ಮೋದಿ ಸರಕಾರ ಹಠಾತ್ತನೆ ಎತ್ತಂಗಡಿ ಮಾಡಿದ್ದ ಮುಂಬೈ ಬಿಎಂಸಿ ಆಯುಕ್ತ ಇಕ್ಬಾಲ್ ಸಿಂಗ್ ಈಗ ಕೋವಿಡ್ ಹೀರೋ

Update: 2021-05-11 08:48 GMT
photo: economic times

ಹೊಸದಿಲ್ಲಿ: ಮುಂಬೈ ಮಹಾನಗರಿಯಲ್ಲಿ ಕೊರೋನಾ ಅಬ್ಬರವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದವರೆಂಬ ಹೆಗ್ಗಳಿಕೆಗೆ ಪಾತ್ರರಾದವರು   ಬಿಎಂಸಿ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್. 1989ನೇ ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಇವರಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಈ ವರ್ಷ ಲೋಕಮತ್ ಮಹಾರಾಷ್ಟ್ರಿಯನ್  ಆಫ್ ದಿ ಇಯರ್ ಪ್ರಶಸ್ತಿಯನ್ನು  ನೀಡಿ ಗೌರವಿಸಿದ್ದರಲ್ಲದೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಂದಲೂ ಚಾಹಲ್ ಶ್ಲಾಘನೆಗೊಳಗಾಗಿದ್ದರು.

ಆದರೆ ಅಚ್ಚರಿಯೆಂದರೆ ಐದು ವರ್ಷಗಳ ಹಿಂದೆ, 2016ರಲ್ಲಿ ಈ ಅಧಿಕಾರಿಯನ್ನು ಕೇಂದ್ರ ಸರಕಾರದ ಸೇವೆಯಿಂದ ಕಡ್ಡಾಯವಾಗಿ ಮುಕ್ತಗೊಳಿಸಿ ಅವರ ಮಾತೃ ಮಹಾರಾಷ್ಟ್ರ ಕೇಡರ್ಗೆ  ಅವರ ಕೇಂದ್ರೀಯ ಡೆಪ್ಯುಟೇಶನ್ ಮುಗಿಯಲು ಇನ್ನೂ ಮೂರು ವರ್ಷಗಳಿರುವಾಗಲೇ  ವಾಪಸ್ ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದವರಾದ  ಹಾಗೂ ಯುಪಿಎ ಆಡಳಿತಾವಧಿಯಲ್ಲಿ ಗೃಹ ಸಚಿವರಾಗಿದ್ದ ಸುಶೀಲ್ ಕುಮಾರ್ ಶಿಂಧೆ ಅವರ ಆತ್ಮೀಯರಾಗಿದ್ದ ಚಾಹಲ್ ಅವರು ಗೃಹ ಸಚಿವಾಲಯದಲ್ಲಿ ವಿಶೇಷ ಕರ್ತವ್ಯದ ಅಧಿಕಾರಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಆದರೆ 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಚಾಹಲ್ ಅವರನ್ನು 2015ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವರ್ಗಾಯಿಸಲಾಗಿತ್ತು. ಆದರೆ ಆಗಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರ ಜತೆಗೆ ಐಸಿಡಿಎಸ್ ಜಾರಿ ಕುರಿತಂತೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ಅವರು ಯಾರಿಗೂ ತಿಳಿಸದೆ ರಜೆ ಮೇಲೆ ತೆರಳಿದ ನಂತರ ಅವರನ್ನು 90 ದಿನಗಳ  ಕಡ್ಡಾಯವಾಗಿ ರಜೆ ಮೇಲೆ ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ.

ಆದರೆ ನಂತರ ಮಹಾರಾಷ್ಟ್ರ ಕೇಡರ್ಗೆ ವಾಪಸಾದ  ಅವರಿಗೆ ಜಲಸಂಪನ್ಮೂಲ ಮತ್ತು ನಗರಾಭಿವೃದ್ಧಿ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳನ್ನು ನೀಡಲಾಗಿತ್ತಲ್ಲದೆ ಮುಂದೆ ಬಿಎಂಸಿ ಆಯುಕ್ತರಾಗಿ ನೇಮಕಗೊಂಡ ಅವರು ಈಗ ಕೋವಿಡ್ ಕಬಂಧಬಾಹುಗಳಿಂದ ಮುಂಬೈಯನ್ನು ಬಿಡುಗಡೆಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿ  ಕೋವಿಡ್ ಹೀರೋ ಆಗಿ ಹೊರಹೊಮ್ಮಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News