ಕಠಿಣ ಪರಿಶ್ರಮದಿಂದ ಯುಪಿಎಸ್ಸಿ ತೇರ್ಗಡೆಗೊಂಡು ಎಸಿಪಿ ಆಗಲಿರುವ ಪೊಲೀಸ್‌ ಕಾನ್‌ ಸ್ಟೇಬಲ್‌ ಫಿರೋಝ್ ಆಲಂ

Update: 2021-05-28 10:46 GMT
Photo: indiatoday.in

ಹೊಸದಿಲ್ಲಿ : ದಿಲ್ಲಿಯ ಪೊಲಿಸ್ ಕಾನ್‍ಸ್ಟೇಬಲ್ ಒಬ್ಬರು ತಮ್ಮ ಕಠಿಣ ಪರಿಶ್ರಮ ಮತ್ತು  ಬದ್ಧತೆಯಿಂದ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‍ಸಿ) ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ.

ದಿಲ್ಲಿ ಪೊಲೀಸರ ಪಿಸಿಆರ್ ಘಟಕದಲ್ಲಿ ನಿಯೋಜಿಸಲ್ಪಟ್ಟಿರುವ ಫಿರೋಝ್ ಆಲಂ ಅವರು ಈಗ ಯುಪಿಎಸ್‍ಸಿ ಪರೀಕ್ಷೆ ತೇರ್ಗಡೆಯಾಗಿರುವುದರಿಂದ ಎಸಿಪಿ ಹುದ್ದೆ ವಹಿಸಲು ಸಾಧ್ಯವಾಗುವಂತೆ ಅಗತ್ಯ ತರಬೇತಿ ಪಡೆಯುತ್ತಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಕಾನ್‍ಸ್ಟೇಬಲ್ ಆಗಿರುವ ಅವರು  ಸೇವೆ ಸಲ್ಲಿಸುತ್ತಿರುವಾಗಲೇ ತಮ್ಮ ಬಿಡುವಿನ ವೇಳೆಯಲ್ಲಿ ಯುಪಿಎಸ್‍ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

ಸದ್ಯ ಅವರು ಝಡೋಡಕಲದಲ್ಲಿರುವ ದಿಲ್ಲಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದು ಮುಂದಿನ ವರ್ಷದ ಮಾರ್ಚ್ ವೇಳೆಗೆ ಎಸಿಪಿ ಹುದ್ದೆ ವಹಿಸಲಿದ್ದಾರೆ.

ಉತ್ತರ ಪ್ರದೇಶದ ಹಾಪುರ್ ಪಿಲ್ಖುವ ಜಿಲ್ಲೆಯವರಾಗಿರುವ ಫಿರೋಝ್ ಖಾನ್ ಅವರು ಆಝಂಪುರ್ ದೆಹ್ರಾ ಗ್ರಾಮದ ನಿವಾಸಿಗಳಾದ ಮುಹಮ್ಮದ್ ಶಹಾದತ್ ಹಾಗೂ ಮುನ್ನಿ ಬಾನೋ ದಂಪತಿಯ ಪುತ್ರ. ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ನಂತರ  ಅವರು 2010ರಲ್ಲಿ ದಿಲ್ಲಿ ಪೊಲೀಸ್ ಸೇವೆಗೆ ಸೇರ್ಪಡೆಗೊಂಡಿದ್ದರು.

ತಮ್ಮ ಹಿರಿಯ ಅಧಿಕಾರಿಗಳ ಸ್ಥಾನಮಾನ, ಕಾರ್ಯವೈಖರಿಯಿಂದ ಪ್ರಭಾವಿತರಾದ ಫಿರೋಝ್ ತಾನು ಕೂಡ ಅವರಂತೆಯೇ ಆಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಿ ಈಗ ತಮ್ಮ ಸತತ ಪ್ರಯತ್ನದಿಂದ ಸಫಲತೆ ಸಾಧಿಸಿದ್ದಾರೆ.

ಕೃಪೆ: indiatoday.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News