ಕೇರಳ ಅಭಿವೃದ್ಧಿ ಮಾದರಿ ಮತ್ತು ಕೇರಳದ ರಾಜಕೀಯ

Update: 2021-06-07 19:30 GMT

ಕೇರಳದ ಜನರು ದೊಡ್ಡ ಮಟ್ಟದಲ್ಲಿ ನಿರಂತರವಾಗಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರ ಪರಿಣಾಮ ಪ್ರಶ್ನೆ ಮಾಡುವ ಹಾಗೂ ಪ್ರತಿಭಟನಾ ಮನೋಭಾವಗಳು ಬೆಳೆದವು. ಜೊತೆಗೆ ಶೈಕ್ಷಣಿಕ ಅಭಿವೃದ್ಧಿಗೆ ಆಳುತ್ತಾ ಬಂದ ಸರಕಾರಗಳು ಒತ್ತುಕೊಡಬೇಕಾದ ಒತ್ತಡ ಜನರಿಂದ ಇದ್ದಿದ್ದರಿಂದಾಗಿ ಜನರ ತಿಳುವಳಿಕಾ ಮಟ್ಟ, ರಾಜಕೀಯ ಪ್ರಜ್ಞೆ ದೇಶದ ಉಳಿದ ಭಾಗಗಳಿಗಿಂತಲೂ ಹೆಚ್ಚಿನ ಮಟ್ಟ ಸಾಧಿಸಿತು. ಯಾವುದೇ ಒಂದು ಗುಂಪು ಸರಕಾರಿ ಅಧಿಕಾರ ಕೇಂದ್ರಗಳ ಮೇಲೆ ಹಿಡಿತ ಸಾಧಿಸದಂತೆ ನೋಡಿಕೊಳ್ಳಲು ಕೇರಳದ ಜನರು ಶ್ರಮಿಸುತ್ತಾ ಬಂದಿದ್ದಾರೆ.


ಇಂಡಿಯಾದ ದಕ್ಷಿಣದ ತುದಿಯ ಪಶ್ಚಿಮಕ್ಕೆ ಚಾಚಿಕೊಂಡಿರುವ ಪುಟ್ಟ ರಾಜ್ಯ ಕೇರಳ. ಸುಮಾರು ಮೂರುವರೆ ಕೋಟಿ ಜನಸಂಖ್ಯೆಯಿರುವ ಈ ರಾಜ್ಯದ ಶೇ. 97ಕ್ಕೂ ಹೆಚ್ಚು ಜನರು ವ್ಯವಹರಿಸುವ ಪ್ರಮುಖ ಆಡುಭಾಷೆ ಮಲಯಾಳಂ. ಆದರೆ ತುಳು, ಕನ್ನಡ, ತಮಿಳು, ಕೊಂಕಣಿ, ಕೊಡವ, ಕೊರಗ, ಜೇನು ಕುರಂಬ, ಇರುಳ ಮೊದಲಾದ ಸುಮಾರು ನಲವತ್ತಕ್ಕೂ ಹೆಚ್ಚು ಆಡುಭಾಷೆಗಳ ಜನರು ಇಲ್ಲಿದ್ದಾರೆ. 2011ರ ಗಣತಿಯ ಪ್ರಕಾರ ಪುರುಷರಿಗಿಂತ ಹೆಚ್ಚು ಮಹಿಳೆಯರಿದ್ದಾರೆ. ಕೇರಳದ ಲಿಂಗ ಅನುಪಾತದ ಪ್ರಮಾಣ ಸಾವಿರದ ಎಂಭತ್ತು ಮಹಿಳೆಯರಿಗೆ ಸಾವಿರ ಪುರುಷರು ಎಂದಾಗಿದೆ. ಫಲವಂತಿಕೆಯ ಪ್ರಮಾಣ 2016ರ ನೀತಿ ಆಯೋಗದ ವರದಿ ಪ್ರಕಾರ 1.8ರಷ್ಟಿದೆ. 2020-21ರ ಅಂಕಿ ಅಂಶದ ಪ್ರಕಾರ ಕೇರಳದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) 9.8ಲಕ್ಷ ಕೋಟಿಗಳಾಗಿವೆ. ದೇಶದ ಮಟ್ಟದಲ್ಲಿ ಜಿಡಿಪಿಯಲ್ಲಿ ಒಂಭತ್ತನೇ ಸ್ಥಾನದಲ್ಲಿದೆ. ಜಿಡಿಪಿ ಬೆಳವಣಿಗೆ ದರ ಶೇ. 11.6 ರಷ್ಟಿದೆ. 2018ರ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿ ಕೇರಳ ಇತ್ತು. ಕೇರಳದ ಅಭಿವೃದ್ಧಿದರ 2016ರಿಂದ 2020ರ ವರೆಗೆ ರಾಷ್ಟ್ರಿಯ ದರಕ್ಕಿಂತಲೂ ಹೆಚ್ಚಿನದಾಗಿತ್ತು. ಹಿಂದೂ ಎಂದು ಬಿಂಬಿಸಲ್ಪಟ್ಟಿರುವ ಜಾತಿಗಳು 2011ರ ಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯ ಶೇ. 54ರಷ್ಟು ಇದ್ದರೆ, ಮುಸ್ಲಿಮರು ಶೇ. 26.6 ರಷ್ಟು, ಕ್ರಿಶ್ಚಿಯನ್ನರು ಶೇ. 18.4ರಷ್ಟು ಇದ್ದಾರೆ. ಹಿಂದೂ ಎಂದು ಬಿಂಬಿಸಲ್ಪಟ್ಟವರಲ್ಲಿ ದಲಿತರ ಸಂಖ್ಯೆ ಶೇ. 5.8ರಷ್ಟು, ಆದಿವಾಸಿಗಳು ಶೇ. 1.14ರಷ್ಟು, ದೀವರು ಶೇ. 3ರಷ್ಟು ಇದ್ದಾರೆ. ಈಡಿಗ ಸಮುದಾಯ ಶೇ. 21.6 ರಷ್ಟಿದ್ದರೆ, ಮುಂದುವರಿದ ನಾಯರ್ ಸಮುದಾಯ ಶೇ. 14.9ರಷ್ಟಿದೆ. ಇತರ ಹಿಂದುಳಿದ ಜಾತಿಗಳು ಶೇ. 3ರಷ್ಟಿದ್ದರೆ ಬ್ರಾಹ್ಮಣ ಸಮುದಾಯ ಶೇ. 2ರಷ್ಟು ಇದ್ದಾರೆ. ವೈಶ್ಯರು ಶೇ. 2.10ರಷ್ಟು ಇದ್ದಾರೆ. ಜೊತೆಗೆ ಸುಮಾರು ಹತ್ತರಿಂದ ಮೂವತ್ತು ಲಕ್ಷದಷ್ಟು ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಬಿಹಾರ, ಛತ್ತೀಸ್‌ಗಡ, ಮೊದಲಾದ ರಾಜ್ಯಗಳ ವಲಸೆ ಕಾರ್ಮಿಕರು ಇಲ್ಲಿದ್ದಾರೆ. ಇವರಲ್ಲಿ ಹೆಚ್ಚಿನವರು ತಮ್ಮ ತಮ್ಮ ರಾಜ್ಯಗಳಿಂದ ಆಯಾ ಕಾಲಕ್ಕನುಗುಣವಾಗಿ ಓಡಾಡುವವರಾಗಿದ್ದಾರೆ.

ಈ ರಾಜ್ಯ ಈಗ ಕೆಲವು ಸಕಾರಾತ್ಮಕ ಕಾರಣಗಳಿಗಾಗಿ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯವಾಗಿ ಸುದ್ದಿಯಲ್ಲಿದೆ. ಅವುಗಳಲ್ಲಿ ಪ್ರಮುಖವಾಗಿರುವುದು ಮೊದಲನೆಯದಾಗಿ ಕೋವಿಡ್-19ರ ನಿರ್ವಹಣೆಯಲ್ಲಿ ಈ ರಾಜ್ಯ ನಿರ್ವಹಿಸಿದ ಪಾತ್ರ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. ಎರಡನೆಯದು ಎಡ ಪ್ರಜಾಸತ್ತಾತ್ಮಕ ರಂಗ ಮಾಮೂಲಿನಂತಲ್ಲದೇ ಮತ್ತೊಮ್ಮೆ ಸರಣಿಯಾಗಿ ಎರಡನೇ ಬಾರಿಗೆ ಹಿಂದಿಗಿಂತಲೂ ಹೆಚ್ಚಿನ ಬಹುಮತ ಗಳಿಸಿ ಅಧಿಕಾರ ಹಿಡಿದಿದೆ. ಮೂರನೆಯದಾಗಿ ಶಬರಿಮಲೆ ಅಯ್ಯಪ್ಪ, ಜಾರಿ ನಿರ್ದೇಶನಾಲಯ, ಹಣ ಕಳ್ಳ ಸಾಗಣೆ, ಇತ್ಯಾದಿ ನೆಪದಲ್ಲಿ ಹಲವು ರೀತಿಗಳಲ್ಲಿ ತಿಣುಕಾಡಿದರೂ ಸಂಘ ಪರಿವಾರ ಮತ್ತು ಬಿಜೆಪಿ ಚುನಾವಣಾ ರಾಜಕೀಯದಲ್ಲಿ ಹಿನ್ನಡೆ ಕಂಡು ತನ್ನ ಹಿಂದಿನ ಮತಗಳಿಕೆ ಪ್ರಮಾಣವನ್ನೂ ಕಳೆದುಕೊಂಡು ಶಾಸನ ಸಭೆಯಲ್ಲಿ ಇದ್ದ ಒಂದು ಪ್ರತಿನಿಧಿತ್ವವನ್ನೂ ಕಳೆದುಕೊಂಡಿದೆ. ನಾಲ್ಕನೆಯದಾಗಿ ಈಗಿನ ಎಡ ಪ್ರಜಾಸತ್ತಾತ್ಮಕ ರಂಗದ ಸಚಿವ ಸಂಪುಟದಲ್ಲಿ ಬಹುತೇಕವಾಗಿ ಹೊಸದಾಗಿ ಆಯ್ಕೆಯಾದ ಯುವ ತಲೆಮಾರಿನವರಿಗೆ ಸ್ಥಾನ ಕಲ್ಪಿಸಲಾಗಿದೆ. ಕೋವಿಡ್-19 ಅನ್ನು ನಿರ್ವಹಿಸಿದ್ದರಲ್ಲಿ ಆರೋಗ್ಯ ಸಚಿವೆಯಾಗಿ ಸಮರ್ಥ ಪಾತ್ರ ವಹಿಸಿದ್ದ ಶೈಲಜಾ ಟೀಚರ್‌ರಿಗೆ ಹೊಸ ಸಚಿವ ಸಂಪುಟದಲ್ಲಿ ಸ್ಥಾನವಿಲ್ಲದಿರುವುದು. ಪಿಣರಾಯಿ ವಿಜಯನ್ ಎರಡನೇ ಬಾರಿಗೂ ಮುಖ್ಯ ಮಂತ್ರಿಯಾಗಿ ಮುಂದುವರಿದಿರುವುದು. ಇದೀಗ ಕೇರಳ ಸುಸ್ಥಿರ ಅಭಿವೃದ್ಧಿ ಸೂಚ್ಯಂಕದಲ್ಲಿ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ನೀತಿ ಆಯೋಗದ ವರದಿ ಹೇಳಿರುವುದು ರಾಷ್ಟ್ರದಾದ್ಯಂತ ಸುದ್ದಿಯಾಗಿದೆ. ಕಳೆದ ಮೂರು ವರ್ಷಗಳಿಂದಲೂ ಇದರಲ್ಲಿ ಕೇರಳ ತನ್ನ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

38,863 ಚದರ ಕಿ. ಮೀ. ವಿಸ್ತೀರ್ಣ ಹೊಂದಿರುವ ಕೇರಳ ಇಂಡಿಯಾದ ಇಪ್ಪತ್ತೊಂದನೇ ದೊಡ್ಡ ರಾಜ್ಯವಾಗಿದೆ. 2020ರ ಅಂಕಿ-ಅಂಶದ ಪ್ರಕಾರ ಬಡತನದ ವಿಚಾರದಲ್ಲಿ ಇಂಡಿಯಾದ ಎರಡನೆಯ ಅತ್ಯಂತ ಕಡಿಮೆ ಬಡತನ ಇರುವ ರಾಜ್ಯವಾಗಿದೆ. ಶೇ. 5ರಷ್ಟು ಬಡತನ ಹೊಂದಿರುವ ಗೋವಾ ಮೊದಲನೆಯ ಸ್ಥಾನದಲ್ಲಿದ್ದರೆ ಕೇರಳ ಶೇ. 7ರಷ್ಟು ಬಡತನ ಹೊಂದಿದೆ. ದೇಶದ ಒಟ್ಟು ಸರಾಸರಿ ಬಡತನದ ಮಟ್ಟ 21.92ರಷ್ಟಿದೆ. ರಾಜ್ಯದ ದಲಿತ ಸಮುದಾಯದ ಬಡತನ ದಲಿತರ ಒಟ್ಟು ಜನಸಂಖ್ಯೆಯ ಶೇ. 21ರಷ್ಟಿದ್ದರೆ ಇತರ ಹಿಂದುಳಿದ ವರ್ಗದವರಲ್ಲಿ ಅದು ಅವರ ಒಟ್ಟು ಜನಸಂಖ್ಯೆಯ ಶೇ. 13.7ರಷ್ಟಿದೆ. ಇತರರಲ್ಲಿ ಅದು ಅವರ ಒಟ್ಟು ಜನಸಂಖ್ಯೆಯ ಶೇ. 6ರಷ್ಟು ಇದೆ. ಶಿಕ್ಷಣದ ವಿಚಾರಕ್ಕೆ ಬಂದರೆ ಕೇರಳದ ಜನರು ಶೇ. 95ರಷ್ಟು ಶಿಕ್ಷಿತರು. ಇಡೀ ದೇಶದಲ್ಲೇ ಉತ್ತಮ ಸಾರ್ವಜನಿಕ ಶಿಕ್ಷಣ ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಇರುವ ರಾಜ್ಯ ಕೇರಳವಾಗಿದೆ.

ಬಡತನದ ಬಗೆಗಿನ ಅಂತರ್‌ರಾಷ್ಟ್ರೀಯ ಮಾನದಂಡವಾದ ಮಲ್ಟಿ ಡೈಮೆನ್ಷನಲ್ ಪಾವರ್ಟಿ ಲೆವೆಲ್ (ಬಡತನದ ಬಹು ಆಯಾಮೀಯ ಮಟ್ಟ) (ಎಂಡಿಪಿ) ಮಟ್ಟ ಕೇರಳದಲ್ಲಿ ಕೇವಲ ಶೇ. 1 ಆಗಿದೆ. ದಕ್ಷಿಣದ ರಾಜ್ಯಗಳ ಒಟ್ಟು ಸರಾಸರಿ ಎಂಡಿಪಿ ಶೇ. 9ರಷ್ಟಿದೆ. ಮಲ್ಟಿ ಡೈಮೆನ್ಷನಲ್ ಪಾವರ್ಟಿ ಎಂದಾಗ ಬದುಕಿನ ಮಟ್ಟ, ಅರೋಗ್ಯ, ಶಿಕ್ಷಣ, ಪೌಷ್ಟಿಕತೆ, ಮಕ್ಕಳ ಸಾವುಗಳು, ಶಾಲಾವಧಿ, ಶಾಲಾ ಹಾಜರಾತಿ, ಅಡುಗೆ ಅನಿಲದ ಬಳಕೆ, ಶೌಚ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ವಿದ್ಯುತ್ ಬಳಕೆ, ಮನೆಯ ಒಳಾಂಗಣ, ಆಸ್ತಿಯ ಪ್ರಮಾಣ ಇವೆಲ್ಲವುಗಳನ್ನು ಪರಿಗಣಿಸಿ ನಿಗದಿ ಮಾಡುವ ಮಾನದಂಡವಾಗಿದೆ. 2018ರಲ್ಲಿ ತಯಾರಾದ ಈ ಬಗೆಗಿನ ವರದಿಯೊಂದನ್ನು ಪ್ರೊಫೆಸರ್ ಎಸ್. ಪಿ. ಸಿಂಗ್, ಮಾನವಿಕ ಅಧ್ಯಯನ ವಿಭಾಗ ರೂರ್ಕಿಯ ಐಐಟಿಯ ಸಂಶೋಧಕ ಆಕರ್ಷ್ ಅರೋರಾ, ಆಸ್ಟ್ರೇಲಿಯಾ ಮೂಲದ ಅಭಿವೃದ್ಧಿ ವಿಜ್ಞಾನಿ ಝಕರಿಯಾ ಸಿದ್ದೀಕ್ ಸೇರಿ ತಯಾರು ಮಾಡಿದ ವರದಿ ಇದಾಗಿದೆ. ಕೆಲವು ಆರ್ಥಶಾಸ್ತ್ರಜ್ಞರು ಪೌಷ್ಟಿಕತೆ ಮತ್ತು ಮಕ್ಕಳ ಮರಣ ಪ್ರಮಾಣದಂತಹ ಲೆಕ್ಕಾಚಾರಗಳಲ್ಲಿ ಎಂಡಿಪಿಯ ಮಾನದಂಡಗಳ ಪ್ರಕಾರ ತಾಂತ್ರಿಕ ಲೋಪಗಳಿವೆ ಎಂದು ಅಭಿಪ್ರಾಯಪಟ್ಟರೂ ಒಟ್ಟಾರೆ ನೋಡಿದಾಗ ಸುಧಾರಣೆಯಾಗಿದೆ ಎಂಬುದನ್ನು ಒಪ್ಪುತ್ತಾರೆ. ಈ ಎಲ್ಲಾ ಅಂಕಿಅಂಶಗಳು ಕೇರಳ ರಾಜ್ಯದ ಬಗ್ಗೆ ಅದರ ಅಭಿವೃದ್ಧಿಯ ಬಗ್ಗೆ ಅದ್ಭುತ ಅನ್ನೋ ರೀತಿಯಲ್ಲಿ ಹಲವು ವಲಯಗಳಲ್ಲಿ ಅದರಲ್ಲೂ ಕರ್ನಾಟಕದ ಪ್ರಗತಿಪರ, ಎಡ ವಲಯಗಳಲ್ಲಿ ಅಭಿಪ್ರಾಯ ಮೂಡತೊಡಗಿದೆ.

ಒಟ್ಟಾರೆ ದೇಶದ ಪರಿಸ್ಥಿತಿಗೆ ಹೋಲಿಸಿದಾಗ ಇರುವುದರಲ್ಲಿ ಕೇರಳ ಉತ್ತಮ ಎನ್ನಬಹುದಾದರೂ ಇರುವ ವಾಸ್ತವಗಳ ಬಗ್ಗೆ ವಿವಿಧ ಆಯಾಮಗಳಿಂದ ಆಳವಾಗಿ ಗ್ರಹಿಸಬೇಕಾದ ಅವಶ್ಯಕತೆಯಿದೆ. ಕೇರಳ ಮೊದಲಿನಿಂದಲೂ ದಲಿತ ಹಿನ್ನೆಲೆಯ ಅಯ್ಯನ್ ಕಾಳಿಯಂತಹ ಹೋರಾಟಗಳು, ಹಿಂದುಳಿದ ಈಡಿಗ ಹಿನ್ನೆಲೆಯ ನಾರಾಯಣಗುರುಗಳಂತಹ ಸುಧಾರಣಾವಾದಿ ಹೋರಾಟಗಳು, ವೈಕಂ ಸತ್ಯಾಗ್ರಹ, ಗುರುವಾಯೂರ್ ಸತ್ಯಾಗ್ರಹದಂತಹ ಬ್ರಾಹ್ಮಣಶಾಹಿ ವಿರೋಧಿ ಹೋರಾಟಗಳು, ಕಮ್ಯುನಿಸ್ಟರ ನೇತೃತ್ವದಲ್ಲಿ ಪುನ್ನಪ್ರ ವಯಲಾರ್, ಕಯ್ಯೂರುಗಳಂತಹ ಜನಹೋರಾಟಗಳ ಕುಲುಮೆಯಲ್ಲಿ ಬೆಳೆದು ಬಂದಿದೆ.

ಚುನಾವಣಾ ರಾಜಕೀಯದಲ್ಲೇ ಮುಳುಗಿಹೋದ ಕಮ್ಯುನಿಸ್ಟ್ ಪಕ್ಷಗಳ ಕಾರ್ಯವೈಖರಿಗಳನ್ನು ವಿರೋಧಿಸಿ ಸಿಡಿದ ಎಪ್ಪತ್ತರ ದಶಕದ ನಕ್ಸಲ್ ಬರಿ ಚಳವಳಿಯ ಪ್ರಭಾವವೂ ಕೇರಳದ ಮೇಲೆ ಸಾಕಷ್ಟು ಆಗಿದೆ. ಇವೆಲ್ಲವುಗಳ ಪರಿಣಾಮವಾಗಿ ಭೂಸುಧಾರಣೆಯಂತಹ ಕ್ರಮಗಳು ಹೆಚ್ಚಿನ ಪ್ರಮಾಣದಲ್ಲಿ ಜಾರಿಯಾಗಿ ಬಹುಸಂಖ್ಯಾತ ಜನಸಾಮಾನ್ಯರು ಭೂಮಿಯ ಮೇಲೆ ಹಕ್ಕು ಹೊಂದಲು ಸಾಧ್ಯವಾಯಿತು. ಜನರು ದೊಡ್ಡ ಮಟ್ಟದಲ್ಲಿ ನಿರಂತರವಾಗಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರ ಪರಿಣಾಮ ಪ್ರಶ್ನೆ ಮಾಡುವ ಹಾಗೂ ಪ್ರತಿಭಟನಾ ಮನೋಭಾವಗಳು ಬೆಳೆದವು. ಜೊತೆಗೆ ಶೈಕ್ಷಣಿಕ ಅಭಿವೃದ್ಧಿಗೆ ಆಳುತ್ತಾ ಬಂದ ಸರಕಾರಗಳು ಒತ್ತುಕೊಡಬೇಕಾದ ಒತ್ತಡ ಜನರಿಂದ ಇದ್ದಿದ್ದರಿಂದಾಗಿ ಜನರ ತಿಳುವಳಿಕಾ ಮಟ್ಟ, ರಾಜಕೀಯ ಪ್ರಜ್ಞೆ ದೇಶದ ಉಳಿದ ಭಾಗಗಳಿಗಿಂತಲೂ ಹೆಚ್ಚಿನ ಮಟ್ಟ ಸಾಧಿಸಿತು. ಯಾವುದೇ ಒಂದು ಗುಂಪು ಸರಕಾರಿ ಅಧಿಕಾರ ಕೇಂದ್ರಗಳ ಮೇಲೆ ಹಿಡಿತ ಸಾಧಿಸದಂತೆ ನೋಡಿಕೊಳ್ಳಲು ಕೇರಳದ ಜನರು ಶ್ರಮಿಸುತ್ತಾ ಬಂದಿದ್ದಾರೆ. ಹಾಗಾಗಿ ಒಮ್ಮೆ ಎಡಪಕ್ಷಗಳಾದರೆ ಮತ್ತೊಮ್ಮೆ ಕಾಂಗ್ರೆಸ್ ನೇತೃತ್ವದ ಬಲ ಪಕ್ಷಗಳು ಸರಕಾರ ನಡೆಸಬೇಕಾದಂತಹ ಸ್ಥಿತಿ ಸಹಜವೆನ್ನುವ ರೀತಿಯಲ್ಲಿ ನಡೆಯುತ್ತಾ ಬಂದಿತ್ತು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇರಳದ ಜನರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ದಿಲ್ಲಿಯಲ್ಲಿ ಒಕ್ಕೂಟ ಸರಕಾರವಾಗಿ ಬಿಜೆಪಿಯೇತರ ಸರಕಾರವನ್ನು ಸ್ಥಾಪಿಸಲು ಶ್ರಮಿಸಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕು. ಕೇರಳದ ಒಟ್ಟು ಇಪ್ಪತ್ತೊಂದು ಸಂಸತ್ ಸ್ಥಾನಗಳಲ್ಲಿ ಹದಿನಾರು ಸ್ಥಾನಗಳನ್ನು ಯುಪಿಎಗೆ ನೇತೃತ್ವ ವಹಿಸಿದ್ದ ಕಾಂಗ್ರೆಸ್‌ಗೆ ನೀಡಿ, ಯುಪಿಎ ಅಂಗವಾಗಿದ್ದ ಐಯುಎಂಎಲ್‌ಗೆ ಎರಡು ಸ್ಥಾನಗಳನ್ನು ಹಾಗೂ ಯುಪಿಎ ಅಂಗವಾಗಿದ್ದ ಕೇರಳ ಕಾಂಗ್ರೆಸ್‌ಗೆ ಒಂದು ಸ್ಥಾನವನ್ನು ಕೇರಳೀಯರು ನೀಡಿದ್ದರು. ಉಳಿದ ಎರಡು ಸ್ಥಾನಗಳನ್ನು ಎಡಪ್ರಜಾಸತ್ತಾತ್ಮಕ ರಂಗಕ್ಕೆ ನೀಡಿದ್ದರು. ಒಟ್ಟು 21 ಲೋಕಸಭಾ ಸದಸ್ಯರನ್ನು ಬಿಜೆಪಿಗೆ ಎದುರಾಗಿ ಸಂಸತ್ತಿಗೆ ಕಳುಹಿಸಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಎಡಪ್ರಜಾಸತ್ತಾತ್ಮಕ ರಂಗವನ್ನು ರಾಜ್ಯದ ಆಡಳಿತ ನಡೆಸಲು ಕೇರಳೀಯರು ಆರಿಸಿಕೊಂಡಿದ್ದರು.

ಇದು ಕೇರಳದ ಜನರು ಹೇಗೆ ಸ್ಥಳೀಯ ಹಾಗೂ ದೇಶದ ರಾಜಕೀಯ ಆಗುಹೋಗುಗಳನ್ನು ಗ್ರಹಿಸುತ್ತಾರೆ ಮತ್ತು ರಾಜಕೀಯ ಆಗುಹೋಗುಗಳಲ್ಲಿ ತಮ್ಮ ಪಾತ್ರ ವಹಿಸುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆಯಾಗಿದೆ. ಒಂದೆಡೆ ರಾಜ್ಯದ ಅಧಿಕಾರ ಬಲ ಪಕ್ಷಗಳಿಗೆ ಕೊಟ್ಟರೂ ಗ್ರಾಮಪಂಚಾಯತ್‌ಗಳಲ್ಲಿ ಅಧಿಕಾರಗಳನ್ನು ಎಡಪಕ್ಷಗಳಿಗೆ ಕೊಡುವ ರೂಢಿಯೂ ಕೇರಳದ ಜನರಲ್ಲಿದೆ. ಈ ಬಾರಿಯ 2021ರ ಕೇರಳ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಕ್ಷಗಳು ನಾಯಕತ್ವ ಕೊಡಬಲ್ಲವು ಎಂದು ಜನರಿಗೆ ಅನಿಸದೇ ಹೋಗಿದ್ದರಿಂದಾಗಿ ಬೇರೆ ದಾರಿ ಇಲ್ಲದೆ ಮತ್ತೊಮ್ಮೆ ಎಡಪಕ್ಷಗಳನ್ನೇ ಜನರು ಆರಿಸಿಕೊಂಡರು. ಚುನಾವಣಾ ಅಕ್ರಮಗಳು ನಡೆದರೂ ಜನರ ಪ್ರಜ್ಞಾ ಮಟ್ಟ ಹೆಚ್ಚಿರುವುದರಿಂದಾಗಿ ಅದು ಮೇಲುಗೈ ಸಾಧಿಸಲು ಸಾಧ್ಯವಾಗದ ಸ್ಥಿತಿ ಕೇರಳದಲ್ಲಿ ಇದೆ. ಹಾಗಾಗಿಯೇ ಬಿಜೆಪಿ ಎಷ್ಟೆಲ್ಲಾ ತಿಣುಕಾಡಿದರೂ ಏನನ್ನೂ ಸಾಧಿಸದೆ, ತನ್ನ ಮತಗಳಿಕೆ ಹಾಗೂ ಇದ್ದ ಒಂದು ಸ್ಥಾನವನ್ನೂ ಕಳೆದುಕೊಳ್ಳಬೇಕಾದ ಸ್ಥಿತಿ ಬಂದಿತು.

ಆದರೆ ಇದರ ಇನ್ನೊಂದು ಮಗ್ಗುಲು ಬೇರೆ ಇದೆ. ಕೇರಳದಲ್ಲಿ ಯಾವುದೇ ಸರಕಾರ ಬಂದರೂ ಸಾಮಾಜಿಕವಾಗಿ ಸಿಪಿಐ (ಎಂ) ಹಿಡಿತಕ್ಕೆ ಧಕ್ಕೆಯಾಗುವುದಿಲ್ಲ. ಕಾರಣ ಕೇರಳದ ಆರ್ಥಿಕ ವ್ಯವಹಾರಗಳಲ್ಲಿ ಒಂದು ಪ್ರಧಾನ ಪಾತ್ರ ವಹಿಸುವ ಸಹಕಾರಿ ವಲಯದ ಬ್ಯಾಂಕುಗಳ ಮೇಲಿನ ಹಿಡಿತ ಇರುವುದು ಹೆಚ್ಚಾಗಿ ಸಿಪಿಐ(ಎಂ) ಕೈಯಲ್ಲೇ ಆಗಿದೆ. ಈಗ ಜಿಲ್ಲಾ ಸಹಕಾರಿ ಬ್ಯಾಂಕುಗಳನ್ನೆಲ್ಲಾ ಒಗ್ಗೂಡಿಸಿ ರಾಜ್ಯ ಮಟ್ಟದಲ್ಲಿ ಕೇರಳ ಬ್ಯಾಂಕ್ ಎಂದು ಸ್ಥಾಪಿಸಲಾಗಿದೆ. ಇದರಲ್ಲೂ ಸಿಪಿಐ(ಎಂ)ನ ಹಿಡಿತವಿದೆ. ಕೇರಳದಲ್ಲಿ ಹೆಚ್ಚು ಸಕ್ರಿಯ ಕಾರ್ಯಕರ್ತರನ್ನು ಹೊಂದಿರುವ ಅತ್ಯಂತ ಸಂಘಟಿತವಾಗಿರುವ ರಾಜಕೀಯ ಪಕ್ಷ ಸಿಪಿಐ(ಎಂ) ಆಗಿದೆ. ಅದರ ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಯುವಜನ, ರೈತ ಹಾಗೂ ಮಹಿಳಾ ಸಂಘಟನೆಗಳು ಬೇರೆಲ್ಲಾ ಪಕ್ಷಗಳಿಗಿಂತಲೂ ಹೆಚ್ಚು ಸುಸಂಘಟಿತವಾಗಿದ್ದು ನಿರಂತರವಾಗಿ ಕಾರ್ಯನಿರತವಾಗಿರುತ್ತವೆ. ಕೇರಳದಲ್ಲಿ ಗ್ರಾಮ ಪಂಚಾಯತ್‌ಗಳು ದೇಶದ ಇತರ ಭಾಗಗಳಿಗಿಂತ ಹೆಚ್ಚಿನ ಅಧಿಕಾರ ಹೊಂದಿದ್ದು ಹೆಚ್ಚು ಸಕ್ರಿಯವಾಗಿವೆ. ಪಂಚಾಯತ್ ಚುನಾವಣೆಗಳೂ ಕೂಡ ವಿಧಾನ ಸಭಾ ಚುನಾವಣೆಯಷ್ಟೇ ಬಿರುಸಿನಿಂದ ಕೂಡಿರುತ್ತವೆ.

ಪಂಚಾಯತ್‌ಗಳ ಮಟ್ಟದಲ್ಲೂ ಸಿಪಿಐ(ಎಂ) ಹೆಚ್ಚು ಸಂಘಟಿತವಾದ ಪಕ್ಷವಾಗಿದೆ. ನಂತರದ ಸ್ಥಾನ ಸಿಪಿಐ ಪಕ್ಷದ್ದಾಗಿದೆ. ಕೇರಳದ ಎಡ ಪಕ್ಷಗಳಲ್ಲಿ ಅತ್ಯಂತ ಆಕ್ರಮಣಶೀಲವಾಗಿರುವ ಪಕ್ಷ ಸಿಪಿಐ(ಎಂ) ಎನ್ನಲಾಗುತ್ತಿದೆ. ರಾಜಕೀಯ ಎದುರಾಳಿಗಳನ್ನು ರಾಜಕೀಯವಾಗಿ ಎದುರಿಸುವುದರ ಬದಲಾಗಿ ದೈಹಿಕವಾಗಿ ನಿರ್ನಾಮ ಮಾಡುವುದಕ್ಕೆ ಅದು ಒತ್ತು ನೀಡುತ್ತದೆ ಎಂಬ ಆರೋಪವನ್ನೂ ಹೊತ್ತಿದೆ. ರಾಜಕೀಯವಾಗಿ ನೋಡಿದಾಗ ಎರಡು ವರ್ಷಗಳ ಹಿಂದೆ ತನ್ನದೇ ಪಕ್ಷದ ಸದಸ್ಯರಾಗಿದ್ದ ಕಣ್ಣೂರಿನ ಇಬ್ಬರು ವಿದ್ಯಾರ್ಥಿಗಳನ್ನು ‘ಯುಎಪಿಎ’ಯಂತಹ ಕರಾಳ ಶಾಸನದಡಿ ಕಾರಾಗೃಹಕ್ಕೆ ಕಳಿಸಿದ್ದು ಬಹಳ ಸುದ್ದಿ ಮಾಡಿತ್ತು. ಆಶ್ಚರ್ಯವೆಂದರೆ ಯುಎಪಿಎ ಒಂದು ಕರಾಳ ಶಾಸನ, ಅದನ್ನು ರದ್ದುಮಾಡಬೇಕೆಂದು ಈ ಹಿಂದೆ ಇದೇ ಸಿಪಿಐ(ಎಂ) ಪಕ್ಷ ವಾದಿಸಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆಡಳಿತ ಕಾಲದ ಬಹಳಷ್ಟು ಯೋಜನೆಗಳನ್ನು ವಿರೋಧಿಸಿ ನಿಂತಿದ್ದ ಪಿಣರಾಯಿ ನೇತೃತ್ವದ ಎಲ್‌ಡಿಎಫ್ ತನ್ನ ಸರಕಾರದ ಅವಧಿಯಲ್ಲಿ ಅವೇ ಯೋಜನೆಗಳನ್ನು ಬಿರುಸಿನಿಂದ ಜಾರಿ ಮಾಡಿತು. ವಿಶ್ವ ಬ್ಯಾಂಕ್ ಹಾಗೂ ಐಎಂಎಫ್ ಮೊದಲಾದ ಸಾಮ್ರಾಜ್ಯಶಾಹಿ ಹಣಕಾಸು ಸಂಸ್ಥೆಗಳಿಂದ ನೇರವಾಗಿ ಸಾಕಷ್ಟು ಸಾಲಗಳನ್ನು ತೆಗೆದುಕೊಳ್ಳುತ್ತಲೇ ಸಾಮ್ರಾಜ್ಯವಾದ ಹಾಗೂ ಜಾಗತೀಕರಣದ ವಿರುದ್ಧ ಮಾತುಗಳನ್ನೂ ಆಡುತ್ತದೆ ಎಂಬ ಆರೋಪವನ್ನು ಎಲ್‌ಡಿಎಫ್ ಹೊತ್ತಿದೆ. ಮಾರ್ಕ್ಸ್‌ವಾದಿ ಅರ್ಥಶಾಸ್ತ್ರದ ಬದಲಿಗೆ ಕೆಯ್ನ್ಸ್(Keyns)ನ ಬಂಡವಾಳಶಾಹಿ ಆರ್ಥಿಕ ನೀತಿಗಳನ್ನು ಪಾಲಿಸಲಾಗುತ್ತಿದೆ ಎಂಬ ಚರ್ಚೆ ಕೂಡ ಚಾಲ್ತಿಯಲ್ಲಿ ಇದೆ. ಈ ಪಕ್ಷದ ಇಂತಹ ಸ್ವಯಂ ವೈರುಧ್ಯದ ನಡೆಗಳು ಹಾಗೂ ನಿಲುವುಗಳು ಸಾಕಷ್ಟು ಚರ್ಚೆಯಲ್ಲಿವೆೆ. ಈ ಬಾರಿಯ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ಕೊಟ್ಟು ಗೆಲ್ಲಿಸಿದ್ದು ಮತ್ತು ಮಂತ್ರಿ ಮಂಡಲದಲ್ಲೂ ಹೊಸ ಹಾಗೂ ಯುವ ಮುಖಗಳನ್ನು ಪರಿಚಯಿಸಲಾಗಿದೆ. ಪಿಣರಾಯಿ ವಿಜಯನ್ ಹೊರತುಪಡಿಸಿದಂತೆ ಇಡೀ ಮಂತ್ರಿ ಮಂಡಲದಲ್ಲಿ ಹಿಂದಿನ ಮಂತ್ರಿಗಳ್ಯಾರೂ ಇಲ್ಲ. ದಲಿತ ಸೇರಿದಂತೆ ಬಹುತೇಕ ಎಲ್ಲಾ ಜಾತಿಗಳಿಗೂ ಸಾಕಷ್ಟು ಪ್ರತಿನಿಧಿತ್ವ ಇರುವಂತೆ ನೋಡಿಕೊಳ್ಳಲಾಗಿದೆ. ಆದರೆ ಮಹಿಳೆಯರ ವಿಚಾರಕ್ಕೆ ಬಂದರೆ ಪ್ರತಿನಿಧಿತ್ವ ಬಹಳ ಕಡಿಮೆಯಿದೆ. ಹಾಗೇನೇ ಕಾಸರಗೋಡಿನಂತಹ ಜಿಲ್ಲೆಗಳಿಗೆ ಪ್ರತಿನಿಧಿತ್ವ ಇಲ್ಲದಂತಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೃಹಖಾತೆಯೂ ಸೇರಿದಂತೆ ಇಪ್ಪತ್ತೇಳಕ್ಕೂ ಹೆಚ್ಚು ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಪಿಣರಾಯಿ ವಿಜಯನ್ ಸರಕಾರ ಕಾರ್ಪೊರೇಟ್ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದು ನಿಜವಾದರೂ ಅದು ಜನಪ್ರತಿನಿಧಿತ್ವದ ಮೂಲಭೂತ ಪ್ರಜಾಸತ್ತಾತ್ಮಕ ನಿಯಮಗಳನ್ನು ಆಚರಣೆಯಲ್ಲಿ ಪಾಲಿಸುತ್ತಿಲ್ಲ ಎಂಬ ಆರೋಪವನ್ನು ಎದುರಿಸುತ್ತಿದೆ. ಎಡಪ್ರಜಾಸತ್ತಾತ್ಮಕ ರಂಗದ ಅಂಗಪಕ್ಷಗಳ ಜೊತೆಗೂ ಕೂಡ ಪ್ರಜಾಸತ್ತಾತ್ಮಕ ರೀತಿಯಲ್ಲಿ ವ್ಯವಹರಿಸದಿರುವ ಬಗ್ಗೆ ಸಾಕಷ್ಟು ಅಸಮಾಧಾನಗಳು ಕೂಡ ಇವೆ.

ಕೇರಳದ ಆರ್ಥಿಕತೆಯ ವಿಚಾರಕ್ಕೆ ಬರುವುದಾದರೆ ಶೇ. 73ರಷ್ಟು ರಾಜ್ಯ ಸರಕಾರದ ವಾರ್ಷಿಕ ಆದಾಯ ನೌಕರರ ಸಂಬಳ ಸವಲತ್ತುಗಳಿಗೆ ಮೀಸಲಿಡಬೇಕಾದ ಪರಿಸ್ಥಿತಿಯಿದೆ. ಇದು ಹಿಂದೆ ಶೇ. 96ರಷ್ಟು ಇತ್ತು. ಸಾಲದ ಬಡ್ಡಿಗೆ ಶೇ. 12ರಷ್ಟು ಸರಕಾರದ ವಾರ್ಷಿಕ ಆದಾಯ ಮೀಸಲಿಡಬೇಕಾಗಿದೆ. ಇದು ಹಿಂದೆ ಶೇ. 37ರಷ್ಟು ಇತ್ತು. ಕೊರತೆ ಆಯವ್ಯಯ ನಿರಂತರವಾಗಿದೆ. ಇನ್ನು ನಿರುದ್ಯೋಗದ ಸಮಸ್ಯೆ ಜನವರಿಯಿಂದ ಮಾರ್ಚ್ 2020ರ ಅಂಕಿ-ಅಂಶದಂತೆ 15ರಿಂದ 29 ವರ್ಷ ಪ್ರಾಯದವರಲ್ಲಿ ಶೇ. 40.5ರಷ್ಟಿತ್ತು. ಜನವರಿ 14- 2021ರಲ್ಲಿ ಕೇರಳ ವಿಧಾನ ಸಭೆಯಲ್ಲಿ ಮಂಡಿಸಲಾದ ರಾಜ್ಯದ ಆರ್ಥಿಕ ಸಮೀಕ್ಷೆಯ ಪ್ರಕಾರ ನಿರುದ್ಯೋಗದ ಪ್ರಮಾಣ ಶೇ. 36ರಷ್ಟಿತ್ತು. ಮಹಿಳೆಯರಲ್ಲಿ ಇದು ಮತ್ತೂ ಹೆಚ್ಚಾಗಿದೆ. ಅಂದರೆ ಶೇ.48.3 ರಷ್ಟಿದೆ. ಈ ಅಂಕಿಅಂಶಗಳು ದೇಶದ ಸರಾಸರಿಗಿಂತಲೂ ಹತ್ತಾರು ಪಟ್ಟು ಹೆಚ್ಚಿನದಾಗಿದೆ. ಕೈಗಾರಿಕೆಯಾಗಲೀ, ಕೃಷಿಯಾಗಲೀ ಅಭಿವೃದ್ಧಿಮಟ್ಟ ಬಹಳ ಕಡಿಮೆ ಪ್ರಮಾಣದಲ್ಲಿದೆ. ರಾಜ್ಯ ಸರಕಾರದ ಸಾಲವು ರಾಜ್ಯದ ಒಟ್ಟು ವಾರ್ಷಿಕ ಉತ್ಪನ್ನದ ಶೇ. 35ನ್ನೂ ಮೀರಿದೆ. ಇದು ದೇಶದ ಸರಾಸರಿ ಹಾಗೂ ನಿಗದಿತ ಮಟ್ಟಕ್ಕಿಂತಲೂ ಬಹಳ ಹೆಚ್ಚಿನದಾಗಿದೆ. ಕೇರಳ ಈಗಲೂ ತರಕಾರಿಯಿಂದ ಹಿಡಿದು ಬೇಳೆಕಾಳುಗಳವರೆಗೂ ಪ್ರಧಾನವಾಗಿ ಅನುಭೋಗಿ ರಾಜ್ಯವಾಗಿಯೇ ಉಳಿದಿದೆಯೇ ಹೊರತು ಉತ್ಪಾದನಾ ರಾಜ್ಯವಾಗಿ ಹೊರಹೊಮ್ಮಿಲ್ಲ. ಕೈಗಾರಿಕಾ ಉತ್ಪನ್ನಗಳೂ ಸೇರಿದಂತೆ ಬಹುಪಾಲು ವಸ್ತುಗಳು ಕೇರಳಕ್ಕೆ ಹೊರರಾಜ್ಯಗಳಿಂದಲೇ ಸರಬರಾಜಾಗಬೇಕಾದ ಸ್ಥಿತಿಯೇ ಮುಂದುವರಿದಿದೆ. ಹೀಗೆಲ್ಲಾ ಕಠಿಣ ಪರಿಸ್ಥಿತಿ ಇದ್ದರೂ ಬಡತನದ ಪ್ರಮಾಣವನ್ನು ಕಡಿಮೆ ಮಾಡಿ ಹಸಿವಿಲ್ಲದಂತೆ ಜನರನ್ನು ನೋಡಿಕೊಳ್ಳಲು ಸಾಧ್ಯ ಎನ್ನುವುದಕ್ಕೆ ಕೇರಳ ಒಂದು ಮಾದರಿ ಉದಾಹರಣೆ ಎನ್ನಬಹುದು.

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News