ಬೆಂಗಳೂರು: ಪ್ರಿಯಕರನೊಂದಿಗೆ ಗಾಂಜಾ ಮಾರಾಟ ದಂಧೆ ಆರೋಪ: ಯುವತಿಯ ಬಂಧನ

Update: 2021-06-16 13:19 GMT

ಬೆಂಗಳೂರು, ಜೂ.16: ಪ್ರಿಯಕರನಿಗೆ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪದಡಿ ಯುವತಿ ಸೇರಿ ಇಬ್ಬರನ್ನು ಇಲ್ಲಿನ ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಕಾಕುಳಂನ ರೇಣುಕಾ(25), ಬಿಹಾರದ ಬೇಗುಸರೈನ ಸುಧಾಂಶು(21) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದೇ ಪ್ರಕರಣದಲ್ಲಿ ಕಡಪ ಮೂಲದ ಸಿದ್ದಾರ್ಥ್ ಹಾಗೂ ಗೋಪಾಲ್‍ಗಾಗಿ ಸದಾಶಿವನಗರ ಪೊಲೀಸರು ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ. ಇನ್ನು, ತಲೆ ಮರೆಸಿಕೊಂಡಿರುವ ಆರೋಪಿ ಸಿದ್ದಾರ್ಥ್ ಬಂಧಿತ ರೇಣುಕಾಳ ಪ್ರಿಯಕರನಾಗಿದ್ದಾನೆ.

ರೇಣುಕಾ ಹಾಗೂ ಸಿದ್ದಾರ್ಥ್ ಇಬ್ಬರು ಚೆನ್ನೈನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇವರಿಬ್ಬರ ಪ್ರೀತಿಗೆ ರೇಣುಕಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಕಾಲೇಜು ವ್ಯಾಸಂಗ ಮುಗಿದ ಬಳಿಕ ಮನೆಯವರ ವಿರೋಧ ಕಟ್ಟಿಕೊಂಡು ಚೆನ್ನೈನ ಕಂಪೆನಿಯೊಂದರಲ್ಲಿ ರೇಣುಕಾ ಕೆಲಸ ಮಾಡುತ್ತಿದ್ದಳು. ವ್ಯಾಸಂಗ ಮುಗಿದ ಬಳಿಕ ಕಡಪಗೆ ತೆರಳಿದ್ದ ಸಿದ್ದಾರ್ಥ್, ಮೋಜಿನ ಜೀವನ ನಡೆಸಲು ಗಾಂಜಾ ದಂಧೆಗೆ ಇಳಿದಿದ್ದ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಕೆಲ ದಿನಗಳ ಹಿಂದೆ ಪ್ರಿಯತಮೆಗೆ ಕರೆ ಮಾಡಿ ಹೊಸ ಉದ್ಯಮ ಆರಂಭಿಸುತ್ತಿದ್ದೇನೆ, ನೀನು ಸಹಾಯ ಮಾಡಿದರೆ ಲಕ್ಷಾಂತರ ರೂಪಾಯಿ ದುಡಿಯಬಹುದು ಎಂದು ಹೇಳಿದ್ದ. ಅದರಂತೆ ಖಾಸಗಿ ಕಂಪೆನಿಯಲ್ಲಿ ಮಾಡುತ್ತಿದ್ದ ಕೆಲಸವನ್ನು ತೊರೆದು, ಪ್ರಿಯಕರನ ಸೂಚನೆಯಂತೆ ಈಕೆ ನಗರದ ಮಾರತ್ ಹಳ್ಳಿಯಲ್ಲಿ ಕೊಠಡಿಯಲ್ಲಿ ವಾಸ ಮಾಡಿಕೊಂಡು ಮಾದಕ ವಸ್ತು ಮಾರಾಟಕ್ಕೆ ಇಳಿದಿದ್ದಳು ಎಂದು ಆರೋಪಿಸಲಾಗಿದೆ.

ಇನ್ನು, ಬಿಹಾರದ ಸುಧಾಂಶುನಿಗೆ ನಗರದ ಮಾದಕ ವಸ್ತುಗಳ ವ್ಯವಹಾರದ ಮಾಹಿತಿಯಿತ್ತು. ತದನಂತರ ಸುಧಾಂಶುನನ್ನು ರೇಣುಕಾಗೆ ಸಿದ್ದಾರ್ಥ್ ಪರಿಚಯ ಮಾಡಿಕೊಟ್ಟಿದ್ದ. ಅದರಂತೆ ಆಂಧ್ರದಿಂದ ನಗರಕ್ಕೆ ಸಣ್ಣ ಪೊಟ್ಟಣಗಳನ್ನು ನಗರಕ್ಕೆ ಕಳುಹಿಸುತ್ತಿದ್ದ. ಕೆಲ ದಿನಗಳ ಹಿಂದೆ ಸದಾಶಿವನಗರದ ಐಟಿಐ ಪಾರ್ಕ್ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ರೇಣುಕಾಳನ್ನು ಬಂಧಿಸಿದ್ದಾರೆ.

ಒಡಿಶಾ ಹಾಗೂ ವಿಶಾಖಪಟ್ಟಣದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸುತ್ತಿದ್ದ ಸಿದ್ದಾರ್ಥ್, ಅದನ್ನು ರೇಣುಕಾಗೆ ಕಳುಹಿಸುತ್ತಿದ್ದ. 50 ಗ್ರಾಂ ಗಾಂಜಾ 2 ರಿಂದ 3 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿರುವುದಾಗಿ ಪೊಲೀಸರ ಮುಂದೆ ಯುವತಿ ಒಪ್ಪಿಕೊಂಡಿದ್ದಾಳೆ. ಸದ್ಯ ಬಂಧಿತರಿಂದ 2.5 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಿ, ತನಿಖೆ ಮುಂದುವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News