ಎಬಿ ಡಿವಿಲಿಯರ್ಸ್ ಪುನರಾಗಮನಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹೇಳಿದ್ದೇನು ಗೊತ್ತೇ?

Update: 2021-05-18 12:42 GMT

ಹೊಸದಿಲ್ಲಿ: ಎಬಿ ಡಿವಿಲಿಯರ್ಸ್ 2021ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಆಡಲು ತಂಡಕ್ಕೆ ಹಿಂದಿರುಗುವುದಿಲ್ಲ ಎಂದು ದೇಶದ ಕ್ರಿಕೆಟ್ ಮಂಡಳಿ ಮಂಗಳವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ. ಈ ಘೋಷಣೆಯೊಂದಿಗೆ ಎಬಿಡಿ ವಿಶ್ವಕಪ್ ನಲ್ಲಿ ಆಡುತ್ತಾರೆಂಬ ಊಹಾಪೋಹಕ್ಕೆ ತೆರೆಬಿದ್ದಿದೆ.

ದ. ಆಫ್ರಿಕಾ ತಂಡದ ಮಾಜಿ ನಾಯಕ ಡಿವಿಲಿಯರ್ಸ್ 2018 ರಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಮುಂಬರುವ ವಿಶ್ವಕಪ್‌ನಲ್ಲಿ ಆಡಲು ಅವರು ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಮಾಡುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಸ್ವತಃ ಡಿವಿಲಿಯರ್ಸ್ ತಂಡಕ್ಕೆ ವಾಪಸಾಗುವ ಬಯಕೆ ವ್ಯಕ್ತಪಡಿಸಿದ್ದರು. ಆದಾಗ್ಯೂ, ಡಿವಿಲಿಯರ್ಸ್ ಅವರ ನಿವೃತ್ತಿ ನಿರ್ಧಾರ ಅಂತಿಮವಾಗಿರುತ್ತದೆ. ಅವರು  "ಒಮ್ಮೆ ಹಾಗೂ  ಎಂದೆಂದಿಗೂ ಏಕೈಕ " ನಿರ್ಧಾರ ಕೈಗೊಂಡಿದ್ದಾರೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ತಿಳಿಸಿದೆ.

ಎಬಿ ಡಿವಿಲಿಯರ್ಸ್ ಅವರೊಂದಿಗಿನ ಚರ್ಚೆಯ ಬಳಿಕ ಅವರ ನಿವೃತ್ತಿ ನಿರ್ಧಾರವೇ ಅಂತಿಮವಾಗಿ ಉಳಿಯಲಿದೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಅಂತರ್ ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಡಿವಿಲಿಯರ್ಸ್ ಫ್ರ್ಯಾಂಚೈಸಿ ಕ್ರಿಕೆಟ್ ಆಡುವುದನ್ನು ಮುಂದುವರೆಸಿದ್ದಾರೆ ಹಾಗೂ  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದರು.

ಕೋವಿಡ್ ಬಿಕ್ಕಟ್ಟಿನಿಂದಾಗಿ ಮುಂದೂಡಲ್ಪಟ್ಟ ಈ ವರ್ಷದ ಐಪಿಎಲ್‌ನಲ್ಲಿ 37 ವರ್ಷದ ಡಿವಿಲಿಯರ್ಸ್ ಅದ್ಭುತ ಪ್ರದರ್ಶನವು ಅಂತರ್ ರಾಷ್ಟ್ರೀಯ ಪುನರಾಗಮನದ ಕುರಿತು ಮತ್ತಷ್ಟು ಮಾತುಕತೆಗೆ ನಾಂದಿ ಹಾಡಿತ್ತು.

ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಹಾಗೂ  78 ಟಿ-20 ಅಂತರ್ ರಾಷ್ಟ್ರೀಯ ಪಂದ್ಯ ಗಳನ್ನು ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News