ನಟ ಚೇತನ್ ವಿರುದ್ಧ ದೂರು: ಮೂಲನಿವಾಸಿಗಳ ಮಹಾ ಒಕ್ಕೂಟ ಖಂಡನೆ

Update: 2021-06-09 12:32 GMT

ಬೆಂಗಳೂರು, ಜೂ. 9: ನಟ ಚೇತನ್ 'ಬ್ರಾಹ್ಮಣ್ಯ' ಪದ ಬಳಕೆ ಮಾಡಿದ ಕ್ಷುಲ್ಲಕ ಕಾರಣಕ್ಕೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ, ತಮ್ಮ ಸರಕಾರಿ ಹುದ್ದೆ ದುರ್ಬಳಕೆ ಮಾಡಿಕೊಂಡು ಚೇತನ್ ವಿರುದ್ಧ ದೂರು ದಾಖಲಿಸಿರುವುದು ಸರಿಯಲ್ಲ. ಜಾತಿಯ ಅಸಮಾನತೆ ಪ್ರತಿಪಾದಿಸುವವರ ವಿರುದ್ಧ ಹೇಳಿಕೆ ನೀಡಿದ ಚೇತನ್ ಅವರಿಗೆ ನಮ್ಮ ಬೆಂಬಲವಿದೆ ಎಂದು ಮೂಲನಿವಾಸಿಗಳ ಮಹಾ ಒಕ್ಕೂಟ ಎಚ್ಚರಿಕೆ ನೀಡಿದೆ.

ನಟ ಚೇತನ್ ನಿರಂತರವಾಗಿ ದಲಿತರು, ಅಲೆಮಾರಿಗಳು, ಆದಿವಾಸಿ ಜನಾಂಗ, ಬುಡಕಟ್ಟು ಜನಾಂಗ, ಮಂಗಳಮುಖಿಯರು ಹೀಗೆ ಧ್ವನಿ ಇಲ್ಲದವರ ಪರ ಹೋರಾಟ ಮಾಡುತ್ತ ಬಂದವರು. ಇಂತಹವರ ಮೇಲೆ ಅನಗತ್ಯವಾಗಿ ಪ್ರಕರಣ ದಾಖಲು ಮಾಡಿರುವುದು ಅಕ್ಷಮ್ಯ. ಜಾತೀಯತೆ ಪ್ರತಿಪಾದಿಸುವುದು ಸಂವಿಧಾನ ವಿರೋಧಿ. ಸಮುದಾಯಗಳ ಮಧ್ಯೆ ಸಾಮರಸ್ಯ ಮೂಡಿಸುವುದನ್ನು ಬಿಟ್ಟು, ವೈಷಮ್ಯ ಸೃಷ್ಟಿಸಲು ಬ್ರಾಹ್ಮಣ ಅಭಿವೃದ್ದಿ ಮಂಡಳಿ ಮುಂದಾಗುತ್ತಿರುವುದು ಖಂಡನೀಯ ಎಂದು ಒಕ್ಕೂಟ ಟೀಕಿಸಿದೆ.

ಶತಮಾನಗಳಿಂದಲೂ ಶೋಷಣೆಗೆ ಸಿಲುಕಿರುವ ಕೆಳಜಾತಿ ಮತ್ತು ಕೆಳವರ್ಗದ ಜನರ ಮೌನವನ್ನು ದೌರ್ಬಲ್ಯವೆಂದು ಭಾವಿಸುವುದು ಬೇಡ. ಮಂಡಳಿಯ ಅಧ್ಯಕ್ಷರು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕೆ ಆಲೋಚಿಸುವುದನ್ನು ಬಿಟ್ಟು ಜಾತಿ-ಜಾತಿಗಳ ಮಧ್ಯೆ ಸಂಘರ್ಷ ಸೃಷ್ಟಿಸಲು ಹೋಗುವುದು ಬೇಡ. ಚೇತನ್ ವಿರುದ್ಧ ಪ್ರಕರಣ ಕೂಡಲೇ ಹಿಂಪಡೆಯಬೇಕು ಎಂದು ಗೃಹ ಸಚಿವ, ಸಿಎಂಗೆ ಮನವಿ ಮಾಡಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಜಿಗಣಿ ಶಂಕರ್, ಮುಖಂಡರಾದ ಹೆಬ್ಬಾಳ ವೆಂಕಟೇಶ್, ರೇವತಿರಾಜ್, ಮುನಿ ಆಂಜಿನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News