ಚೊಚ್ಚಲ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಇಂದಿನಿಂದ ಭಾರತ-ನ್ಯೂಝಿಲ್ಯಾಂಡ್ ಮುಖಾಮುಖಿ

Update: 2021-06-18 05:36 GMT
Photo ://twitter.com/ICC 

ಸೌಥಾಂಪ್ಟನ್ (ಇಂಗ್ಲೆಂಡ್),: ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಭಾರತ ಮತ್ತು ನ್ಯೂಝಿಲ್ಯಾಂಡ್ ತಂಡಗಳ ನಡುವೆ ಇಂಗ್ಲೆಂಡ್‌ನ ಸೌಥಾಂಪ್ಟನ್‌ನಲ್ಲಿ ಶುಕ್ರವಾರ ಆರಂಭಗೊಳ್ಳಲಿದೆ.

144 ವರ್ಷಗಳ ಇತಿಹಾಸ ಹೊಂದಿರುವ ಟೆಸ್ಟ್ ಕ್ರಿಕೆಟ್‌ಗೆ ಸಮಯ ಕಳೆದಂತೆ ಕಾಯಕಲ್ಪ ನೀಡುವ ಅಗತ್ಯವನ್ನು ಮನಗಂಡು ಈ ನೂತನ ಪ್ರಯೋಗವನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ಕೋವಿಡ್-19 ಸಾಂಕ್ರಾಮಿಕ ಸೇರಿದಂತೆ ಹಲವಾರು ವಿಘ್ನಗಳು ಇದಕ್ಕೆ ಎದುರಾಗಿವೆ.

ಚಾಂಪಿಯನ್‌ಶಿಪ್‌ನ ಗೌರವಕ್ಕಾಗಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಝಿಲ್ಯಾಂಡ್ ಮತ್ತು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡಗಳು ಸೆಣಸಲಿವೆ.

ಏಕದಿನ ಮತ್ತು ಟಿ-20 ಕ್ರಿಕೆಟ್ ಮಾದರಿಗಳಲ್ಲಿ ನಾಲ್ಕು ವರ್ಷಕ್ಕೊಮ್ಮೆ ವಿಶ್ವಕಪ್ ಪಂದ್ಯಾವಳಿಯನ್ನು ನಡೆಸುವ ಮಾದರಿಯಲ್ಲೇ ಟೆಸ್ಟ್ ಕ್ರಿಕೆಟ್‌ಗೂ ಈ ಗೌರವವನ್ನು ನೀಡುವುದಕ್ಕಾಗಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಮ್ಮಿಕೊಂಡಿದೆ.

2019ರ ಜುಲೈಯಿಂದ ಆರಂಭಗೊಂಡು ಎರಡು ವರ್ಷಗಳ ಅವಧಿಯಲ್ಲಿ ಪಂದ್ಯಾವಳಿ ನಡೆದಿದೆ. ಈ ಪಂದ್ಯಾವಳಿಯಲ್ಲಿ 9 ಟೆಸ್ಟ್ ತಂಡಗಳು 71 ಪಂದ್ಯಗಳನ್ನು ಆಡಿವೆ. ಪ್ರತಿಯೊಂದು ತಂಡವು ಪ್ರತಿಯೊಂದು ಎದುರಾಳಿ ವಿರುದ್ಧ ಮೂರು ಪಂದ್ಯಗಳನ್ನು ಸ್ವದೇಶದಲ್ಲಿ ಮತ್ತು ಮೂರು ಪಂದ್ಯಗಳನ್ನು ಎದುರಾಳಿ ದೇಶದಲ್ಲಿ ಆಡಿದೆ.

ಪ್ರತಿಯೊಂದು ತಂಡಕ್ಕೂ ಅಂಕಗಳನ್ನು ನೀಡಲಾಗಿದ್ದು, ಭಾರತ 520 ಅಂಕಗಳೊಂದಿಗೆ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ 420 ಅಂಕಗಳನ್ನು ಪಡೆದ ನ್ಯೂಝಿಲ್ಯಾಂಡ್ ಇದೆ.

ಫೈನಲ್‌ನಲ್ಲಿ ಗೆದ್ದ ತಂಡವು 1.6 ಮಿಲಿಯ ಡಾಲರ್ ನಗದು ಬಹುಮಾನ ಪಡೆದರೆ, ಸೋತ ತಂಡಕ್ಕೆ ಇದರ ಅರ್ಧದಷ್ಟು ಮೊತ್ತ ಸಿಗಲಿದೆ.

ತಂಡಗಳು

ಭಾರತ:ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಶುಬ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರಿಶಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮ, ಮುಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್, ಉಮೇಶ್ ಯಾದವ್, ಹನುಮ ವಿಹಾರಿ ಮತ್ತು ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್).

ನ್ಯೂಝಿಲ್ಯಾಂಡ್:ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್, ಟ್ರೆಂಟ್ ಬೋಲ್ಟ್, ಡೇವನ್ ಕಾನ್ವೆ, ಕಾಲಿನ್ ಡಿ ಗ್ರಾಂಡ್‌ಹೋಮ್, ಮ್ಯಾಟ್ ಹೆನ್ರಿ, ಕೈಲ್ ಜೆಮೀಸನ್, ಟಾಮ್ ಲಾಥಮ್, ಹೆನ್ರಿ ನಿಕೋಲ್ಸ್, ಅಜಾಝ್ ಪಟೇಲ್, ಟಿಮ್ ಸೌಥಿ, ರಾಸ್ ಟೇಲರ್, ನೀಲ್ ವಾಗ್ನರ್, ಬಿ.ಜೆ. ವಾಟ್ಲಿಂಗ್ ಮತ್ತು ವಿಲ್ ಯಂಗ್.

ಪಂದ್ಯ ಆರಂಭ: ಭಾರತೀಯ ಕಾಲಮಾನ ಶುಕ್ರವಾರ ಅಪರಾಹ್ನ 3:30

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News