ಹರ್ಯಾಣ: ಶಾಲೆ ಆವರಣದಲ್ಲಿ ಹತ್ತರ ಹರೆಯದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

Update: 2021-06-11 17:45 GMT

ಚಂಡೀಗಢ,ಜೂ.11: ಶಾಲೆಯೊಂದರಲ್ಲಿ ಹತ್ತು ವರ್ಷ ಪ್ರಾಯದ ಬಾಲಕಿಯ ಮೇಲೆ 18 ವರ್ಷದ ಯುವಕ ಹಾಗೂ ಎಂಟು ಮಂದಿ ಅಪ್ರಾಪ್ತ ವಯಸ್ಸಿನ ಬಾಲಕರು ಅತ್ಯಾಚಾರವೆಸಗಿದ ಘಟನೆ ಹರ್ಯಾಣದಲ್ಲಿ ಶುಕ್ರವಾರ ವರದಿಯಾಗಿದೆ. ಆರೋಪಿಗಳು ಈ ಹೇಯಕೃತ್ಯದ ವಿಡಿಯೋವನ್ನು ಆನ್ಲೈನ್ ನಲ್ಲಿ ಪ್ರಸಾರ ಮಾಡಿದ್ದಾರೆನ್ನಲಾಗಿದೆ.

 
ಮೇ 24ರಂದು ರೆವಾರಿ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ನಡೆದಿತ್ತೆನ್ನಲಾಗಿದ್ದರೂ ಜೂನ್9ರಂದು ಬಾಲಕಿಯ ತಂದೆ ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಾಗಿದೆ. ವಿಡಿಯೋ ಬಹಿರಂಗಗೊಂಡ ಬಳಿಕ ಬಾಲಕಿಯ ತಂದೆಯು ಪೊಲೀಸರಿಗೆ ದೂರು ನೀಡಿದ್ದಾಗಿ ತಿಳಿದುಬಂದಿದೆ.
  
ಅತ್ಯಾಚಾರದ ಘಟನೆ ನಡೆದಿದೆಯೆನ್ನಲಾದ ಶಾಲೆಯನ್ನು ಕೋವಿಡ್19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಬಾಲಕಿಯು ತನ್ನ ಮನೆಯ ಪಕ್ಕದಲ್ಲೇ ಇರುವ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದಳು. ಆರೋಪಿಗಳು ಆಕೆಯನ್ನು ಶಾಲಾ ಆವರಣದೊಳಗೆ ಕೊಂಡೊಯ್ದು ಅತ್ಯಾಚಾರವೆಸಗಿದ್ದಾರೆಂದು ರೆವಾರಿ ಜಿಲ್ಲಾ ಉಪ ಪೊಲೀಸ್ ಅಧೀಕ್ಷಕ ಹನ್ಸ್ರಾಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
   
ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ ಗಳಾದ 376 -ಡಿ(ಸಾಮೂಹಿಕ ಅತ್ಯಾಚಾರ) ಹಾಗೂ 506 (ಕ್ರಿಮಿನಲ್ ಬೆದರಿಕೆ)ಮತ್ತು ಪೊಸ್ಕೋ ಕಾಯ್ದೆಯ ನಿಯಮಗಳು ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
 
ಅತ್ಯಾಚಾರ ಆರೋಪಿಗಳಲ್ಲೊಬ್ಬನಾದ 18 ವರ್ಷದ ಯುವಕನನ್ನು ರೆವಾರಿ ಜಿಲ್ಲಾ ಕಾರಾಗೃಹಕ್ಕೆ ಕೊಂಡೊಯ್ಯಲಾಗಿದ್ದು, ಉಳಿದ ಐವರು ಆಪ್ರಾಪ್ತ ಬಾಲಕರನ್ನು ಬಾಲಾಪರಾಧಿಗಳ ವಿಚಕ್ಷಣಾಲಯಕ್ಕೆ ಕಳುಹಿಸಲಾಗಿದೆ. ಪ್ರಕರಣದ ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆಂದು ಹಂಸ್ರಾಜ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News