ದೇಶದಲ್ಲಿ 11 ವರ್ಷದಲ್ಲೇ ಗರಿಷ್ಠ ಮಟ್ಟ ತಲುಪಿದ ಸಗಟು ಹಣದುಬ್ಬರ: ಇಲಾಖೆಯ ವರದಿ

Update: 2021-05-18 04:29 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ದೇಶದಲ್ಲಿ ಸಗಟು ಬೆಲೆ ಹಣದುಬ್ಬರ ಏಪ್ರಿಲ್ ತಿಂಗಳಲ್ಲಿ ಹನ್ನೊಂದು ವರ್ಷಗಳಲ್ಲೇ ಗರಿಷ್ಠ ಎನಿಸಿದ ಶೇಕಡ 10.50ನ್ನು ತಲುಪಿದೆ. ಮಾರ್ಚ್‌ನಲ್ಲಿ ಈ ಪ್ರಮಾಣ 7.4% ಇತ್ತು. ತೈಲಬೆಲೆ ಏರಿಕೆ, ಉತ್ಪಾದಿತ ವಸ್ತುಗಳು, ಖನಿಜಗಳು ಮತ್ತು ಕೆಲ ಆಹಾರವಸ್ತುಗಳ ಬೆಲೆ ದುಬಾರಿಯಾಗಿರುವುದು ಹಣದುಬ್ಬರ ಅಧಿಕವಾಗಲು ಕಾರಣ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ವರದಿ ತಿಳಿಸಿದೆ.

ಈಗಾಗಲೇ ಕೋವಿಡ್-19 ಸಂಕಷ್ಟದಲ್ಲಿ ಸಿಲುಕಿಹಾಕಿಕೊಂಡಿರುವ ಆರ್ಥಿಕತೆಗೆ ಇದು ಮತ್ತೊಂದು ಸವಾಲಾಗಿದೆ ಎಂದು ವಿವರಿಸಿದೆ.

ಸೋಮವಾರ ಬಿಡುಗಡೆ ಮಾಡಲಾದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ವರದಿ ಪ್ರಕಾರ, ಇದು 2013ರ ಏಪ್ರಿಲ್ ತಿಂಗಳ ಬಳಿಕ ದಾಖಲಾದ ಗರಿಷ್ಠ ಹಣದುಬ್ಬರ ಪ್ರಮಾಣವಾಗಿದೆ. ಇತರ ಹಲವು ಸರಣಿಗಳ ಜತೆ ಹೋಲಿಸುವ ವಿಧಾನದ ಪ್ರಕಾರ, ಇದು 2010ರ ಏಪ್ರಿಲ್‌ನಲ್ಲಿ ದಾಖಲಾದ 10.9% ವನ್ನು ಹೊರತುಪಡಿಸಿದರೆ ಇದುವರೆಗಿನ ಗರಿಷ್ಠ. ಸಗಟು ಬೆಲೆ ಸೂಚ್ಯಂಕ ಆಧರಿತ ಹಣದುಬ್ಬರ ಏಪ್ರಿಲ್‌ನಲ್ಲಿ 1.6%ಗೆ ಇಳಿದಿದೆ.

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಮೂರು ತಿಂಗಳ ಕನಿಷ್ಠ ಅಂದರೆ 4.3% ಇದ್ದರೆ, ಸಗಟು ಬೆಲೆ ಸೂಚ್ಯಂಕದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಬಡ್ಡಿ ದರ ಕುರಿತ ನೀತಿಗಳು ಇದಕ್ಕೆ ಕಾರಣ ಎಂದು ಆರ್‌ಬಿಐ ಹೇಳಿಕೊಂಡಿತ್ತು.

ಪ್ರಾಥಮಿಕ ಆಹಾರಧಾನ್ಯಗಳ ಹಣದುಬ್ಬರ ಆರು ತಿಂಗಳ ಗರಿಷ್ಠ ಅಂದರೆ 4.9% ದಾಖಲಾಗಿದ್ದರೆ, ಕಳೆದ ತಿಂಗಳು ಇದು 3.2% ಇತ್ತು. ಹಣ್ಣು, ಮೊಟ್ಟೆ, ಮಾಂಸ ಮತ್ತು ಮೀನಿನ ಬೆಲೆ ಎರಡಂಕಿಯಲ್ಲಿ ಹೆಚ್ಚಿದ್ದರೆ, ತರಕಾರಿ ಮತ್ತು ಬೇಳೆಕಾಳುಗಳ ಬೆಲೆ ನಿಯಂತ್ರಣದಲ್ಲಿದೆ. ಆಹಾರೇತರ ವಸ್ತುಗಳ ಹಣದುಬ್ಬರ ದರ 15.6% ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News