ಮುಂದಿನ ವರ್ಷದ ಉ.ಪ್ರ ಚುನಾವಣೆ ಮೇಲೆ ಕೋವಿಡ್ ಕರಿಛಾಯೆ: ಬಿಜೆಪಿ-ಆರೆಸ್ಸೆಸ್ ಸಭೆಯಲ್ಲಿ ಭಾಗವಹಿಸಿದ ಮೋದಿ, ಶಾ; ವರದಿ

Update: 2021-05-24 07:45 GMT

ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕ ತಂದೊಡ್ಡಿರುವ ಸಮಸ್ಯೆಯಿಂದ ಪಕ್ಷದ ಮೇಲಾಗಿರುವ ಪರಿಣಾಮ ಹಾಗೂ ಇದು  ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮೇಲೆ ಬೀರಬಹುದಾದ ಪ್ರಭಾವದ ಕುರಿತಂತೆ ಚರ್ಚಿಸಲು ರವಿವಾರ ಸಂಜೆ ಬಿಜೆಪಿ ಹಾಗೂ ಆರೆಸ್ಸೆಸ್ ನಾಯಕರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗವಹಿಸಿದ್ದರು.

ಮುಂದಿನ ವರ್ಷದ ಚುನಾವಣೆಗಿಂತ ಮುನ್ನ ಪಕ್ಷ ಹಾಗೂ ಸರಕಾರದ ವರ್ಚಸ್ಸಿಗೆ ಉಂಟಾಗಿರುವ ಧಕ್ಕೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ಸಾಧ್ಯತೆಯಿದೆ.

ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ, ಆರೆಸ್ಸೆಸ್ ನಾಯಕ ದತ್ತಾತ್ರೇಯ ಹೊಸಬಾಳೆ ಹಾಗೂ ಉತ್ತರ ಪ್ರದೇಶದ ಸಂಘಟನಾ ಉಸ್ತುವಾರಿ ಸುನಿಲ್ ಬನ್ಸಾಲ್ ಕೂಡ ಭಾಗವಹಿಸಿದ್ದರು. ಕೋವಿಡ್ ಸಾಂಕ್ರಾಮಿಕ ಹಾಗೂ ಅದನ್ನು ಸರಕಾರಿ ಮಟ್ಟದಲ್ಲಿ ನಿಭಾಯಿಸಿದ ರೀತಿ ಕುರಿತಂತೆ ಸಾರ್ವಜನಿಕರ ಮನಸ್ಸಿನಲ್ಲಿರುವ ಅಸಮಾಧಾನದಿಂದ ಬಿಜೆಪಿ ಹಾಗೂ ಆರೆಸ್ಸೆಸ್ ಚಿಂತೆಗೀಡಾಗಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ.

ಕೋವಿಡ್ ಎರಡನೇ ಅಲೆ ತಂದೊಡ್ಡಿದ ಸವಾಲುಗಳನ್ನು ನಿಭಾಯಿಸಲು ಪ್ರಧಾನಿ ಮೋದಿ ವಿಫಲರಾಗಿದ್ದಾರೆಂಬ ವ್ಯಾಪಕ ಟೀಕೆಯ ನಡುವೆ ದೇಶಾದ್ಯಂತ ಉಂಟಾದ ಔಷಧಿ, ಆಕ್ಸಿಜನ್, ಆಸ್ಪತ್ರೆ ಬೆಡ್, ಲಸಿಕೆ ಕೊರತೆಗಳು ಸರಕಾರದ ವರ್ಚಸ್ಸಿಗೆ ಬಹಳಷ್ಟು ಧಕ್ಕೆ ಉಂಟು ಮಾಡಿದೆ ಎಂಬ ಭೀತಿಯೂ ಬಿಜೆಪಿ, ಆರೆಸ್ಸೆಸ್ ನಾಯಕರಲ್ಲಿದೆ.

ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶ ಕೂಡ ಕೋವಿಡ್‍ನಿಂದ ಬಹಳಷ್ಟ ಬಾಧಿತ ರಾಜ್ಯವಾಗಿದೆಯಲ್ಲದೆ ಗಂಗಾ ನದಿಯಲ್ಲಿ ತೇಲಿ ಬಂದ ಹಲವಾರು ಶವಗಳೂ ಜನರನ್ನು ಬೆಚ್ಚಿ ಬೀಳಿಸಿರುವ ಜತೆಗೆ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News