ಸಿಂಗಾಪುರ ವಿಮಾನಗಳ ಸಂಚಾರ ರದ್ದುಗೊಳಿಸಲು ಕೇಜ್ರಿವಾಲ್ ಆಗ್ರಹ

Update: 2021-05-18 17:04 GMT

ಹೊಸದಿಲ್ಲಿ, ಮೇ 18: ಸಿಂಗಾಪುರದಲ್ಲಿ ಕೊರೋನ ಸೋಂಕಿನ ಹೊಸ ಪ್ರಬೇಧ ಪತ್ತೆಯಾಗಿದ್ದು ಇದು ಮಕ್ಕಳಿಗೆ ಅತ್ಯಂತ ಅಪಾಯಕಾರಿಯೆಂದು ಸಾಬೀತಾಗಿದೆ. ಇದು ಸೋಂಕಿನ 3ನೇ ಅಲೆಯ ರೂಪದಲ್ಲಿ ಭಾರತಕ್ಕೆ ಅಪ್ಪಳಿಸುವ ಸಾಧ್ಯತೆಯಿರುವುದರಿಂದ ಸಿಂಗಾಪುರದಿಂದ ಬರುವ ಮತ್ತು ಹೋಗುವ ವಿಮಾನಗಳ ಸಂಚಾರವನ್ನು ತಕ್ಷಣ ರದ್ದುಗೊಳಿಸಬೇಕು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಸಿಂಗಾಪುರದಲ್ಲಿ ಪತ್ತೆಯಾಗಿರುವ ಸೋಂಕಿನ ಹೊಸ ಪ್ರಬೇಧ ಮಕ್ಕಳಿಗೆ ಅತ್ಯಂತ ಅಪಾಯಕಾರಿ ಎಂದು ವರದಿಯಾಗಿದೆ. ಆದ್ದರಿಂದ ಸಿಂಗಾಪುರಕ್ಕೆ ವಿಮಾನ ಸೇವೆ ತಕ್ಷಣದಿಂದ ರದ್ದಾಗಬೇಕು. ಜೊತೆಗೆ, ಮಕ್ಕಳಿಗೂ ಆದ್ಯತೆಯ ಮೇರೆಗೆ ಲಸಿಕೆ ನೀಡಬೇಕು. ಇದು ಕೇಂದ್ರ ಸರಕಾರಕ್ಕೆ ನನ್ನ ವಿನಂತಿ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಸೋಂಕಿನ 3ನೇ ಅಲೆ ಬರುವ ಸಾಧ್ಯತೆಯಿದೆ. ಮೊದಲಿನ ಅಲೆಯಲ್ಲಿ ಹಿರಿಯರನ್ನು, ಎರಡನೇ ಅಲೆಯಲ್ಲಿ ಯುವಜನರನ್ನು ಗುರಿಯಾಗಿಸಿಕೊಂಡಿದ್ದ ಸೋಂಕು, 3ನೇ ಅಲೆಯಲ್ಲಿ ಮಕ್ಕಳಿಗೆ ಹಾನಿ ಎಸಗುವ ಸಾಧ್ಯತೆಯಿದೆ ಎಂದು ಹಲವರು ಆತಂಕ ಸೂಚಿಸಿದ್ದಾರೆ. 3ನೇ ಅಲೆಯಲ್ಲಿ ಮಕ್ಕಳೇ ಹೆಚ್ಚು ಗುರಿಯಾಗುವ ಸಾಧ್ಯತೆಯಿದೆ. ಯಾಕೆಂದರೆ ವಯಸ್ಕರು ಈಗಾಗಲೇ ಸೋಂಕಿಗೆ ಒಳಗಾಗಿದ್ದಾರೆ ಅಥವಾ ಲಸಿಕೆ ಪಡೆದಿದ್ದಾರೆ ಎಂದು ಹಿರಿಯ ಹೃದಯರೋಗ ತಜ್ಞ ಡಾ. ದೇವಿಶೆಟ್ಟಿ ಹೇಳಿದ್ದಾರೆ.

ಸೋಂಕಿನ ಅಲೆ ನಿಶ್ಚಿತವಾಗಿದ್ದು, ಯಾವ ಸಂದರ್ಭದಲ್ಲಿ ಹರಡುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಹೊಸ ಪ್ರಬೇಧದ ಅಪಾಯ ಎದುರಿಸಲು ಲಸಿಕೆಯನ್ನು ಪರಿಷ್ಕರಿಸಬೇಕು ಎಂದು ಕೇಂದ್ರ ಸರಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಕೆ ವಿಜಯ್ ರಾಘವನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News