ಉಯಿಘರ್‌ ಜನಾಂಗೀಯರ ವಿರುದ್ಧ ‘ಅಸಹನೀಯ ನರಕ’ ಸೃಷ್ಟಿಸಿರುವ ಚೀನಾ: ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ವರದಿ

Update: 2021-06-11 18:14 GMT

ಲಂಡನ್, ಜೂ. 11: ಚೀನಾದ ಪಶ್ಚಿಮದ ತುದಿಯಲ್ಲಿರುವ ಕ್ಸಿನ್ಜಿಯಾಂಗ್ ವಲಯವು ‘ಅಸಹನೀಯ ನರಕ’ವಾಗಿದೆ ಎಂದು ಜಾಗತಿಕ ಮಾನವಹಕ್ಕುಗಳ ಸಂಸ್ಥೆ ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ತನ್ನ ಹೊಸ ವರದಿಯೊಂದರಲ್ಲಿ ಹೇಳಿದೆ.

ಕ್ಸಿನ್ಜಿಯಾಂಗ್ ವಲಯದಲ್ಲಿ ಉಯಿಘರ್ ಜನಾಂಗೀಯರು ಮತ್ತು ಇತರ ಮುಸ್ಲಿಮ್ ಜನಾಂಗೀಯ ಅಲ್ಪಸಂಖ್ಯಾತರು ವ್ಯವಸ್ಥಿತ ಹಾಗೂ ಸರಕಾರಿ ಪ್ರಾಯೋಜಿತ ಸಾಮೂಹಿಕ ಬಂಧನ ಮತ್ತು ಹಿಂಸೆಗೆ ಒಳಗಾಗುತ್ತಿದ್ದಾರೆ. ಇದು ಮಾನವತೆಯ ವಿರುದ್ಧದ ಅಪರಾಧವಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

ತಮ್ಮ ಧಾರ್ಮಿಕ ಸಂಪ್ರದಾಯಗಳು, ಭಾಷೆ ಮತ್ತು ಸಂಸ್ಕತಿಯನ್ನು ತೊರೆಯುವಂತೆ ಅಲ್ಪಸಂಖ್ಯಾತ ಗುಂಪುಗಳನ್ನು ಬಲವಂತಪಡಿಸಲಾಗುತ್ತಿದೆ ಹಾಗೂ ಅವರನ್ನು ಸಾಮೂಹಿಕ ಕಣ್ಗಾವಲಿಗೆ ಒಳಪಡಿಸಲಾಗುತ್ತಿದೆ ಎಂದು ಅಲ್ಲಿನ ಬಂಧನ ಶಿಬಿರಗಳಲ್ಲಿ ಇದ್ದು ವಾಪಸ್ ಬಂದಿರುವ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಗುರುವಾರ ಪ್ರಕಟಿಸಿದ ತನ್ನ ವರದಿಯಲ್ಲಿ ಆ್ಯಮ್ನೆಸ್ಟಿ ಹೇಳಿದೆ.

ಚೀನಾದ ನೂರಾರು ಬಂಧನ ಕೇಂದ್ರಗಳಲ್ಲಿ ಜನಾಂಗೀಯ ಹತ್ಯೆ ನಡೆಸಲಾಗುತ್ತಿದೆ ಎಂಬ ಹಿಂದಿನ ಆರೋಪಗಳನ್ನು ಈ ವರದಿಯು ಸಮರ್ಥಿಸಿದೆ.

ಉಯಿಘರ್ ಬಂಧನ ಶಿಬಿರಗಳಲ್ಲಿ ವಾಸಿಸಿ ಹೊರಬಂದಿರುವ 50ಕ್ಕೂ ಹೆಚ್ಚು ಜನರು ಆ್ಯಮ್ನೆಸ್ಟಿಯೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಚೀನಾ ಸರಕಾರವು 2017ರಿಂದ ನಡೆಸಿಕೊಂಡು ಬಂದಿರುವ ಬಂಧನ ಕೇಂದ್ರಗಳಲ್ಲಿರುವ ಸ್ಥಿತಿಗತಿಗಳು ಮತ್ತು ಅಲ್ಲಿ ಉಯಿಘರ್ಗಳು ಮತ್ತು ಇತರ ಜನಾಂಗೀಯ ಗುಂಪುಗಳನ್ನು ನಡೆಸಿಕೊಳ್ಳಲಾಗುತ್ತಿರುವ ರೀತಿಯ ಬಗ್ಗೆ ಮಾಜಿ ಶಿಬಿರಾರ್ಥಿಗಳು ಮಾತನಾಡಿದ್ದಾರೆ.

‘‘ಕ್ಸಿನ್ಜಿಯಾಂಗ್ ಉಯಿಘರ್ ಸ್ವಾಯತ್ತ ವಲಯದಲ್ಲಿ ಚೀನಾದ ಅಧಿಕಾರಿಗಳು ಬೃಹತ್ ಪ್ರಮಾಣದಲ್ಲಿ ಅಸಹನೀಯ ನರಕವನ್ನು ಸೃಷ್ಟಿಸಿದ್ದಾರೆ’’ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಶನಲ್ ಮಹಾಕಾರ್ಯದರ್ಶಿ ಹಾಗೂ ವಿಶ್ವಸಂಸ್ಥೆಯ ಮಾಜಿ ಮಾನವಹಕ್ಕುಗಳ ತನಿಖಾಧಿಕಾರಿ ಆ್ಯಗ್ನೆಸ್ ಕ್ಯಾಲಮಾರ್ಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News