ಭಾರತದ ಜೊತೆಗಿನ ಸಂಬಂಧ ಸುಧಾರಣೆಗೆ ಶ್ರಮ: ಇಸ್ರೇಲ್‌ನ ನೂತನ ವಿದೇಶ ಸಚಿವ ಯಾಯಿರ್ ಲಾಪಿಡ್

Update: 2021-06-14 15:23 GMT

photo: twitter/@yairlapid

ಜೆರುಸಲೇಮ್, ಜೂ. 14: ಇಸ್ರೇಲ್‌ನ ನೂತನ ಸರಕಾರವು ಭಾರತದೊಂದಿಗಿನ ರಕ್ಷಣಾ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು ಎಂದು ದೇಶದ ನೂತನ ವಿದೇಶ ಸಚಿವ ಯಾಯಿರ್ ಲಾಪಿಡ್ ಸೋಮವಾರ ಹೇಳಿದ್ದಾರೆ.

ಇಸ್ರೇಲ್‌ನ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನೆಟ್ ಅಧಿಕಾರ ಸ್ವೀಕರಿಸಿದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

‘‘ನಮ್ಮ ದೇಶಗಳ ನಡುವಿನ ರಕ್ಷಣಾ ಸಂಬಂಧವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜೊತೆಯಾಗಿ ಕೆಲಸ ಮಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ ಹಾಗೂ ನಿಮ್ಮನ್ನು ಇಸ್ರೇಲ್‌ಗೆ ಆಹ್ವಾನಿಸಲು ಬಯಸಿದ್ದೇನೆ’’ ಎಂದು ಭಾರತದ ವಿದೇಶ ಸಚಿವ ಎಸ್. ಜೈಶಂಕರ್‌ಅವರ ಅಭಿನಂದನಾ ಸಂದೇಶಕ್ಕೆ ಉತ್ತರಿಸುತ್ತಾ ಲಾಪಿಡ್ ಟ್ವೀಟ್ ಮಾಡಿದ್ದಾರೆ.

ಬೆನೆಟ್‌ಗೆ ಮೋದಿ ಅಭಿನಂದನೆ: ನೆತನ್ಯಾಹುಗೆ ‘ಗಾಢ ಕೃತಜ್ಞತೆ’

ಇಸ್ರೇಲ್‌ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಫ್ತಾಲಿ ಬೆನೆಟ್‌ರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ನೂತನ ಪ್ರಧಾನಿಯನ್ನು ಭೇಟಿಯಾಗುವುದನ್ನು ಹಾಗೂ ಉಭಯ ದೇಶಗಳ ನಡುವಿನ ಭಾಗೀದಾರಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಜೊತೆಯಾಗಿ ಕೆಲಸ ಮಾಡುವುದನ್ನು ಎದುರು ನೋಡುವುದಾಗಿ ತನ್ನ ಅಭಿನಂದನಾ ಸಂದೇಶದಲ್ಲಿ ಮೋದಿ ಹೇಳಿದ್ದಾರೆ.

ಈ ಸಂಬಂಧ ಮಾಡಿದ ಟ್ವೀಟ್‌ಗಳಲ್ಲಿ, ಪ್ರಧಾನಿ ಮೋದಿ ಇಸ್ರೇಲ್‌ನ ನಿರ್ಗಮನ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.

ಭಾರತ-ಇಸ್ರೇಲ್ ರಕ್ಷಣಾ ಭಾಗೀದಾರಿಕೆಯತ್ತ ನೆತನ್ಯಾಹು ನೀಡಿದ ‘ವೈಯಕ್ತಿಕ ಗಮನ’ಕ್ಕಾಗಿ ಪ್ರಧಾನಿ ಮೋದಿ ‘ಗಾಢ ಕೃತಜ್ಞತೆ’ ಸಲ್ಲಿಸಿದ್ದಾರೆ.

‘‘ಇಸ್ರೇಲ್ ಸರಕಾರದ ಪ್ರಧಾನಿಯಾಗಿ ನಿಮ್ಮ ಯಶಸ್ವಿ ಅವಧಿಯನ್ನು ಪೂರ್ಣಗೊಳಿಸಿದ ಈ ಸಂದರ್ಭದಲ್ಲಿ ನಿಮ್ಮ ನಾಯಕತ್ವಕ್ಕಾಗಿ ಹಾಗೂ ಭಾರತ-ಇಸ್ರೇಲ್ ರಕ್ಷಣಾ ಭಾಗೀದಾರಿಕೆ ಅಭಿವೃದ್ಧಿಗೆ ವೈಯಕ್ತಿಕ ಗಮನ ನೀಡಿರುವುದಕ್ಕಾಗಿ ನಾನು ನಿಮಗೆ ಗಾಢ ಕೃತಜ್ಞತೆ ಸಲ್ಲಿಸುತ್ತೇನೆ, ನೆತನ್ಯಾಹು ಅವರೇ’’ ಎಂಬುದಾಗಿ ಮೋದಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News