ಕೋವಿಡ್ ಪೀಡಿತ ಪತ್ನಿ ಅನ್ನ ನೀರಿಲ್ಲದೇ ಆಸ್ಪತ್ರೆಯಲ್ಲಿ ಬಿದ್ದಿರಬೇಕಾಯಿತು : ಬಿಜೆಪಿ ಶಾಸಕ ಆಕ್ರೋಶ

Update: 2021-05-11 03:55 GMT
ಸಾಂದರ್ಭಿಕ ಚಿತ್ರ

ಆಗ್ರಾ: ಫಿರೋಝಾಬಾದ್‌ನ ಜರ್ಸಾನಾ ಬಿಜೆಪಿ ಶಾಸಕ ರಾಮಗೋಪಾಲ್ ಲೋಧಿ, ಕೋವಿಡ್‌ ಪೀಡಿತ ಪತ್ನಿ ಸರ್ಕಾರಿ ಆಸ್ಪತ್ರೆಯಲ್ಲಿ ಅನುಭವಿಸಿದ ದಯನೀಯ ಸ್ಥಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮದೇ ಪಕ್ಷದ ಸರ್ಕಾರದ ವೈಫಲ್ಯಕ್ಕೆ ಕನ್ನಡಿ ಹಿಡಿದಿದ್ದಾರೆ.

ಪತ್ನಿ ಸಂಧ್ಯಾ ಲೋಧಿ ಮೂರು ಗಂಟೆಗಳ ಕಾಲ ಆಗ್ರಾದ ಎಸ್.ಎನ್.ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬೆಡ್ ಹಂಚಿಕೆಗೆ ಮುನ್ನ ಮೂರು ಗಂಟೆ ಕಾಲ ಅನ್ನ- ನೀರಿಲ್ಲದೇ ನೆಲದ ಮೇಲೆಯೇ ಮಲಗಿರಬೇಕಾಯಿತು ಎಂದು ಹೇಳಿದ್ದಾರೆ.

ಈ ಕುರಿತ ವೀಡಿಯೊವನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದು, ವೈರಲ್ ಆಗಿದೆ. ಪತ್ನಿಯ ಆರೋಗ್ಯ ಸ್ಥಿತಿ ಬಗ್ಗೆ ಕುಟುಂಬಕ್ಕೆ ಯಾವ ಮಾಹಿತಿಯನ್ನೂ ನೀಡಲಾಗುತ್ತಿಲ್ಲ ಎಂದು ದೂರಿದ್ದಾರೆ.

"ಪತ್ನಿ ಆಸ್ಪತ್ರೆಗೆ ತೆರಳಿದಾಗ ಆಸ್ಪತ್ರೆ ಭದ್ರತಾ ಸಿಬ್ಬಂದಿ ವಾಪಾಸು ಕಳುಹಿಸಿದರು. ಆ ಬಳಿಕ ಜಿಲ್ಲಾಧಿಕಾರಿ ಪ್ರಭು ಎನ್.ಸಿಂಗ್ ಅವರನ್ನು ಸಂಪರ್ಕಿಸಿ ಪರಿಸ್ಥಿತಿ ವಿವರಿಸಿದ ಬಳಿಕ ಶುಕ್ರವಾರ ರಾತ್ರಿ ದಾಖಲಿಸಿಕೊಳ್ಳಲಾಯಿತು" ಎಂದು ಎರಡು ನಿಮಿಷದ ವೀಡಿಯೊ ಸಂದೇಶದಲ್ಲಿ ವಿವರಿಸಿದ್ದಾರೆ.

"ಜಿಲ್ಲಾಧಿಕಾರಿ ಹಸ್ತಕ್ಷೇಪದ ಬಳಿಕ ಪತ್ನಿಯನ್ನು ದಾಖಲಿಸಿಕೊಳ್ಳಲಾಗಿದ್ದರೂ, ಕಳೆದ 24 ಗಂಟೆಗಳಿಂದ ಯಾವ ಮಾಹಿತಿಯನ್ನೂ ನೀಡುತ್ತಿಲ್ಲ. ಆಸ್ಪತ್ರೆಯಲ್ಲಿ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ನಾನು ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದರಿಂದ ತೀರಾ ಅಶಕ್ತನಾಗಿದ್ದು, ಆಗ್ರಾಕ್ಕೆ ಪ್ರಯಾಣಿಸುವ ಸ್ಥಿತಿಯಲ್ಲಿಲ್ಲ" ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

"ಶಾಸಕನ ಪತ್ನಿಯ ಸ್ಥಿತಿಯೇ ಹೀಗಿದ್ದರೆ ಬಡವರು ಹಾಗೂ ಜನಸಾಮಾನ್ಯರ ಸ್ಥಿತಿ ಏನು" ಎಂದು ವೀಡಿಯೊದಲ್ಲಿ ಲೋಧಿ ಪ್ರಶ್ನಿಸಿದ್ದಾರೆ. ಇತ್ತೀಚೆಗೆ ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಲೋಧಿ ಚಿಕಿತ್ಸೆ ಪಡೆದು ಮೇ 7ರಂದು ವಾಪಸ್ಸಾಗಿದ್ದರು. ಶಾಸಕರು ಮಾಡಿರುವ ಆರೋಪ ದುರದೃಷ್ಟಕರ ಎಂದು ಕಾಲೇಜು ಪ್ರಾಂಶುಪಾಲ ಡಾ.ಸಂಜಯ್ ಕಾಳಾ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News