ವಿವಾದಾತ್ಮಕ ಗೌಪ್ಯತಾ ನೀತಿ ಹಿಂಪಡೆಯಲು ವಾಟ್ಸ್ಆ್ಯಪ್ ಗೆ ಐಟಿ ಇಲಾಖೆ ಆದೇಶ

Update: 2021-05-19 18:30 GMT

ಹೊಸದಿಲ್ಲಿ, ಮೇ 19: ವಾಟ್ಸ್ಆ್ಯಪ್ ಜಾರಿಗೊಳಿಸಿರುವ ಹೊಸ ಗೌಪ್ಯತಾ ನೀತಿಯನ್ನು ಹಿಂಪಡೆಯುವಂತೆ ಕೇಂದ್ರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ವಾಟ್ಸ್ಆ್ಯಪ್ ಗೆ ಆದೇಶಿಸಿದೆ ಎಂದು ಮೂಲಗಳು ಹೇಳಿವೆ.

ವಾಟ್ಸ್ಆ್ಯಪ್ ನ ಗೌಪ್ಯತಾ ನೀತಿಯಲ್ಲಿ ಮಾಡಲಾಗಿರುವ ಬದಲಾವಣೆ ಮತ್ತು ಈ ಬದಲಾವಣೆಗಳನ್ನು ಜಾರಿಗೊಳಿಸಿದ ವಿಧಾನ ದೇಶದ ಕಾನೂನಿಗೆ ವಿರುದ್ಧವಾಗಿದ್ದು , ಮಾಹಿತಿ ನೀತಿ, ದತ್ತಾಂಶ ಸುರಕ್ಷತೆ ಮತ್ತು ಬಳಕೆದಾರರ ಆಯ್ಕೆಗೆ ಕೆಡುಕು ಉಂಟುಮಾಡುತ್ತದೆ. ಅಲ್ಲದೆ ದೇಶದ ನಾಗರಿಕರ ಹಕ್ಕು ಮತ್ತು ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದು ಐಟಿ ಇಲಾಖೆ ಹೇಳಿದೆ.

ಈ ಕುರಿತು ವಾಟ್ಸ್ಆ್ಯಪ್ ಗೆ ನೋಟಿಸ್ ಜಾರಿಗೊಳಿಸಿದ್ದು 7 ದಿನದೊಳಗೆ  ತೃಪ್ತಿದಾಯಕ ಪ್ರತಿಕ್ರಿಯೆ ಲಭ್ಯವಾಗದಿದ್ದರೆ ಕಾನೂನಿಗೆ ಅನುಗುಣವಾಗಿ ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿತ್ತು. ಮೇ 18ರಂದು  ಗೌಪ್ಯತಾ ನೀತಿ ಹಿಂಪಡೆಯುವಂತೆ ಮತ್ತೊಮ್ಮೆ  ಸೂಚಿಸಲಾಗಿದೆ. ದೇಶದ ನಾಗರಿಕರ ಹಕ್ಕು ಮತ್ತು ಹಿತಾಸಕ್ತಿ ಕಾಪಾಡುವುದು  ತನ್ನ ಸಾರ್ವಭೌಮ ಜವಾಬ್ದಾರಿಯಾಗಿದೆ ಎಂದು ವಾಟ್ಸ್ಆ್ಯಪ್ ಗೆ ತಿಳಿಸಲಾಗಿದೆ ಮತ್ತು ಭಾರತದ ಬಳಕೆದಾರರು ಮತ್ತು ಯುರೋಪಿಯನ್ ಬಳಕೆದಾರರ ನಡುವೆ ತಾರತಮ್ಯದಿಂದ ವರ್ತಿಸುತ್ತಿರುವ ಬಗ್ಗೆ ಆಕ್ಷೇಪಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಹಲವು ಭಾರತೀಯರು ದೈನಂದಿನ ಬದುಕಿನಲ್ಲಿ ಸಂವಹನಕ್ಕೆ ಮತ್ತು ಮಾಹಿತಿ ರವಾನೆಗೆ ವಾಟ್ಸ್ಆ್ಯಪ್ ಅನ್ನು ಬಳಸುತ್ತಿರುವುದು ನಿಮಗೆ ತಿಳಿದಿದೆ. ಆದರೆ ಭಾರತೀಯ ಬಳಕೆದಾರರ ವಿಷಯದಲ್ಲಿ ತಾರತಮ್ಯದ ಧೋರಣೆ ತಳೆದು ಹಲವು ಅನ್ಯಾಯದ ಷರತ್ತುಗಳನ್ನು ವಿಧಿಸಿರುವುದು ಸರಿಯಲ್ಲ. ಅಲ್ಲದೆ ವಾಟ್ಸ್ಆ್ಯಪ್ ಗೆ ತನ್ನಲ್ಲಿರುವ ಮಾಹಿತಿಯನ್ನು ಮಾತೃಸಂಸ್ಥೆ ಫೇಸ್ಬುಕ್ನೊಂದಿಗೆ ಹಂಚಿಕೊಳ್ಳುತ್ತಿರುವ ಬಗ್ಗೆಯೂ ದೂರು ಕೇಳಿ ಬಂದಿದೆ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆ ಸ್ಪಷ್ಟಪಡಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದ ಪ್ರಕರಣ ದಿಲ್ಲಿ ಹೈಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದ್ದು, ಇದೇ ಅಭಿಪ್ರಾಯವನ್ನು ಕೇಂದ್ರ ಸರಕಾರ ಹೈಕೋರ್ಟ್ಗೆ ತಿಳಿಸಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News