ರಾಜ್ಯದಲ್ಲಿ ಅನಿವಾರ್ಯವಾದರೆ ಲಾಕ್‍ಡೌನ್ ವಿಸ್ತರಣೆ ಸೂಕ್ತ: ಡಿ.ವಿ.ಸದಾನಂದ ಗೌಡ

Update: 2021-05-15 12:57 GMT

ಬೆಂಗಳೂರು, ಮೇ 15: ದೇಶದ ಹಲವು ನಗರಗಳಲ್ಲಿ ಲಾಕ್‍ಡೌನ್ ಘೋಷಿಸಿದ ನಂತರ ಕೋವಿಡ್ ಪ್ರಕರಣಗಳು ಕಡಿಮೆಯಾಗಿರುವುದು ಕಂಡುಬಂದಿದೆ. ಹೀಗಾಗಿ ರಾಜ್ಯದಲ್ಲಿ ಅನಿವಾರ್ಯವಾದರೆ ಲಾಕ್‍ಡೌನ್‍ನ್ನು ವಿಸ್ತರಿಸುವುದು ಸೂಕ್ತವೆಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಶನಿವಾರ ಇಲ್ಲಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಮತ್ತು ಆ್ಯಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂಬೈ, ಹೊಸದಿಲ್ಲಿ ಸೇರಿದಂತೆ ದೇಶದ ಹಲವು ಕಡೆ ಲಾಕ್‍ಡೌನ್ ನಂತರ ಕೋವಿಡ್ ಕಡಿಮೆ ಆಗಿದೆ. ರಾಜ್ಯದಲ್ಲೂ ಮೇ 24ಕ್ಕೆ ಕೊನೆಗೊಳ್ಳುವ ಲಾಕ್‍ಡೌನ್‍ನ್ನು ಪರಿಶೀಲಿಸಿ ವಿಸ್ತರಿಸುವ ಸಂಬಂಧ ರಾಜ್ಯ ಸರಕಾರ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಅಭಿಪ್ರಾಯಿಸಿದ್ದಾರೆ.

ರಾಜ್ಯದ ಪ್ರತಿಯೊಬ್ಬರಿಗೂ ನಿಗದಿತ ವೇಳೆಯಲ್ಲಿ ಕೋವಿಡ್ ಲಸಿಕೆ ನೀಡುವುದು ಸರಕಾರದ ಉದ್ದೇಶವಾಗಿದೆ. ಇದಕ್ಕಾಗಿ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. 45 ವರ್ಷ ಮೇಲ್ಪಟ್ಟವರಿಗೆ ಮೊದಲ ಹಂತದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದಾಗ ಶೇ.40ರಿಂದ 50 ಮಂದಿ ಮಾತ್ರ ಸ್ಪಂದಿಸಿದ್ದರು. ಹೀಗಾಗಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೂ ನೀಡಲು ತೀರ್ಮಾನ ಮಾಡಲಾಯಿತು. ಆದರೆ, ಕೊರೋನ 2ನೇ ಅಲೆಯಿಂದಾಗಿ ಭಯಭೀತಿಗೊಂಡ ಜನತೆ ಲಸಿಕೆಗಾಗಿ ಮುಗಿಬಿದ್ದರು. ಹೀಗಾಗಿ ಲಸಿಕೆ ನೀಡಿಕೆ ಕಾರ್ಯಯೋಜನೆಯಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸವಾಯಿತೆಂದು ಅವರು ಹೇಳಿದ್ದಾರೆ.

ಕೊರೋನ ಲಸಿಕೆ, ಬ್ಲ್ಯಾಕ್ ಫಂಗಸ್ ಔಷಧಿ ಸೇರಿದಂತೆ ಎಲ್ಲ ಔಷಧಿಗಳ ಉತ್ಪಾದಕರ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಸದ್ಯದಲ್ಲೇ ಎಲ್ಲ ಔಷಧಿಗಳ ಉತ್ಪಾದನೆಯನ್ನು ಹೆಚ್ಚಳ ಮಾಡಿ, ಅಭಾವವನ್ನು ನೀಗಿಸಲಾಗುವುದು. ಜನತೆ ಸರಕಾರದೊಂದಿಗೆ ಸ್ಪಂದಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಕೋವಿಡ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸಚಿವ ಗೋಪಾಲಯ್ಯ ಉತ್ತಮ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಸಚಿವ ಗೋಪಾಲಯ್ಯ, ರಾಘವೇಂದ್ರ ಶೆಟ್ಟಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News