ಬಿಬಿಎಂಪಿ ವ್ಯಾಪ್ತಿಯಲ್ಲಿ ಜೂ.21ರ ಬಳಿಕ ಹಂತ ಹಂತವಾಗಿ ಸಾರಿಗೆ ಬಸ್‍ ಸಂಚಾರ: ಗೌರವ್‍ ಗುಪ್ತ

Update: 2021-06-16 12:20 GMT

ಬೆಂಗಳೂರು, ಜೂ.16: ಬಿಬಿಎಂಪಿ ವ್ಯಾಪ್ತಿಯಲ್ಲಿ ಶೀಘ್ರದಲ್ಲಿಯೇ ಕೋವಿಡ್ ಮಾರ್ಗಸೂಚಿ ಅಳವಡಿಸಿಕೊಂಡು, ಜೂ.21ರ ನಂತರ ಹಂತ, ಹಂತವಾಗಿ ಸಾರಿಗೆ ಬಸ್‍ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಬಿಬಿಎಂಪಿ ಮುಖ್ಯಆಯುಕ್ತ ಗೌರವ್‍ಗುಪ್ತ ತಿಳಿಸಿದ್ದಾರೆ.

ಬುಧವಾರ ಬಿಬಿಎಂಪಿ ಕೇಂದ್ರಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಜನತೆಯಿಂದ ಒತ್ತಾಯ ಕೇಳಿ ಬಂದಿದೆ. ಹೀಗಾಗಿ ಜೂ.21ರ ನಂತರ ಅನ್‍ಲಾಕ್ ಪ್ರಕ್ರಿಯೆ ಅನ್ವಯ ನಗರದಲ್ಲಿ ಸಾರಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸರಕಾರ ಸೂಕ್ತ ಮಾರ್ಗಸೂಚಿ ಪ್ರಕಟಿಸಲಿದೆ ಎಂದು ತಿಳಿಸಿದ್ದಾರೆ.

ಬಿಎಂಟಿಸಿ, ಮೆಟ್ರೋ ಸಾರಿಗೆ ಸಾಮಾನ್ಯ ಸ್ಥಿತಿಗೆ ತಲುಪಲು ಇನ್ನಷ್ಟು ಸಮಯ ಹಿಡಿಯಲಿದೆ. ಆದರೆ, ಹಂತ, ಹಂತವಾಗಿ ಸಾರಿಗೆ ಬಸ್‍ಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಸರಕಾರ ಅನುಮೋದನೆ ನೀಡಲಿದೆ. ಆದರೆ, ಜನತೆ ಸಾರಿಗೆ ವ್ಯವಸ್ಥೆಯನ್ನು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುತ್ತಾ ಸಂಚಾರ ಮಾಡುವುದರ ಕಡೆಗೆ ಹೆಚ್ಚಿನ ಆದ್ಯತೆ ತೋರಿಸಬೇಕೆಂದು ಅವರು ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರೂ ಸೊಂಕಿನಿಂದ ರಕ್ಷಣೆ ಪಡೆದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ನಗರದ ಎಲ್ಲೆಡೆಯೂ ಲಸಿಕಾ ಕಾರ್ಯಕ್ರಮವನ್ನು ಬಿಬಿಎಂಪಿ ನಡೆಸುತ್ತಿದೆ. ಸೋಂಕಿನ ಪ್ರಕರಣಗಳು ಮತ್ತೆ ಏರಿಕೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಹಾಗೂ ಜಾಗೃತಿ ನಾಗರಿಕರ ಮೇಲೆಯೂ ಇದೆ ಎಂದು ಅವರು ತಿಳಿಸಿದ್ದಾರೆ.

ಸೋಂಕು ಹರಡುವಿಕೆಯನ್ನು ಸಂಪೂರ್ಣ ನಿಯಂತ್ರಿಸಬೇಕಾದರೆ ಅನ್‍ಲಾಕ್ ಬಳಿಕವೂ ಎಲ್ಲರೂ ಜಾಗರೂಕತೆ ವಹಿಸಬೇಕು. ಆಗ ಮಾತ್ರ ಕೋವಿಡ್ ಮೂರನೇ ಅಲೆಯನ್ನು ನಾವು ಯಶಸ್ವಿಯಾಗಿ ಹಿಮ್ಮೆಟ್ಟಿಸಲು ಸಾಧ್ಯವೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News