"ಲವ್‌ ಜಿಹಾದ್‌, ಗೋ ಭಯೋತ್ಪಾದನೆಯಂತಹ ಕೃತಕ ವಿಚಾರಗಳು ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಪ್ರಭಾವ ಬೀರುವುದಿಲ್ಲ"

Update: 2021-06-13 11:03 GMT
photo: indian express

ಹೊಸದಿಲ್ಲಿ: ರೈತರ ಪ್ರತಿಭಟನೆಯ ಕುರಿತಾದಂತೆ ಉತ್ತರಪ್ರದೇಶದ ಬಿಜೆಪಿ ಸರಕಾರವು ತೋರಿದ ಧೋರಣೆಯು ಉತ್ತರಪ್ರದೇಶದ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ. ಆದರೆ ʼಗೋ ಭಯೋತ್ಪಾದನೆʼ, ಲವ್‌ ಜಿಹಾದ್‌ ನಂತಹ ಕೃತಕ ವಿಚಾರಗಳು ಇಲ್ಲಿ ಪರಿಣಾಮ ಬೀರುವುದಿಲ್ಲ. ಅಂತಿಮವಾಗಿ ಅಭಿವೃದ್ಧಿ ವಿಚಾರಗಳೇ ಮೇಲುಗೈ ಸಾಧಿಸಲಿದೆ" ಎಂದು ಆರ್‌ಎಲ್‌ಡಿ ಪಕ್ಷದ ನೂತನ ಮುಖ್ಯಸ್ಥ ಜಯಂತ್‌ ಚೌಧರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಚೌಧರಿ, "ಕೋಮುದ್ವೇಷ ತುಂಬಿರುವ ಅಭಿಯಾನಗಳ ಮೂಲಕ ಉತ್ತರಪ್ರದೇಶವನ್ನು ಹಾಳುಗೆಡವಲು ಬಿಡುವುದಿಲ್ಲ. ನಮ್ಮ ಪಕ್ಷ ಮತ್ತು ಸಮಾಜವಾದಿ ಪಕ್ಷದ ನಡುವೆ ಉತ್ತಮವಾದ ಸಂಬಂಧವಿದೆ. ಈ ಸಂಬಂಧವನ್ನು ನಾವು ಇನ್ನಷ್ಟು ಗಟ್ಟಿಗೊಳಿಸುತ್ತೇವೆ" ಎಂದು ಹೇಳಿದ್ದಾರೆ.

2022ರ ಉತ್ತರಪ್ರದೇಶ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಮತ್ತು ಬಿಎಸ್ಪಿ ಪಕ್ಷಗಳೊಂದಿಗೆ ಸೇರಿಕೊಂಡು ʼಮಹಾ ಘಟಬಂಧನ್‌ʼ ರಚಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಮೈತ್ರಿ ರಚಿಸಲು ಎಲ್ಲ ಪಕ್ಷದ ನಡುವೆ ಸಮಾನ ಅಭಿಪ್ರಾಯಗಳಿರಬೇಕು. ಯಾವೆಲ್ಲಾ ಪಕ್ಷಗಳು ಮೈತ್ರಿಗೆ ಮುಂದಾಗುತ್ತವೆ ಎನ್ನುವುದನ್ನು ಕಾದು ನೋಡಬೇಕಾಗಿದೆ" ಎಂದು ಅವರು ಹೇಳಿದರು. 

"ಗಂಗಾ ನದಿಯಲ್ಲಿ ಮೃತದೇಹಗಳು ತೇಲಿಕೊಂಡು ಬಂದಿರುವುದನ್ನು ಯಾರೊಬ್ಬರೂ ಮರೆಯುವುದಕ್ಕೆ ಸಾಧ್ಯವಿಲ್ಲ. ಬಿಜೆಪಿಯು ವೈಫಲ್ಯಗಳನ್ನು ಮರೆಮಾಚಲು ನೋಡುತ್ತಿದೆ. ಇದುವರೆಗೆ ರೈತರ ಪ್ರತಿಭಟನೆಗೆ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಇದು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮುಳುವಾಗಲಿದೆ. ಅವರೇ ಸೃಷ್ಟಿಸಿದ ಲವ್‌ ಜಿಹಾದ್‌, ಗೋ ಭಯೋತ್ಪಾದನೆಯಂತಹ ವಿಚಾರಗಳು ಈ ಬಾರಿ ಮುನ್ನೆಲೆಗೆ ಬರುವುದಿಲ್ಲ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News