​12 ವರ್ಷಗಳಿಂದ ತಾಯ್ತನಕ್ಕೆ ಕಾಯುತ್ತಿದ್ದ ಮಹಿಳೆ ಹೆರಿಗೆ ಬಳಿಕ ಕೋವಿಡ್‌ಗೆ ಬಲಿ

Update: 2021-06-07 05:17 GMT

ಅಹ್ಮದಾಬಾದ್ : ಹನ್ನೆರಡು ವರ್ಷಗಳಿಂದ ತಾಯ್ತನದ ಸಂಭ್ರಮಕ್ಕಾಗಿ ಕಾತರಿಸುತ್ತಿದ್ದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ತಕ್ಷಣ ಕೋವಿಡ್-19 ಸೋಂಕಿಗೆ ಬಲಿಯಾದ ಹೃದಯ ವಿದ್ರಾವಕ ಘಟನೆ ಗುಜರಾತ್‌ನ ಆನಂದ್ ಜಿಲ್ಲೆಯ ಪಿಪ್ಲಜ್ ಎಂಬಲ್ಲಿಂದ ವರದಿಯಾಗಿದೆ.

ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಜಲ್ಪಾ ಪಟೇಲ್ ಎಂಬ ಮಹಿಳೆಯ ಆರೋಗ್ಯ ಸ್ಥಿತಿ ಕ್ಷೀಣಿಸಿದಾಗ ಹೆರಿಗೆ ಮಾಡಿಸಲಾಯಿತು. ಎಪ್ರಿಲ್ 26ರಂದು ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿ ಮರುದಿನವೇ ಕೊನೆಯುಸಿರೆಳೆದರು. ಹಲವು ಬಾರಿ ಐವಿಎಫ್ ಚಿಕಿತ್ಸೆ ಪಡೆದಿದ್ದ ಮಹಿಳೆ, ಸಂತಾನಪ್ರಾಪ್ತಿಗಾಗಿ 12 ವರ್ಷದಿಂದ ಹಂಬಲಿಸುತ್ತಿದ್ದರು.

"ಕಳೆದ ವರ್ಷ ಸಾಂಕ್ರಾಮಿಕ ತಲೆದೋರಿದಾಗ ನಾವು ಎಲ್ಲ ಚಿಕಿತ್ಸೆ ಸ್ಥಗಿತಗೊಳಿಸಿದ್ದೆವು. ಅದೃಷ್ಟವಶಾತ್ ಅವರು ಸಹಜವಾಗಿಯೇ ಗರ್ಭ ಧರಿಸಿದರು. ಆದರೆ ಆ ಸಂತಸ ಅಲ್ಪಕಾಲದ್ದಾಯಿತು. ಮಗು ಹುಟ್ಟಿದ ತಕ್ಷಣವೇ ಆಕೆ ಕೊನೆಯುಸಿರೆಳೆದರು. ಆದರೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದೇನೆ ಎನ್ನುವುದು ಆಕೆಗೆ ಸಾಯುವ ಮುನ್ನ ಅರಿವಿಗೆ ಬಂದಿತ್ತು" ಎಂದು ಪತಿ ಚೇತನ್ ಹೇಳಿದ್ದಾರೆ.

ಈ ದಂಪತಿಗೆ 13 ವರ್ಷದ ಹೆಣ್ಣುಮಗಳಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದೆ. ಎರಡನೇ ಮಗು ಪಡೆಯುವ ಬಯಕೆ ಜಲ್ಪಾಗೆ ಇತ್ತು ಎಂದು ಅವರು ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News