳ, ಎಲ್ಲೆಲ್ಲಿಂದಲೋ ಗುಳೇಬಂದ ಕಡು ಬಡವರ ಓಣಿ ಅದು.

ತಳಸಮುದಾಯದ ಬೇಡ ವಾಲ್ಮೀಕಿ ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ಹುಚ್ಚಂಗಿ ದುರ್ಗದ ಕೆಂಚಪ್ಪನ ಮಗ ರಾಮಚಂದ್ರಪ್ಪ, ಇದು ಎಚ್.ಕೆ.ಆರ್. ಪೂರ್ಣ ಹೆಸರು. ಗ್ರಾಮ್ಯಜನ್ಯ ಜೀವ. ಮಹಾನ್ ಧೈರ್ಯಶಾಲಿ. ಜೀವದುಸಿರಿನ ಕಡೇ ಕ್ಷಣದವರೆಗೂ ಘನತೆ ಮತ್ತು ಗಂಭೀರ ವ್ಯಕ್ತಿತ್ವದಿಂದ ಬಾಳಿ ಬದುಕಿದವರು. ಬೂಟಾಟಿಕೆಗೆ ಎಳ್ಳರ್ಧದಷ್ಟೂ ಇಂಬಿರಲಿಲ್ಲ. ಸಿರಿಯ ಗರ ಮೆರೆಯುವ ಕುಬೇರರ ಬಾಡಿಗೆ ಪುಂಡ ಪೈಲ್ವಾನರನ್ನು ಖೆಡ್ಡಾಕ್ಕೆ ಕೆಡಹುವ ಡಾವು ಪೇಚುಗಳು ಅವರಿಗೆ ಪೊಗದಸ್ತಾಗಿ ತಿಳಿದಿತ್ತು.

ಎಷ್ಟಾದರೂ ಅವರು ಪಂಪಾಪತಿಯವರ ಗರಡಿಯಲ್ಲಿ ಸಾಮು ತೆಗೆದು ಪಕ್ಕಾ ಪಳಗಿದ ಹೋರಾಟದ ಪಟು. ಹೋರಾಟದ ಪ್ರತಿಫಲವಾಗಿ ಎಂಬಂತೆ ಹದಿನಾಲ್ಕು ವರ್ಷಗಳ ಕಾಲ ಜೈಲುವಾಸ. ನಿಜವೆಂದರೆ ಪ್ರಸಂಗ ಬಂದರೆ ಎದುರಾಳಿಗೆ ಸೆಡ್ಡು ಹೊಡೆದು ತೋಳು, ತೊಡೆ ತಟ್ಟಿ ಕುಸ್ತಿ ಒಗೆಯುವ ತಾಕತ್ತು. ಅಂತಹವರು ಕೊರೋನದಿಂದ ತೀರಿಹೋದರು. ಸಾಮಾಜಿಕ ಜಾಲತಾಣಗಳು ಕೆಲವೇ ಕ್ಷಣಗಳಲ್ಲಿ ‘ಕಳಚಿ ಬಿದ್ದ ಕಮ್ಯುನಿಸ್ಟ್ ಹೋರಾಟದ ಕೊನೆಯ ಕೊಂಡಿ’ ಎಂದೇ ಬಣ್ಣಿಸಿದವು. ಅದು ದಿಟವೂ ಹೌದು. ಅವರೊಬ್ಬ ಜವಾರೀ ಹೋರಾಟಗಾರ.

ಅವರ ಪ್ರತಿಭಟನಾ ಪ್ರಕ್ರಿಯೆ ನೆಲಮೂಲ ಕಸುವುಗಳನ್ನು ಮೈಗೂಡಿಸಿಕೊಂಡಿತ್ತು. ಆಡಂಬರ, ಬಡಿವಾರ, ಆಲಂಕಾರಿಕ ಮೆರುಗು ಇರುತ್ತಿರಲಿಲ್ಲ. ಯಾವತ್ತೂ ಕೆದರಿ ಜಗಳ ಕಾಯುವ ಹೋರಾಟ ಅವರದಲ್ಲ. ಅದೇನಿದ್ದರೂ ಶೋಷಣೆಯ ಬೇರು, ನರನಾಡಿಗಳ ಅರಿವಿಗನುಗುಣದ ಪ್ರತಿಭಟನೆಯ ರೂಪ ನಿರೂಪಿಸುವಲ್ಲಿ ನಿಷ್ಣಾತ. ಪಂಪಾಪತಿಯವರ ತರುವಾಯ ಕಳೆದೆರಡು ದಶಕಗಳಲ್ಲಿ ದಾವಣಗೆರೆಯ ಭಾರತ ಕಮ್ಯುನಿಸ್ಟ್ ಪಕ್ಷ ಅಕ್ಷರಶಃ ನೆಲಕಚ್ಚಿ ಹೋಗಿತ್ತು. ಕೆಂಪು ಬನಿಯನ್, ಕೆಂಬಾವುಟ, ಕೆಂಗುಲಾಬಿಗಳ ದಾವಣಗೆರೆ ನೆಲ ಕೇಸರಿಮಯವಾಗಿ ಎರಡು ದಶಕಗಳ ಮೇಲಾಗಿತ್ತು. ಆದರೆ ಎಚ್.ಕೆ.ಆರ್. ಎಡಹೆಗಲ ಮೇಲಿನ ಕೆಂಪುಶಾಲಿನ ಬಣ್ಣ ಕೊಂಚವೂ ಕುಂದಿರಲಿಲ್ಲ. ಅಂತೆಯೇ ಅವರು ದಾವಣಗೆರೆ ನೆಲದ ಶ್ರಮಸಂಸ್ಕೃತಿಯ ಸಾಂಸ್ಕೃತಿಕ ನಾಯಕ.

ಎಚ್.ಕೆ.ಆರ್. ಜತೆಗಿದ್ದ ಸಂಗಾತಿಗಳನೇಕರು ಕೈ, ಕಮಲಗಳ ಕೆಸರಿಗಂಟಿಕೊಂಡು ಅಧಿಕಾರ ಮತ್ತು ಅನೇಕ ಅನುಕೂಲಗಳನ್ನು ಹೊಡೆದುಕೊಂಡರು. ಎಚ್.ಕೆ.ಆರ್. ಮನಸು ಮಾಡಿದ್ದರೆ ಎಡಹೆಗಲ ಮೇಲಿನ ಕೆಂಪುಶಾಲು ಬಿಸಾಕಿ ಹೋಗಿದ್ದರೆ ಶಾಸಕನೋ, ಮಂತ್ರಿಯಾಗಿಯೋ ಮೋಜು ಮಸ್ತಿ ಮಾಡಬಹುದಿತ್ತು. ಅವರ ಕಟಿಬದ್ಧ ಮನಸ್ಸಾಕ್ಷಿ ಯಾವತ್ತೂ ಆ ದಿಕ್ಕಿನಲ್ಲಿ ಆಲೋಚನೆ ಕೂಡಾ ಮಾಡಲಿಲ್ಲ. ಪ್ರಾಣವಾಯು ಪೂರೈಕೆಯಾಗದೆ ಉಸಿರುಗಟ್ಟಿ ಸಾಯುವ ಕಟ್ಟಕಡೇ ಗಳಿಗೆವರೆಗೂ ಎಡದ ಕೆಂಪುಶಾಲನ್ನು ಬಿಟ್ಟಿರಲಿಲ್ಲ.

ಕೆಲವು ಸಲ ಕೆಲಸಗೇಡಿ ಕೊಳಕರು ತೀರಿಕೊಂಡಾಗ ತುಂಬಲಾಗದ ನಷ್ಟ ಎಂದು ಸಹಜವಾಗಿ ಹೇಳಿ ಬಿಡುತ್ತೇವೆ. ಆದರೆ ಎಚ್.ಕೆ.ಆರ್. ಸಾವು ಅಕ್ಷರಶಃ ತುಂಬಲಾಗದ ನಷ್ಟ. ಜೀವದ ಕೊನೇ ಕ್ಷಣದವರೆಗೂ ಫೀಲ್ಡ್ ಗಿಳಿದು ಹೋರಾಡುವ ಮತ್ತು ಹೋರಾಡಿದ ಪ್ರತಿಭಟನೆಯ ಕಿಚ್ಚು ಮತ್ತು ಕೆಚ್ಚು ಮುಕ್ಕಾಗದಂತೆ, ಮುಪ್ಪಾಗದಂತೆ ಕಾಪಿಟ್ಟುಕೊಂಡವರು. ಅನ್ಯಾಯದ ವಿರುದ್ಧದ ಹೋರಾಟವೆಂದರೆ ಅದು ಅವರ ಜೀವನಪ್ರೀತಿಯಂತಿತ್ತು. ಚುನಾವಣೆಯಲ್ಲಿ ಸೋತೆನೆಂದು ಅಳದೇಕಿತನ ಜಾಯಮಾನ ಅವರದಲ್ಲ. ಮಾರನೇ ದಿನವೇ ಸಂಗಾತಿಗಳೊಂದಿಗೆ ಕೆಂಪು ಝಂಡಾ ಹಿಡಿದು ಶೋಷಣೆ ವಿರುದ್ಧದ ಧೀರೋದಾತ್ತ ಹೋರಾಟದ ಧಾಡಸಿತನ ಅವರದು.

ಎಡಪಂಥೀಯ ಸಿದ್ಧಾಂತಗಳ ಆಳದ ಒಣ ಅಧ್ಯಯನ ಮತ್ತು ಜ್ಞಾನ ಸಂಪಾದನೆಯ ನಿಷಕ್ರೆಿಯನಡೆ ಅವರದಾಗಿರಲಿಲ್ಲ. ಅವರೊಬ್ಬ ಎಡಪಂಥೀಯ ಚಿಂತನೆಗಳನ್ನು ತನ್ನ ಸಾಧ್ಯತೆಯ ಕ್ಷಿತಿಜ ಹೆಚ್ಚಿಸಿ ಬದುಕುವ ಕ್ರಿಯಾಶಾಲಿ ಕಾಮ್ರೆಡ್. ಯಾವ ಪಕ್ಷದವರೇ ಮುಖ್ಯಮಂತ್ರಿ ಯಾರೇ ಆಗಿರಲಿ ಸಹಸ್ರಾರು ಜನರ ನಡುವಿನ ಕಾಂ. ಎಚ್.ಕೆ.ಆರ್. ಅವರನ್ನು ಗಂಭೀರವಾಗಿ ಗುರುತಿಸಿ ಖುದ್ದು ಹೆಸರಿನಿಂದ ಕರೆಯುವಷ್ಟು ಸಲಿಗೆ ಎಚ್.ಕೆ.ಆರ್. ಅವರ ಬಗೆಗಿತ್ತು. ಬಂಗಾರಪ್ಪನವರಂತೂ ಇವರನ್ನು ಕಾಂಗ್ರೆಸ್‌ಗೆ ಆಮಂತ್ರಿಸಿದ್ದರು.

ನಿರ್ಗತಿಕರು, ಧ್ವನಿರಹಿತ ದಮನಿತರು, ಶೋಷಿತ ಕೂಲಿ ಕಾರ್ಮಿಕರು, ಒಟ್ಟಿನಲ್ಲಿ ಸಮಾಜದ ಕಟ್ಟಕಡೆಯ ಎಲ್ಲರ ಬಗ್ಗೆ ಅವರಲ್ಲಿ ಅಗಾಧ ಪ್ರೀತಿ, ಮಮಕಾರ. ನಿಮ್ಮೆಂದಿಗೆ ನಾನಿದ್ದೇನೆ ಎಂದು ಹೇಳುವ ಮತ್ತು ಅವರ ಪರವಾಗಿ ನಿಲ್ಲುವ ಸಾರ್ವಜನಿಕವಾದ ಗಟ್ಟಿ ನಿಲುವು ಅವರದಾಗಿತ್ತು. ಪುಸ್ತಕದ ಸಿದ್ಧಾಂತಗಳಿಗಿಂತ ಸ್ಥಳೀಯ ನಿತ್ಯದ ಬದುಕಿನಲ್ಲಿ ಇಂತಹ ನಿಲುವುಗಳು ಬಹುಮುಖ್ಯ. ತನ್ನ ಜತೆಗಿದ್ದವರೇ ತನ್ನನ್ನು ಬಿಟ್ಟು ಹೋದಾಗಲೂ ಅಂತಹವರ ಕುರಿತು ಯಾವತ್ತೂ ಕೆಟ್ಟಮಾತು ಆಡಿದವರಲ್ಲ. ಬಿಸಿಯೂಟ, ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ಪ್ರಬುದ್ಧತೆಯನ್ನು, ಸೈದ್ಧಾಂತಿಕ ನೆಲೆಗಟ್ಟು ತಂದುಕೊಟ್ಟವರು. ದುಡಿಯುವ ವರ್ಗದಲ್ಲಿ, ಅದರಲ್ಲೂ ಮಹಿಳೆಯರಲ್ಲಿ ತಬ್ಬಲಿತನದ ಭಾವನೆಗಳು ಸುಳಿಯದಂತೆ ಅವರಲ್ಲಿ ಅಖಂಡ ಧೈರ್ಯ ತುಂಬಿದ ಧೀಮಂತ ನಾಯಕ.

ಎಚ್.ಕೆ.ಆರ್. ನಿರ್ಗಮನದ ನಂತರ ದಾವಣಗೆರೆ ಕಮ್ಯುನಿಸ್ಟ್ ಪಕ್ಷ ಮಾತ್ರವಲ್ಲ, ಗಟ್ಟಿ ಚಳವಳಿ, ಹೋರಾಟ, ನೆಲಧರ್ಮದ ಪ್ರಜಾಸತ್ತಾತ್ಮಕ ಮತ್ತು ಎಡಪಂಥೀಯ ಸಾರ್ವಜನಿಕ ಚಟುವಟಿಕೆಗಳಿಗೆ ಪೂರ್ಣ ವಿರಾಮವೇ ಗತಿ ಎನ್ನುವ ಶೂನ್ಯತೆ ಕಾಡುತ್ತಿದೆ. ಹೌದು ಅವರ ಅಗಲುವಿಕೆ ಅಕ್ಷರಶಃ ತುಂಬಲಾಗದ ನಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News