ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌: ಫೈನಲ್ ಪಂದ್ಯ ಡ್ರಾ ಆದರೆ ಟ್ರೋಫಿ ಯಾರಿಗೆ ?

Update: 2021-05-28 12:13 GMT

ಹೊಸದಿಲ್ಲಿ: ಮೊದಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ   ಫೈನಲ್ ಪಂದ್ಯವು ಒಂದು ವೇಳೆ ಡ್ರಾ ಅಥವಾ ಟೈನಲ್ಲಿ ಕೊನೆಗೊಂಡರೆ ಭಾರತ ಹಾಗೂ ನ್ಯೂಝಿಲ್ಯಾಂಡ್ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಿ ಟ್ರೋಫಿ ಹಂಚಲಾಗುತ್ತದೆ ಎಂದು ಐಸಿಸಿ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಜೂನ್ 18 ರಿಂದ 22 ರವರೆಗೆ ನಡೆಯಲಿರುವ 5 ದಿನಗಳ ಪಂದ್ಯದಲ್ಲಿ ಸಮಯವನ್ನು ಕಳೆದುಕೊಂಡರೆ ಮಾತ್ರ ಮೀಸಲು ದಿನ ಕಾರ್ಯರೂಪಕ್ಕೆ ಬರುತ್ತದೆ.

ಮೀಸಲು ದಿನವು ಕೇವಲ ಆಕಸ್ಮಿಕ ಮಾನದಂಡವಾಗಿರುತ್ತದೆ. ಐದು ಪೂರ್ಣ ದಿನಗಳ ಆಟದಲ್ಲಿ ಉಭಯ ತಂಡಗಳು ಫಲಿತಾಂಶ ಪಡೆಯಲು ವಿಫಲವಾದರೆ, ಫಲಿತಾಂಶವನ್ನು ಪಡೆಯಲು ಮೀಸಲು ದಿನವನ್ನು ಬಳಸಲಾಗುವುದಿಲ್ಲ ಎಂದು ಐಸಿಸಿ ಶುಕ್ರವಾರ ಪುನರುಚ್ಚರಿಸಿದೆ.

"ಐದು ಪೂರ್ಣ ದಿನಗಳ ಆಟವನ್ನು ಖಚಿತಪಡಿಸಿಕೊಳ್ಳಲು ಮೀಸಲು ದಿನವನ್ನು ನಿಗದಿಪಡಿಸಲಾಗಿದೆ, ಕಳೆದುಹೋದ ಆಟದ ಸಮಯವನ್ನು ಮರುಪಡೆಯಲು ಸಾಧ್ಯವಾಗದಿದ್ದರೆ ಮಾತ್ರ ಮೀಸಲು ದಿನವನ್ನು ಬಳಸಲಾಗುತ್ತದೆ. ಐದು ಪೂರ್ಣ ದಿನಗಳ ಆಟದ ನಂತರ ಫಲಿತಾಂಶ ಪಡೆಯಲು ಸಾಧ್ಯವಾಗದಿದ್ದರೆ ಹೆಚ್ಚುವರಿ ದಿನ ಇರುವುದಿಲ್ಲ.  ಅಂತಹ ಸನ್ನಿವೇಶದಲ್ಲಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News