2 ತಿಂಗಳ ಬಳಿಕ ಹೊಸ ಕೊರೋನ ಪ್ರಕರಣಕ್ಕಿಂತ ಚೇತರಿಸಿಕೊಂಡವರ ಸಂಖ್ಯೆಯಲ್ಲಿ ಹೆಚ್ಚಳ

Update: 2021-05-11 06:25 GMT

ಹೊಸದಿಲ್ಲಿ: ಕೇಂದ್ರ ಆರೋಗ್ಯ ಸಚಿವಾಲಯದ ನೀಡಿದ ಹೊಸ ಮಾಹಿತಿಯ ಪ್ರಕಾರ, ಭಾರತದಲ್ಲಿ  ಮಂಗಳವಾರ ಬೆಳಿಗ್ಗೆ ಒಂದೇ ದಿನದಲ್ಲಿ 3,29,942 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದೆ. 3,876 ದೈನಂದಿನ ಸಾವುಗಳೊಂದಿಗೆ ಒಟ್ಟು ಸಾವಿನ ಸಂಖ್ಯೆ 2,49,992 ಕ್ಕೆ ಏರಿದೆ ಎಂದು ಹೊಸ ದತ್ತಾಂಶ ತಿಳಿಸಿದೆ.

ಮಂಗಳವಾರ ಸಕ್ರಿಯ ಪ್ರಕರಣಗಳು 37,15,221 ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 3,56,082 ರೋಗಿಗಳು ಚೇತರಿಸಿಕೊಳ್ಳುವುದರೊಂದಿಗೆ ಕೊರೋನ  ರೋಗದಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ  1,90,27,304 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಸುಮಾರು ಎರಡು ತಿಂಗಳಲ್ಲಿ ಇದೇ ಮೊದಲ ಬಾರಿಗೆ ದೇಶದಲ್ಲಿ  ದೈನಂದಿನ ಹೊಸ ಪ್ರಕರಣಗಳಿಗಿಂತ ಚೇತರಿಸಿಕೊಂಡವರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಈ ಮಧ್ಯೆ ಗರಿಷ್ಠ ಪ್ರಕರಣಗಳು ಕಂಡುಬಂದಿರುವ ಅಗ್ರ ಐದು ರಾಜ್ಯಗಳ ಪೈಕಿ 39,305 ಪ್ರಕರಣಗಳೊಂದಿಗೆ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 37,236 ಪ್ರಕರಣಗಳೊಂದಿಗೆ ಮಹಾರಾಷ್ಟ್ರ, 28,978 ಪ್ರಕರಣಗಳೊಂದಿಗೆ ತಮಿಳುನಾಡು 2 ಹಾಗೂ 3ನೇ ಸ್ಥಾನದಲ್ಲಿವೆ. ಕೇರಳದಲ್ಲಿ 27,487 ಪ್ರಕರಣಗಳು ಹಾಗೂ  ಉತ್ತರ ಪ್ರದೇಶ 21,277 ಪ್ರಕರಣಗಳು ದಾಖಲಾಗಿವೆ.

ಈ ಐದು ರಾಜ್ಯಗಳಿಂದ ಸುಮಾರು 46.7 ರಷ್ಟು ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಹೊಸ ಪ್ರಕರಣಗಳಲ್ಲಿ ಶೇಕಡಾ 11.91ರಷ್ಟು ಏರಿಕೆಗೆ ಕರ್ನಾಟಕ  ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News