ದೇಶದಲ್ಲಿ ಕೋವಿಡ್ ಪ್ರಕರಣ ನಿಯಂತ್ರಣದಲ್ಲಿದ್ದರೂ ಸಾವಿನ ಪ್ರಮಾಣ ಕಳವಳಕಾರಿ

Update: 2021-05-19 03:50 GMT

ಹೊಸದಿಲ್ಲಿ, ಮೇ 19: ದೇಶದಲ್ಲಿ ಮಂಗಳವಾರ ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಅಲ್ಪ ಹೆಚ್ಚಳವಾಗಿದ್ದರೂ, ಸತತ ಮೂರನೇ ದಿನ ಹೊಸ ಪ್ರಕರಣಗಳ ಸಂಖ್ಯೆ ಮೂರು ಲಕ್ಷದ ಗಡಿಯೊಳಗೇ ಇವೆ. ಕಳೆದ 24 ಗಂಟೆಗಳಲ್ಲಿ 2,67,122 ಹೊಸ ಪ್ರಕರಣಗಳು ವರದಿಯಾಗಿದ್ದರೆ, 3,915 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಮೇ 6ರಂದು ಗರಿಷ್ಠ ಅಂದರೆ 4,14,554ನ್ನು ತಲುಪಿದ್ದ ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ ಮಂಗಳವಾರದ ವೇಳೆಗೆ 1.47 ಲಕ್ಷದಷ್ಟು ಕಡಿಮೆಯಾಗಿದೆ. ಕಳೆದ 12 ದಿನಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇಳಿದಿದ್ದರೂ, ಹೊಸ ಪ್ರಕರಣಗಳ ಸಂಖ್ಯೆ ವಿಶ್ವಮಟ್ಟದಲ್ಲಿ ಮಾತ್ರ ಇನ್ನೂ ಅತ್ಯಧಿಕವಾಗಿಯೇ ಇದೆ.

ಭಾರತದಲ್ಲಿ 2.6 ಲಕ್ಷ ಹೊಸ ಪ್ರಕರಣಗಳು ಮಂಗಳವಾರ ವರದಿಯಾಗಿದ್ದರೆ, ಎರಡನೇ ಸ್ಥಾನದಲ್ಲಿರುವ ಬ್ರೆಝಿಲ್‌ನಲ್ಲಿ ವರದಿಯಾಗಿರುವ ಪ್ರಕರಣಗಳು 40,941. ಅಮೆರಿಕದಲ್ಲಿ 17,984, ಅರ್ಜೆಂಟೀನಾದಲ್ಲಿ 16,350 ಮತ್ತು ಕೊಲಂಬಿಯದಲ್ಲಿ 15,093 ಪ್ರಕರಣಗಳು ಮಂಗಳವಾರ ವರದಿಯಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಸೋಂಕಿತರ ಸಾವಿನ ಪ್ರಮಾಣ ಕಡಿಮೆಯಾಗುತ್ತಿಲ್ಲ ಎನ್ನುವುದು ಕಳವಳಕಾರಿ ಅಂಶವಾಗಿದೆ.

33,059 ಪ್ರಕರಣಗಳು ವರದಿಯಾಗಿರುವ ತಮಿಳುನಾಡು ಅತ್ಯಧಿಕ ಪ್ರಕರಣಗಳು ದಾಖಲಾದ ರಾಜ್ಯಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದ್ದರು 30 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವ ಕೇರಳ ಹಾಗೂ ಕರ್ನಾಟಕ ನಂತರದ ಸ್ಥಾನಗಳಲ್ಲಿವೆ. ಮಹಾರಾಷ್ಟ್ರದಲ್ಲಿ 28,438, ಆಂಧ್ರದಲ್ಲಿ 21,320 ಪ್ರಕರಣಗಳು ಹೊಸದಾಗಿ ಕಾಣಿಸಿಕೊಂಡಿವೆ.

ಆದರೆ 11ಕ್ಕೂ ಹೆಚ್ಚು ರಾಜ್ಯಗಳಲ್ಲಿ 100ಕ್ಕೂ ಹೆಚ್ಚು ಸಾವು ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಅತ್ಯಧಿಕ ಎಂದರೆ 679 ಮಂದಿ ಸಾವಿಗೀಡಾಗಿದ್ದರೆ, ಕರ್ನಾಟಕದಲ್ಲಿ 525 ಮಂದಿ ಸಾವನ್ನಪ್ಪಿದ್ದಾರೆ. 364 ಸಾವು ಕಂಡಿರುವ ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ದಿಲ್ಲಿ (265), ಉತ್ತರ ಪ್ರದೇಶ (255) ಮತ್ತು ಪಂಜಾಬ್ (231) ನಂತರದ ಸ್ಥಾನಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News