ಕೇಂದ್ರದ ಹೊಸ ಐಟಿ ನಿಯಮಗಳು ನನ್ನ ಖಾಸಗಿತನದ ಹಕ್ಕನ್ನು ಅತಿಕ್ರಮಿಸುತ್ತದೆ: ಹೈಕೋರ್ಟ್‌ ಗೆ ಗಾಯಕ ಟಿಎಂ ಕೃಷ್ಣ ಅರ್ಜಿ

Update: 2021-06-10 11:42 GMT
Wikimedia Commons

ಚೆನ್ನೈ: ಕೇಂದ್ರ ಸರಕಾರದ ಹೊಸ ಐಟಿ ನಿಯಮಗಳ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹಾಗೂ ಅವುಗಳು ತಮ್ಮ ಖಾಸಗಿತನದ ಹಕ್ಕನ್ನು ಅತಿಕ್ರಮಿಸುತ್ತಿವೆ ಎಂದು ದೂರಿ ಖ್ಯಾತ ಕರ್ನಾಟಕ ಶಾಸ್ತ್ರೀಯ ಗಾಯಕ ಟಿ ಎಂ ಕೃಷ್ಣ ಅವರು ಮದ್ರಾಸ್ ಹೈಕೋರ್ಟಿನ ಕದ ತಟ್ಟಿದ್ದಾರೆ.

ಹೊಸ ಐಟಿ ನಿಯಮಗಳು ಅಸ್ಪಷ್ಟ, ಅಸಮಾನ ಮತ್ತು ಅಸಮಂಜಸತೆಯಿಂದ ಕೂಡಿವೆ ಎಂದೂ ಅವರು ತಮ್ಮ ಅಪೀಲಿನಲ್ಲಿ ಹೇಳಿದ್ದಾರಲ್ಲದೆ ಈ ನಿಯಮಗಳು ವಾಕ್ ಸ್ವಾತಂತ್ರ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ದೂರಿದ್ದಾರೆ.

ಈ ಅಪೀಲನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಸೆಂಥಿಲ್‍ಕುಮಾರ್ ರಾಮಮೂರ್ತಿ ಅವರ ಪೀಠ  ಕೇಂದ್ರಕ್ಕೆ ಪ್ರತಿ-ಅಫಿಡವಿಟ್ ಅನ್ನು ಮೂರು ವಾರಗಳೊಳಗೆ ಸಲ್ಲಿಸುವಂತೆ ಸೂಚಿಸಿದೆ.

ಒಬ್ಬ ಕಲಾವಿದನಾಗಿ ಹಾಗೂ ಸಾಂಸ್ಕೃತಿಕ ಮತ್ತು ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸುವವನಾಗಿ ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಖಾಸಗಿತನದ ಹಕ್ಕಿನ ಬಗ್ಗೆ ತಮಗೆ ಹೆಮ್ಮೆಯಿದೆ ಎಂದು ಅವರು ಹೇಳಿದ್ದಾರೆ.

"ನನಗೆ ಖಾಸಗಿತನವು, ಸಂಗೀತದಂತೆಯೇ ಒಂದು ಅನುಭವ. ಖಾಸಗಿತನದ ಬಗ್ಗೆ ಯೋಚಿಸಿದಾಗ ನಾನು ಜೀವನ,  ಅನುಭವ, ಅನ್ವೇಷಣೆ, ಭದ್ರತೆ ಮತ್ತು ಸಂತೋಷದ ಬಗ್ಗೆ ಹಾಗೂ ಏನನ್ನೂ ರಚಿಸುವ ಸ್ವಾತಂತ್ರ್ಯ ಮತ್ತು ನಿರ್ಭೀತಿ ಬಗ್ಗೆ ಯೋಚಿಸುತ್ತೇನೆ. ಒಬ್ಬ ಕಲಾವಿದ ಮಾತ್ರವಲ್ಲದೆ ಒಬ್ಬ ಮನುಷ್ಯನಾಗಿ ನಾನು ಸ್ವಾತಂತ್ರ್ಯ, ಘನತೆ ಮತ್ತು ಆಯ್ಕೆ ನನ್ನ ಹಕ್ಕು ಎಂದು ತಿಳಿದಿದ್ದೇನೆ" ಎಂದು ಅವರು ಹೇಳಿದ್ದಾರೆ.

ಅವರ ಅಪೀಲನ್ನು ಇಂಟರ್ನೆಟ್ ಫ್ರೀಡಂ ಫೌಂಡೇಶನ್ ಹಾಗೂ ವಕೀಲೆ ವೃಂದಾ ಭಂಡಾರಿ ಸಿದ್ಧಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News