ಮ್ಯಾಂಚೆಸ್ಟರ್ ವಿರುದ್ಧ ಗೆದ್ದು ಯುರೋಪಾ ಲೀಗ್ ಜಯಿಸಿದ ವಿಲ್ಲರ್ರಿಯಲ್

Update: 2021-05-27 05:44 GMT
Photo credit: twitter@EuropaLeague

ಪೋಲ್ಯಾಂಡ್, ಮೇ 27: ಯುರೋಪಾ ಲೀಗ್ ಫೈನಲ್‌ನಲ್ಲಿ ಪ್ರಬಲ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 11-10 ಗೋಲುಗಳಿಂದ ಸೋಲಿಸಿದ ವಿಲ್ಲರ್ರಿಯಲ್ ಕ್ಲಬ್ ಮೊಟ್ಟಮೊದಲ ಬಾರಿಗೆ ಪ್ರಮುಖ ಟ್ರೋಫಿ ಗೆದ್ದುಕೊಂಡಿದೆ. ನಿರ್ಣಾಯಕ ಶೂಟೌಟ್‌ನ ಸ್ಪಾಟ್‌ಕಿಕ್‌ನಲ್ಲಿ ಮ್ಯಾಂಚೆಸ್ಟರ್ ಗೋಲ್‌ಕೀಪರ್ ಡೇವಿಡ್ ಡೆ ಜೆಯಾ ಅವರು ಚೆಂಡನ್ನು ಗುರಿ ತಲುಪಿಸುವಲ್ಲಿ ವಿಫಲರಾದಲ್ಲಿಗೆ ಮ್ಯಾಂಚೆಸ್ಟರ್ ಯುನೈಟೆಡ್‌ನ ನಾಲ್ಕು ವರ್ಷಗಳ ಪ್ರಶಸ್ತಿ ಬರ ಮುಂದುವರಿಯಿತು.

 ಸ್ಪೇನ್‌ನ ವಿಲ್ಲರ್ರಿಯಲ್ ಮೊಟ್ಟಮೊದಲ ಬಾರಿಗೆ ಯುರೋಪಿಯನ್ ಫೈನಲ್ ತಲುಪಿತ್ತು. ಗೆರಾರ್ಡ್ ಮೊರೆನೊ 29ನೇ ನಿಮಿಷದಲ್ಲೇ ವಿಲ್ಲರ್ರಿಯಲ್ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಆದರೆ ಮ್ಯಾಂಚೆಸ್ಟರ್ ಯುನೈಟೆಡ್‌ನ ಎಡಿಸನ್ ಕವಾನಿ ಎರಡನೇ ಅವಧಿಯ ಆರಂಭದಲ್ಲೇ ಸಮಬಲ ಸಾಧಿಸಲು ನೆರವಾದರು. ಹೆಚ್ಚುವರಿ ಅವಧಿ ಮುಕ್ತಾಯಕ್ಕೆ ಉಭಯ ತಂಡಗಳು 1-1 ಸಮಬಲದಲ್ಲಿ ಇದ್ದ ಕಾರಣ ಪೆನಾಲ್ಟಿ ಶೂಟೌಟ್ ಮೂಲಕ ವಿಜೇತರನ್ನು ನಿರ್ಧರಿಸಬೇಕಾಯಿತು.

ಪೆನಾಲ್ಟಿ ಶೂಟೌಟ್‌ನಲ್ಲಿ ಎರಡೂ ತಂಡಗಳ ಎಲ್ಲ 10 ಆಟಗಾರರು ತಮ್ಮ ಪೆನಾಲ್ಟಿಗಳನ್ನು ಗೋಲಾಗಿ ಪರಿವರ್ತಿಸಿದರು. 11ನೇ ಗೋಲನ್ನು ಎರಡೂ ತಂಡದ ಗೋಲ್‌ಕೀಪರ್‌ಗಳು ಹೊಡೆಯಬೇಕಾಯಿತು. ವಿಲ್ಲರ್ರಿಯಲ್ ತಂಡದ ಗೋಲ್‌ಕೀಪರ್ ಗೆರೊನಿಮೊ ರುಲ್ಲಿ ತಮ್ಮ ಸ್ಪಾಟ್‌ಕಿಕ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರಲ್ಲದೇ ಎದುರಾಳಿ ತಂಡದ ಗೋಲ್‌ಕೀಪರ್ ಹೊಡೆದ ಚೆಂಡನ್ನು ಅದ್ಭುತವಾಗಿ ಹಿಡಿಯುವ ಮೂಲಕ ಗೆಲುವಿನ ರೂವಾರಿ ಎನಿಸಿದರು.

1980ರ ಬಳಿಕ ಮೊದಲ ಬಾರಿಗೆ ಮ್ಯಾಂಚೆಸ್ಟರ್ ಯುನೈಟೆಡ್ ಸತತ ನಾಲ್ಕು ಸೀಸನ್‌ಗಲಲ್ಲಿ ಟ್ರೋಫಿ ಇಲ್ಲದೇ ವಾಪಸ್ಸಾಗಬೇಕಾಯಿತು. 2017ರಲ್ಲಿ ತಂಡ ಕೊನೆಯ ಕಪ್ ಗೆದ್ದಿತ್ತು. ಪಂದ್ಯದಲ್ಲಿ ಯುನೈಟೆಡ್ ಆರಂಭದಲ್ಲಿ ಪ್ರಾಬಲ್ಯ ಮೆರೆದರೂ ವಿಲ್ಲರ್ರಿಯಲ್ ಅಂತಿಮವಾಗಿ ಗೆಲುವಿನ ನಗೆ ಬೀರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News