ಉತ್ತರ ಪ್ರದೇಶದ ಆರೋಗ್ಯ ವ್ಯವಸ್ಥೆಗೆ ದೇವರೇ ಗತಿ ಎಂದ ಅಲಹಾಬಾದ್ ಹೈಕೋರ್ಟ್

Update: 2021-05-18 18:22 GMT
ಸಾಂದರ್ಭಿಕ ಚಿತ್ರ

ಲಕ್ನೋ,ಮೇ 18: ಉತ್ತರಪ್ರದೇಶದ ಸಣ್ಣ ಪಟ್ಟಣಗಳು ಹಾಗೂ ಗ್ರಾಮಗಳಲ್ಲಿ ಆರೋಗ್ಯಪಾಲನೆ ವ್ಯವಸ್ಥೆಯನ್ನು ದೇವರೇ ಕಾಪಾಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಸೋಮವಾರ ಕಳವಳ ವ್ಯಕ್ತಪಡಿಸಿದೆ.

ಉತ್ತರಪ್ರದೇಶದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕವು ಕಾಡ್ಗಿಚ್ಚಿನಂತೆ ಹರಡುತ್ತಿರುವುರ ಬಗ್ಗೆ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭ ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಹಾಗೂ ಅಜಿತ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು ಹೀಗೆ ಅಭಿಪ್ರಾಯಿಸಿದೆ.

 ಆಸ್ಪತ್ರೆಯೊಂದರ ಐಸೋಲೇಶನ್ ವಾರ್ಡ್‌ಗೆ ದಾಖಲಾಗಿದ್ದ ಕೋವಿಡ್19 ರೋಗಿಯ ಸಾವನ್ನಪ್ಪಿದ ಬಳಿಕ, ಆತನ ಮೃತದೇಹವನ್ನು ಅಜ್ಞಾತಶವವೆಂದು ವಿಲೇವಾರಿ ಮಾಡಿದ ಘಟನೆಯ ಬಗ್ಗೆ ಅದು ಕಳವಳ ವ್ಯಕ್ತಪಡಿಸಿದೆ.

ಕಳೆದ ತಿಂಗಳು ಕೋವಿಡ್ ಸೋಂಕಿತನೊಬ್ಬ ಮೀರತ್‌ನಂತಹ ಆಸ್ಪತ್ರೆಯೊಂದರ ಶೌಚಗೃಹದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದ. ಆತನನ್ನು ಗುರುತಿಸಲು ಅಥವಾ ಆಸ್ಪತ್ರೆಗೆ ಆತನ ದಾಖಲಾತಿಯ ಕಡತ ಸಿಗದೆ ಇದ್ದಾಗ ಅವರು ಮೃತದೇಹವನ್ನು ದೊಡ್ಡ ಚೀಲವೊಂದರಲ್ಲಿ ಇರಿಸಿ ಎಸೆದುಹೋಗಿದ್ದರು. ಈ ಘಟನೆಯ ಬಗ್ಗೆ ತನಖೆ ನಡೆಸಲು ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿತ್ತು.

 ವಿಚಾರಣೆಯ ಸಂದರ್ಭ ಈ ಘಟನೆಯನ್ನು ಪ್ರಸ್ತಾವಿಸಿದ ನ್ಯಾಯಾಲಯವು, ಮೀರತ್‌ನಂತಹ ಬೃಹತ್ ನಗರದಲ್ಲಿ ಇಂತಹ ಪರಿಸ್ಥಿತಿಯಿದ್ದರೆ, ಗ್ರಾಮಾಂತರ ಪ್ರದೇಶಗಳಲ್ಲಂತೂ ಆರೋಗ್ಯ ಮೂಲಸೌಕರ್ಯಗಳು ಇನ್ನೂ ಕೆಟ್ಟದಾಗಿರಬಹುದು ಎಂದು ನ್ಯಾಯಾಲಯ ಹೇಳಿತು. ರಾಜ್ಯದ ಸಣ್ಣ ಪಟ್ಟಣಗಳು ಹಾಗೂ ಗ್ರಾಮಗಳಲ್ಲಿ ಇಡೀ ವೈದ್ಯಕೀಯ ವ್ಯವಸ್ಥೆಯುನ್ನು ದೇವರೇ ಕಾಪಾಡಬೇಕು ಎಂದು ನ್ಯಾಯಪೀಠವು ಉದ್ಘರಿಸಿತು.

ಮೃತ ರೋಗಿಯ ಬಗ್ಗೆ ಅಸಡ್ಡೆಯಿಂದ ವರ್ತಿಸಿದ ವೈದ್ಯರು ಹಾಗೂ ಅರೆವದ್ಯಕೀಯ ಸಿಬ್ಬಂದಿಯನ್ನು ಕೂಡಾ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು. ಒಂದು ವೇಳೆ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಔದಾಸೀನ್ಯ ಹಾಗೂ ನಿರ್ಲಕ್ಷವನ್ನು ಪ್ರದರ್ಶಿಸಿದಲ್ಲಿ ಅದು ಗಂಭೀರವಾದ ದುರ್ನಡತೆಯಾಗಲಿದೆ. ಯಾಕೆಂದರೆ ಅವರು ಬೇರೆಯವರ ಪ್ರಾಣಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ನ್ಯಾಯಾಲಯ ಆಕ್ರೋಶ ವ್ಯಕ್ತಪಡಿಸಿತು.

  ಉತ್ತರಪ್ರದೇಶದಲ್ಲಿ ವೈದ್ಯಕೀಯ ಸೇವೆಗಳ ಪರಿಸ್ಥಿತಿ ಅತ್ಯಂತ ದುರ್ಬಲ ಹಾಗೂ ಶಿಥಿಲವಾಗಿದೆ ಎಂದು ನ್ಯಾಯಪೀಠವು ಗಮನಸೆಳೆಯಿತು.ರಾಜ್ಯದಲ್ಲಿ ಆರೋಗ್ಯ ಪಾಲನಾ ವ್ಯವಸ್ಥೆಯನ್ನು ಸುಧಾರಿಸಲು ಅಲಹಾಬಾದ್ ಹೈಕೋರ್ಟ್ ಕೆಲವು ನಿರ್ದಿಷ್ಟ ಸಲಹೆ ಸೂಚನೆಗಳನ್ನು ನೀಡಿತು. 30ಕ್ಕೂ ಅಧಿಕ ಹಾಸಿಗೆಗಳಿರುವ ಪ್ರತಿಯೊಂದು ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಆಮ್ಲಜನಕ ಉತ್ಪಾದನಾ ಘಟಕವಿರಬೇಕು. ಉತ್ತರಪ್ರದೇಶದ ಪ್ರತಿಯೊಂದು ದ್ವಿಸ್ತರ ಹಾಗೂ ತ್ರಿಸ್ತರ ಪಟ್ಟಣಳಲ್ಲಿೆ ಕನಿಷ್ಠ 20 ಆ್ಯಂಬುಲೆನ್ಸ್‌ಗಳು ಹಾಗೂ ತೀವ್ರ ನಿಗಾಘಟಕಳಿರಬೇಕು ಮತ್ತು ಪ್ರತಿಯೊಂದು ಹಳ್ಳಿಗಳಲ್ಲಿ ಕನಿಷ್ಠ ಎರಡು ಆ್ಯಂಬುಲೆನ್ಸ್‌ಗಳಿರಬೇಕು ಎಂದು ನ್ಯಾಯಾಲಯ ಸೂಚಿಸಿತು.

 ಉತ್ತರಪ್ರದೇಶದಲ್ಲಿ ಸೋಮವಾರ 3,931 ನೂತನ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಆ ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 16,28,999ಕ್ಕೇರಿದೆ ಮತ್ತು ಈವರೆಗೆ ಒಟ್ಟು 17817 ಮಂದಿ ಸಾವನ್ನಪ್ಪಿದ್ದಾರೆ. ಲಕ್ನೋ,ಮೇ 18: ಉತ್ತರಪ್ರದೇಶದ ಸಣ್ಣ ಪಟ್ಟಣಗಳು ಹಾಗೂ ಗ್ರಾಮಗಳಲ್ಲಿ ಆರೋಗ್ಯಪಾಲನೆ ವ್ಯವಸ್ಥೆಯನ್ನು ದೇವರೇ ಕಾಪಾಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಸೋಮವಾರ ಕಳವಳ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News