ಇಸ್ರೇಲ್ ನ ನೂರಾರು ಫೆಲೆಸ್ತೀನಿ ನಾಗರಿಕರ ಬಂಧನ: ಇಸ್ರೇಲ್ ಪೊಲೀಸ್ ಘೋಷಣೆ

Update: 2021-05-25 16:52 GMT
photo: twitter(@MiddleEastEye)

ಜೆರುಸಲೇಮ್, ಮೇ 25: ಆಕ್ರಮಿತ ಪೂರ್ವ ಜೆರುಸಲೇಮ್ ಮತ್ತು ಗಾಝಾ ಪಟ್ಟಿಯಲ್ಲಿರುವ ಫೆಲೆಸ್ತೀನೀಯರ ಪರವಾಗಿ ಇತ್ತೀಚೆಗೆ ನಡೆದಿರುವ ಧರಣಿಗಳಲ್ಲಿ ಭಾಗವಹಿಸಿರುವುದಕ್ಕಾಗಿ ಮುಂದಿನ ದಿನಗಳಲ್ಲಿ ಇಸ್ರೇಲ್ನ ನೂರಾರು ಫೆಲೆಸ್ತೀನಿ ನಾಗರಿಕರನ್ನು ಬಂಧಿಸುವುದಾಗಿ ಇಸ್ರೇಲ್ ಪೊಲೀಸರು ಘೋಷಿಸಿದ್ದಾರೆ.

ಫೆಲೆಸ್ತೀನಿ ಪ್ರದೇಶಗಳನ್ನು ಆಕ್ರಮಿಸಿ ಮನೆಗಳನ್ನು ನಿರ್ಮಿಸಿಕೊಂಡಿರುವವರು ನಡೆಸುತ್ತಿರುವ ಹಿಂಸಾಚಾರ, ಅಲ್-ಅಕ್ಸಾ ಮಸೀದಿಯ ಆವರಣದಲ್ಲಿ ಫೆಲೆಸ್ತೀನೀಯರ ವಿರುದ್ಧ ಇಸ್ರೇಲ್ ಪಡೆಗಳು ನಡೆಸಿರುವ ದಮನ ಕಾರ್ಯಾಚರಣೆ ಮತ್ತು ಗಾಝಾ ಮೇಲೆ ಇಸ್ರೇಲ್ ನಡೆಸಿದ 11 ದಿನಗಳ ಬಾಂಬ್ ದಾಳಿಗಳನ್ನು ವಿರೋಧಿಸುವ ಪ್ರದರ್ಶನಗಳಲ್ಲಿ ಭಾಗವಹಿಸಿರುವುದಕ್ಕಾಗಿ ಇಸ್ರೇಲ್ ನಾಗರಿಕರಾಗಿರುವ ಫೆಲೆಸ್ತೀನೀಯರನ್ನು ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.

ಮೇ 9ರ ಬಳಿಕ ಈವರೆಗೆ ಸುಮಾರು 1,550 ಜನರನ್ನು ಬಂಧಿಸಲಾಗಿದೆ ಹಾಗೂ ಕಳೆದ ಎರಡು ವಾರಗಳ ಅವಧಿಯಲ್ಲಿ ಇಸ್ರೇಲ್ನಾದ್ಯಂತದ ನಗರಗಳು ಮತ್ತು ಪಟ್ಟಣಗಳಲ್ಲಿ ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸಿದವರನ್ನು ಬಂಧಿಸುವ ಅಭಿಯಾನ ಮುಂದುವರಿಯಲಿದೆ ಎಂದು ರವಿವಾರ ರಾತ್ರಿ ನೀಡಿರುವ ಹೇಳಿಕೆಯಲ್ಲಿ ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ.

ಇಸ್ರೇಲ್ ನ ಫೆಲೆಸ್ತೀನ್ ನಾಗರಿಕರ ವಿರುದ್ಧ ಯುದ್ಧ ಘೋಷಣೆ

ಫೆಲೆಸ್ತೀನ್ ನಾಗರಿಕರ ವಿರುದ್ಧದ ಯುದ್ಧ ಇಸ್ರೇಲ್ ಪೊಲೀಸರ ಬಂಧನ ಅಭಿಯಾನವು ಫೆಲೆಸ್ತೀನ್ ಪ್ರದರ್ಶನಕಾರರು, ರಾಜಕೀಯ ಹೋರಾಟಗಾರರು ಮತ್ತು ಅಲ್ಪಸಂಖ್ಯಾತರ ವಿರುದ್ಧದ ಯುದ್ಧವಾಗಿದೆ ಎಂಬುದಾಗಿ ಇಸ್ರೇಲ್ನಲ್ಲಿರುವ ಅರಬ್ ಅಲ್ಪಸಂಖ್ಯಾತ ಹಕ್ಕುಗಳಿಗಾಗಿನ ಕಾನೂನು ಕೇಂದ್ರ ಅದಲಾಹ್ನ ಮಹಾನಿರ್ದೇಶಕ ಹಸನ್ ಜಬರೀನ್ ಬಣ್ಣಿಸಿದ್ದಾರೆ.

ಸಾಮೂಹಿಕ ಬಂಧನ ಕಾರ್ಯಾಚರಣೆಯು ಇಸ್ರೇಲ್ನಲ್ಲಿರುವ ಫೆಲೆಸ್ತೀನ್ ನಾಗರಿಕರ ವಿರುದ್ಧದ ಸೇನಾ ಯುದ್ಧವಾಗಿದೆ ಎಂದು ಅಲ್-ಜಝೀರಗೆ ನೀಡಿದ ಹೇಳಿಕೆಯಲ್ಲಿ ಜಬರೀನ್ ಹೇಳಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News