ಕೋವಿಡ್-19 ಗೆ ಪೋಷಕರನ್ನು ಕಳೆದುಕೊಂಡ ಮಕ್ಕಳ ಹೆಸರಿನಲ್ಲಿ 5 ಲಕ್ಷ ರೂ. ಠೇವಣಿ: ತಮಿಳುನಾಡು ಸರಕಾರ ನಿರ್ಧಾರ

Update: 2021-05-29 10:09 GMT

ಚೆನ್ನೈ: ತಮಿಳುನಾಡಿನಲ್ಲಿ ಕೋವಿಡ್-19 ಗೆ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಪರಿಹಾರ ಕ್ರಮಗಳ ಪ್ಯಾಕೇಜ್ ಅನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶನಿವಾರ ಪ್ರಕಟಿಸಿದ್ದಾರೆ. ಸಚಿವಾಲಯದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಈ ಸೋಂಕಿನಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ರಾಜ್ಯ ಸರಕಾರದಿಂದ ಈ ಕೆಳಗಿನ ಪರಿಹಾರ ನೆರವು ದೊರೆಯುತ್ತದೆ:

1. ಕೋವಿಡ್-19 ನಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಹೆಸರಿನಲ್ಲಿ 5 ಲಕ್ಷ ರೂ.ಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಲಾಗುವುದು ಹಾಗೂ  18 ವರ್ಷ ಪೂರ್ಣಗೊಂಡಾಗ ಅವರಿಗೆ ಬಡ್ಡಿಯೊಂದಿಗೆ ಮೊತ್ತವನ್ನು ನೀಡಲಾಗುತ್ತದೆ.

2. ಈ ಮಕ್ಕಳಿಗೆ ಸರಕಾರಿ ಮನೆಗಳು ಹಾಗೂ ಹಾಸ್ಟೆಲ್‌ಗಳಲ್ಲಿ ಆದ್ಯತೆಯ ಆಧಾರದ ಮೇಲೆ ಪ್ರವೇಶ ನೀಡಲಾಗುವುದು.

3. ಹಾಸ್ಟೆಲ್ ಶುಲ್ಕ ಸೇರಿದಂತೆ ಪದವಿವರೆಗೆ ಈ ಮಕ್ಕಳ ಎಲ್ಲಾ ಶೈಕ್ಷಣಿಕ ವೆಚ್ಚಗಳನ್ನು ರಾಜ್ಯ ಸರಕಾರ ಭರಿಸುತ್ತದೆ.

4. ಈ ಸೋಂಕಿನಿಂದ ಗಂಡನನ್ನು ಕಳೆದುಕೊಂಡು ಮಕ್ಕಳನ್ನು ಹೊಂದಿರುವ ಮಹಿಳೆಯರಿಗೆ 3 ಲಕ್ಷ ರೂಪಾಯಿಗಳನ್ನು ತಕ್ಷಣದ ಪರಿಹಾರ ಸಹಾಯವಾಗಿ ನೀಡಲಾಗುವುದು.  ಪತ್ನಿಯನ್ನು ಕಳೆದುಕೊಂಡು ಮಕ್ಕಳನ್ನು ಹೊಂದಿರುವ ಪುರುಷರಿಗೆ ಇದೇ ರೀತಿಯ ಸಹಾಯವನ್ನು ನೀಡಲಾಗುವುದು.

5. ಸಂಬಂಧಿಕರು ಅಥವಾ ಪಾಲಕರು ಆರೈಕೆ ಮಾಡುತ್ತಿರುವ ಈ ಮಕ್ಕಳಿಗೆ 18 ವರ್ಷ ತುಂಬುವವರೆಗೆ ತಿಂಗಳಿಗೆ 3,000 ರೂ.

6. ಜಿಲ್ಲಾ ಮಟ್ಟದಲ್ಲಿ ವಿಶೇಷ ಸಮಿತಿಯು ಈ ಮಕ್ಕಳ ಶೈಕ್ಷಣಿಕ ಹಾಗೂ  ಇತರ ಯೋಗಕ್ಷೇಮವನ್ನು ಮೇಲ್ವಿಚಾರಣೆ ಮಾಡುತ್ತದೆ;

7. ಎಲ್ಲಾ ಸರಕಾರಿ ಕಲ್ಯಾಣ ಯೋಜನೆಗಳನ್ನು ಈ ಮಕ್ಕಳಿಗೆ ಆದ್ಯತೆಯ ಆಧಾರದ ಮೇಲೆ ವಿಸ್ತರಿಸಲಾಗುವುದು. ತಮ್ಮ ಜೀವನ ಸಂಗಾತಿಯನ್ನು ಕಳೆದುಕೊಂಡಿರುವ ಹಾಗೂ  ಮಕ್ಕಳನ್ನು ಹೊಂದಿರುವ ಪುರುಷ ಅಥವಾ ಮಹಿಳೆ ಈ ರಿಯಾಯತಿಯನ್ನು ಪಡೆಯುತ್ತಾರೆ.

8. ಕೋವಿಡ್-19 ಗೆ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಮೇಲಿನ ಪರಿಹಾರ ಸಹಾಯವನ್ನು ಅನುಷ್ಠಾನಗೊಳಿಸಲು ಮಾರ್ಗಸೂಚಿಗಳನ್ನು ರೂಪಿಸಲು ಹಣಕಾಸು ಕಾರ್ಯದರ್ಶಿ ನೇತೃತ್ವದಲ್ಲಿ ಹಾಗೂ  ಎನ್‌ಜಿಒಗಳು,  ಇತರ ಅಧಿಕಾರಿಗಳನ್ನು ಒಳಗೊಂಡ ಸ್ಟೀರಿಂಗ್ ಸಮಿತಿಯನ್ನು ರಚಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News