ಗಾಝಿಯಾಬಾದ್‌ ವೃದ್ಧನ ಮೇಲೆ ಹಲ್ಲೆ: ʼವೈಯಕ್ತಿಕ ದ್ವೇಷದಿಂದʼ ನಡೆದ ಘಟನೆ ಎಂದ ಪೊಲೀಸರು

Update: 2021-06-15 11:41 GMT

ಗಾಝಿಯಾಬಾದ್: ಮಸೀದಿಗೆ ತೆರಳುತ್ತಿದ್ದ 72 ವರ್ಷದ ಅಬ್ದುಲ್ ಸಮದ್ ಸೈಫಿ ಅವರನ್ನು ದುಷ್ಕರ್ಮಿಗಳ ತಂಡವೊಂದು ಲಿಫ್ಟ್ ನೀಡುವ ನೆಪದಲ್ಲಿ ಅಪಹರಿಸಿ ಹಲ್ಲೆಗೈದು, ಜೈ ಶ್ರೀ ರಾಮ್ ಹೇಳುವಂತೆ ಬಲವಂತ ಪಡಿಸಿ ನಂತರ ಆ ವ್ಯಕ್ತಿಯ ಗಡ್ಡ ಕತ್ತರಿಸಿದ್ದರೆನ್ನಲಾದ ಘಟನೆಗೆ ಇದೀಗ ಪೊಲೀಸರು ಹೊಸ ತಿರುವು ನೀಡಿದ್ದಾರೆ. 

ಇದೊಂದು ವೈಯಕ್ತಿಕ ದ್ವೇಷದಿಂದ ನಡೆದ ಘಟನೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ವೃದ್ಧ ಸಮದ್ ಆರೋಪಿಗಳ ಪೈಕಿ ಒಬ್ಬಾತನಿಗೆ ʼಒಳ್ಳೆಯ ಅದೃಷ್ಟʼಕ್ಕೆ ತಾವೀಝ್(ತಾಯಿತ) ನೀಡಿದ್ದರೂ ಆ ವ್ಯಕ್ತಿಯ ಕುಟುಂಬದಲ್ಲಿ ಕೆಟ್ಟ ಘಟನೆ ನಡೆದ ಕಾರಣದಿಂದಾಗಿ ಈ ಹಲ್ಲೆ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾಗಿ theprint.in ವರದಿ ಮಾಡಿದೆ.

ಇದೀಗ ಹರಿದಾಡುತ್ತಿರುವ ಇನ್ನೊಂದು ವೀಡಿಯೋದಲ್ಲಿ ಸಮದ್ ತನಗೆ ಆರೋಪಿಗಳು ಜೈ ಸಿಯಾ ರಾಮ್ ಹೇಳಲು ಬಲವಂತಪಡಿಸಿದ್ದರೆಂದು ಹೇಳುತ್ತಿದ್ದರೂ ಹಾಗೇನೂ ಆಗಿಲ್ಲ ಎಂದು ಪೊಲೀಸರು ಹೇಳುತ್ತಿದ್ದಾರಲ್ಲದೆ ಜೂನ್ 7ರಂದು ಆತ ದಾಖಲಿಸಿದ್ದ ದೂರಿನಲ್ಲಿ ಈ ವಿಚಾರ ಉಲ್ಲೇಖಿಸಲಾಗಿಲ್ಲ ಎಂದಿದ್ದಾರೆ.

ಪೊಲೀಸರ ಪ್ರಕಾರ ಸಮದ್ ತಾಯಿತ ನೀಡಿದ್ದ ವ್ಯಕ್ತಿಯ ಕುಟುಂಬ ಸದಸ್ಯರೊಬ್ಬರಿಗೆ ಗರ್ಭಪಾತವಾಗಿದ್ದರಿಂದ ಆತ ಸಿಟ್ಟುಗೊಂಡು ಈ ಕೃತ್ಯ ನಡೆಸಿದ್ದ ಎಂದು ಹೇಳಿಕೆ ನೀಡಿದ್ದಾರೆ.

ತರುವಾಯ ಪ್ರಕರಣ ಸಂಬಂಧ ಪೊಲೀಸರು ಬಂಧಿಸಿದ್ದ ಮೂವರು ವ್ಯಕ್ತಿಗಳ ಪೈಕಿ ಆದಿಲ್ ಎಂಬಾತ ಇದ್ದರೂ ಆತ ಮಾತ್ರ ತಾನು ಸಮದ್‍ ನನ್ನು ದುಷ್ಕರ್ಮಿಗಳ ಕೈಯಿಂದ ಪಾರು ಮಾಡಲು ಬಂದಿದ್ದಾಗಿ ಹೇಳಿದ್ದಾನೆ.

ಪೊಲೀಸರ ಪ್ರಕಾರ ಘಟನೆಯಲ್ಲಿ ಬೇಕಾಗಿದ್ದ ಏಳೆಂಟು ಮಂದಿಯಲ್ಲಿ ಮೂರ್ನಾಲ್ಕು ಮಂದಿ ಹಿಂದುಗಳಾಗಿದ್ದರೆ ಉಳಿದವರು ಮುಸ್ಲಿಮರಾಗಿದ್ದಾರೆ.

ಈ ಪ್ರಕರಣ ಜೂನ್ 7ರಂದು ನಡೆದಿದ್ದರೂ ಸೋಮವಾರ ಧ್ವನಿರಹಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಘಟನೆ ಸುದ್ದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News