ಡಿವಿಎಸ್, ಸಿ.ಟಿ.ರವಿ ಮುಖವಾಡ ಧರಿಸಿ, ಭಿಕ್ಷಾಟನೆ ನಡೆಸಿದ ಕಾಂಗ್ರೆಸ್ ಮುಖಂಡರು

Update: 2021-05-15 12:46 GMT

ಬೆಂಗಳೂರು, ಮೇ 15: ನ್ಯಾಯಮೂರ್ತಿಗಳ ವಿರುದ್ಧ ನೀಡಿರುವ ಹೇಳಿಕೆಗಳನ್ನು ಖಂಡಿಸಿ ಬಿಜೆಪಿ ನಾಯಕರ ಮುಖವಾಡ ಧರಿಸಿ, ತಟ್ಟೆ ಹಿಡಿದು ಭಿಕ್ಷೆ ಬೇಡುವ ಮೂಲಕ ಕಾಂಗ್ರೆಸ್ ನಾಯಕರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಶನಿವಾರ ಇಲ್ಲಿನ ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ ಮುಂಭಾಗ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಕೋವಿಡ್ ಸಂಬಂಧ ನ್ಯಾಯಮೂರ್ತಿಗಳು ನೀಡಿರುವ ಹೇಳಿಕೆ ಕುರಿತು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮುಖವಾಡ ಧರಿಸಿ, ಭಿಕ್ಷಾಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಕೋವಿಡ್ ಸಂಬಂಧ ಸರಕಾರಗಳಿಗೆ ಎಚ್ಚರಿಸುವ ಕೆಲಸವನ್ನು ನ್ಯಾಯಾಲಯ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ನ್ಯಾಯಮೂರ್ತಿಗಳ ವಿರುದ್ಧದ ಹೇಳಿಕೆ ಸರಿಯಲ್ಲ. ಹೀಗಾಗಿ, ಮೌನ ಪ್ರತಿಭಟನೆ ನಡೆಸುತ್ತಿದ್ದೇವೆ ಪ್ರತಿಭಟನಾಕಾರರು ಹೇಳಿದರು.

ಲಸಿಕೆ ಉತ್ಪಾದನೆ ಆಗದಿದ್ದರೆ, ನೇಣು ಹಾಕಿಕೊಳ್ಳಬೇಕಾ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದರೆ, ಬಿಜೆಪಿ ಪ್ರದಾನ ಕಾರ್ಯದರ್ಶಿ ಸಿ.ಟಿ. ರವಿ ನ್ಯಾಯಮೂರ್ತಿಗಳು ಸರ್ವಜ್ಞರಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವವರು ಇಂತಹ ಕೀಳುಮಟ್ಟದ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸದಾನಂದಗೌಡ ಹಿರಿಯ ರಾಜಕಾರಣಿ. ಆದರೆ, ಲಸಿಕೆ ವಿಚಾರವಾಗಿ ಕ್ಷುಲ್ಲಕವಾಗಿ ಮಾತನಾಡಿದ್ದಾರೆ. ಅಲ್ಲದೆ, ಲಸಿಕೆ ನೀಡುವವರು ನಿರ್ದಿಷ್ಟ ವಯಸ್ಸು, ಸಮಯವನ್ನು ನಿಗದಿ ಮಾಡಬೇಕು. ಇಂತಹ ವ್ಯವಸ್ಥೆಗಳೇ ಇಲ್ಲದೆ ಜನರನ್ನು ದೂರುವುದು ಸರಿಯಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News