ಅರಬ್ ಕೊಲ್ಲಿ ವಲಯದಿಂದ ಕ್ಷಿಪಣಿ ನಿರೋಧಕ ವ್ಯವಸ್ಥೆಗಳು ವಾಪಸ್: ಅಮೆರಿಕ ನಿರ್ಧಾರ

Update: 2021-06-19 18:04 GMT

ವಾಶಿಂಗ್ಟನ್, ಜೂ. 19: ಮಧ್ಯಪ್ರಾಚ್ಯದ ನಾಲ್ಕು ದೇಶಗಳಲ್ಲಿರುವ ‘ಪ್ಯಾಟ್ರಿಯಟ್’ ಕ್ಷಿಪಣಿ ನಿರೋಧಕ ವ್ಯವಸ್ಥೆಗಳನ್ನು ಅಮೆರಿಕದ ಬೈಡನ್ ಆಡಳಿತವು ಹಿಂದಕ್ಕೆ ಕರೆಸಿಕೊಳ್ಳುತ್ತಿದೆ. ಇರಾನ್ ಜೊತೆಗಿನ ಉದ್ವಿಗ್ನತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ವಲಯದಲ್ಲಿ ಸೇನಾ ಚಟುವಟಿಕೆಗಳನ್ನು ಕಡಿಮೆ ಮಾಡಲು ಅಮೆರಿಕ ನಿರ್ಧರಿಸಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಅಮೆರಿಕವು ಸೌದಿ ಅರೇಬಿಯ, ಇರಾನ್, ಕುವೈತ್ ಮತ್ತು ಜೋರ್ಡಾನ್ಗಳಿಂದ 8 ಪ್ಯಾಟ್ರಿಯಟ್ ಕ್ಷಿಪಣಿ ನಿಗ್ರಹ ವ್ಯವಸ್ಥೆಗಳನ್ನು ಮತ್ತು ಸೌದಿ ಅರೇಬಿಯದಿಂದ ಒಂದು ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯ ಡಿಫೆನ್ಸ್ (ತಾಡ್) ಕ್ಷಿಪಣಿ ವ್ಯವಸ್ಥೆಯನ್ನು ಹಿಂದಕ್ಕೆ ತರಿಸಿಕೊಳ್ಳುತ್ತಿದೆ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ಈ ಕ್ಷಿಪಣಿ ವ್ಯವಸ್ಥೆಗಳನ್ನು ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಆಡಳಿತಾವಧಿಯಲ್ಲಿ ಕೊಲ್ಲಿ ವಲಯದಲ್ಲಿ ನಯೋಜಿಸಲಾಗಿತ್ತು.

ಕ್ಷಿಪಣಿ ವ್ಯವಸ್ಥೆಗಳನ್ನು ನಿರ್ವಹಿಸುತ್ತಿದ್ದ ನೂರಾರು ಅಮೆರಿಕ ಸೈನಿಕರೂ ಈ ಯೋಜನೆಯ ಭಾಗವಾಗಿ ಅಮೆರಿಕಕ್ಕೆ ವಾಪಸಾಗುತ್ತಿದ್ದಾರೆ. ವಾಪಸಾತಿ ಪ್ರಕ್ರಿಯೆಯು ಈ ತಿಂಗಳ ಆದಿ ಭಾಗದಲ್ಲೇ ಆರಂಭವಾಗಿದೆ ಎಂದು ಪತ್ರಿಕೆ ಹೇಳಿದೆ. ಅಮೆರಿಕದ ವಿದೇಶ ಕಾರ್ಯದರ್ಶಿ ಲಾಯ್ಡಿ ಆಸ್ಟಿನ್ ಜೂನ್ 2ರಂದು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಜೊತೆ ಫೋನ್ನಲ್ಲಿ ಮಾತನಾಡಿ, ಕ್ಷಿಪಣಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಫೋನ್ ಕರೆಯ ಬಳಿಕ ವಾಪಸಾತಿ ಪ್ರಕ್ರಿಯೆ ಆರಂಭಗೊಂಡಿದೆ.

ಈ ಕ್ಷಿಪಣಿಗಳ ವಾಪಸಾತಿಯೊಂದಿಗೆ ಅರಬ್ ಕೊಲ್ಲಿ ವಲಯದಲ್ಲಿ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರುವುದೆಂಬ ನಿರೀಕ್ಷೆಯನ್ನು ಹೊಂದಲಾಗಿದೆ. ಆದರೆ, ವಲಯದಲ್ಲಿ ಅಮೆರಿಕದ ಸಾವಿರಾರು ಸೈನಿಕರ ಉಪಸ್ಥಿತಿ ಮುಂದುವರಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News