ದಾಖಲೆಗಳ ಸರದಾರ ಮಿಲ್ಖಾಸಿಂಗ್

Update: 2021-06-20 04:55 GMT

ಮಿಲ್ಖಾ ಸಿಂಗ್ ಅವರ ನಿಧನದೊಂದಿಗೆ ಅನರ್ಘ್ಯ ಕ್ರೀಡಾರತ್ನವೊಂದನ್ನು ಭಾರತ ಕಳೆದುಕೊಂಡಿದೆ. ತನ್ನ ಅಥ್ಲೀಟ್ ಕ್ರೀಡಾಬದುಕಿನುದ್ದಕ್ಕೂ ಸೋಲಿನ ಕಹಿಗಿಂತ ಗೆಲುವಿನ ಸಿಹಿಯನ್ನೇ ಹೆಚ್ಚಾಗಿ ಸವಿದಂತಹ ಮಿಲ್ಖಾ ಸಿಂಗ್ ಭಾರತೀಯ ಕ್ರೀಡಾಜಗತ್ತಿನ ದಂತಕಥೆಯಾಗಿದ್ದಾರೆ.

1958ರಲ್ಲಿ ನಡೆದ ಚೊಚ್ಚಲ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಿಲ್ಖಾ ಚಿನ್ನ ಗೆಲ್ಲುವ ಮೂಲಕ ಭಾರತೀಯರಲ್ಲಿ ಹೆಮ್ಮೆ ಮೂಡಿಸಿದ್ದರು. ಅಲ್ಲದೆ ಏಶ್ಯನ್ ಗೇಮ್ಸ್‌ನಲ್ಲಿಯೂ ನಾಲ್ಕು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರು.

ಮಿಲ್ಖಾ ಸಿಂಗ್ ವಿಶ್ವದರ್ಜೆಯ ಅಥ್ಲೀಟ್ ಎಂಬುದು 1950 ಹಾಗೂ 60ರ ದಶಕದಲ್ಲಿ ಬೆಳೆದಿದ್ದ ಭಾರತೀಯರೆಲ್ಲರಿಗೂ ಗೊತ್ತು. ಮಿಂಚಿನ ಓಟದ ಮೂಲಕ ಕ್ರೀಡಾಪ್ರೇಮಿಗಳನ್ನು ರೋಮಾಂಚನಗೊಳಿಸಿದ್ದ ಮಿಲ್ಖಾ ಸಿಂಗ್ ‘ಫ್ಲೈಯಿಂಗ್ ಸಿಖ್’ ಎಂದೇ ಖ್ಯಾತರಾಗಿದ್ದರು.

ಸ್ವಾತಂತ್ರಾನಂತರದ ಆರಂಭದ ದಶಕಗಳಲ್ಲಿ ಒಂದು ರಾಷ್ಟ್ರವಾಗಿ ಆಗಷ್ಟೇ ರೂಪುಗೊಂಡಿದ್ದ ಭಾರತಕ್ಕೆ ಕ್ರೀಡಾಕ್ಷೇತ್ರಕ್ಕೆ ಸಾಕಷ್ಟು ಸಂಪನ್ಮೂಲಗಳನ್ನು ಸುರಿಯುವಂತಹ ಸಾಮರ್ಥ್ಯವಿರಲಿಲ್ಲ. ದೇಶವಿಭಜನೆಯ ಸಂದರ್ಭ ಪಶ್ಚಿಮ ಪಾಕಿಸ್ತಾನದ ಮುಝಫ್ಫರ್‌ನಗರದ ಭಾರತಕ್ಕೆ ನಿರಾಶ್ರಿತರಾಗಿ ವಲಸೆ ಬಂದ ಮಿಲ್ಖಾ ಸಿಂಗ್‌ಗೆ ಆರಂಭದ ದಿನಗಳಲ್ಲಿ ದಿಲ್ಲಿಯ ರೈಲ್ವೆ ಫ್ಲಾಟ್‌ಫಾರ್ಮ್ ಮನೆಯಂತಾಗಿತ್ತು. ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕಾಗಿ ಅವರು ಕೆಲವು ದಿನಗಳನ್ನು ತಿಹಾರ್ ಜೈಲಿನಲ್ಲಿ ಕಳೆಯಬೇಕಾಯಿತು. ಸೋದರಿ ಈಶರ್ ತನ್ನಲ್ಲಿದ್ದ ಚಿನ್ನವನ್ನು ಮಾರಿ ಮಿಲ್ಖಾರನ್ನು ಬಿಡಿಸಿಕೊಂಡರು. ಆನಂತರ ಅವರು ಕೆಲವು ದಿನಗಳ ಕಾಲ ದಿಲ್ಲಿಯ ಪುರಾನಾ ಕಿಲ್ಲಾದಲ್ಲಿದ್ದ ನಿರಾಶ್ರಿತರ ಕಾಲನಿಯಲ್ಲಿ ಉಳಿದುಕೊಂಡಿದ್ದರು.

ಉದ್ಯೋಗವಿಲ್ಲದೆ ಜೀವನದಲ್ಲಿ ಜಿಗುಪ್ಸೆಗೊಂಡ ಮಿಲ್ಖಾ ಸಿಂಗ್‌ಗೆ ಡಕಾಯಿತನಾಗುವ ಯೋಚನೆ ಕೂಡಾ ಒಮ್ಮೆ ಮೂಡಿತ್ತು. ಆದರೆ ಅವರ ಸೋದರರಲ್ಲೊಬ್ಬರಾದ ಮಲ್ಖಾನ್ ಅವರು ಮಿಲ್ಖಾರನ್ನು ಸೇನೆಗೆ ಸೇರುವಂತೆ ಮನವೊಲಿಸಿದರು. ಅಂತೂ ತನ್ನ ನಾಲ್ಕನೇ ಪ್ರಯತ್ನದಲ್ಲಿ ಮಿಲ್ಖಾ 1951ರಲ್ಲಿ ಸೇನೆಗೆ ಸೇರ್ಪಡೆಗೊಳ್ಳುವಲ್ಲಿ ಸಫಲರಾದರು.

ಆದರೆ ಕಠಿಣವಾದ ಪರಿಶ್ರಮ ಹಾಗೂ ತನ್ನ ಸಾಮರ್ಥ್ಯದ ಬಗ್ಗೆ ದೃಢವಿಶ್ವಾಸವೊಂದಿದ್ದಲ್ಲಿ ಯಾವುದೂ ಅಸಾಧ್ಯವಲ್ಲ ವೆಂಬುದನ್ನು ಆತ ಮನಗಂಡಿದ್ದರು.

ಮಿಲ್ಖಾ ಸಿಂಗ್ 1952ರಲ್ಲಿ ಸಿಕಂದರಾಬಾದ್‌ನಲ್ಲಿ ಸೇನೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಮೊದಲ ಬಾರಿಗೆ ರೇಸ್‌ನಲ್ಲಿ ಪಾಲ್ಗೊಂಡಿದ್ದರು. ಅದೊಂದು ಕ್ರಾಸ್‌ಕಂಟ್ರಿ ಓಟವಾಗಿತ್ತು. ಆತ 300-400 ಜವಾನರೊಂದಿಗೆ ಓಡಿದ್ದರು. ಆದರೆ ಕೇವಲ ಅರ್ಧ ಮೈಲು ಓಡುತ್ತಿದ್ದಂತೆಯೇ ಸುಸ್ತಾದ ಮಿಲ್ಖಾಸಿಂಗ್ ಕುಳಿತು ಬಿಟ್ಟರು. ಆದರೆ ಆನಂತರ ಮೈಕೊಡವಿಕೊಂಡ ಅವರು ಎದ್ದು ಓಟವನ್ನು ಮುಂದುವರಿಸಿದರು. ಈ ಕ್ರಾಸ್‌ಕಂಟ್ರಿ ಓಟವನ್ನು ಪೂರ್ಣಗೊಳಿಸಿದ ಅಗ್ರ 10 ಮಂದಿ ಇನ್ನಷ್ಟು ತರಬೇತಿ ಪಡೆಯುವವರಿದ್ದರು. ಮಿಲ್ಖಾಸಿಂಗ್‌ಗೆ ಅದು ಬೇಕಾಗಿತ್ತು. ಹೀಗಾಗಿ ದಣಿವಾಗಿದ್ದರೂ ಅದನ್ನು ಲೆಕ್ಕಿಸದೆ ಎದ್ದುನಿಂತ ಅವರು ಚಿರತೆಯಂತೆ ಓಡತೊಡಗಿದರು ಹಾಗೂ ಆರನೇ ಸ್ಥಾನದಲ್ಲಿ ಓಟ ಪೂರ್ಣಗೊಳಿಸಿದರು. ಮಿಲ್ಖಾ ಸಿಂಗ್‌ಗೆ ಇದು ತೃಪ್ತಿ ತಂದುಕೊಡಲಿಲ್ಲವಾದರೂ, ಆತನಲ್ಲಿದ್ದ ಕ್ರೀಡಾಪ್ರತಿಭೆಯನ್ನು ಈ ಓಟವು ಬೆಳಕಿಗೆ ತಂದಿತ್ತು.

ತನ್ನಲ್ಲಿ ಅದ್ಭುತವಾದ ಕ್ರೀಡಾಪ್ರತಿಭೆ ಯಿರುವುದನ್ನು ಮಿಲ್ಖಾ ಸಿಂಗ್ ಕ್ರಮೇಣ ಅರಿತುಕೊಂಡರು. ಕೋಚ್ ಗುರುದೇವ್‌ಸಿಂಗ್ ಮಿಲ್ಖಾ ಅವರ ಗುರಿಗೆ ಪ್ರೇರಕಶಕ್ತಿಯಾದರು. ಪ್ರತಿದಿನವೂ ಮಿಲ್ಖಾ ಐದರಿಂದ ಆರು ತಾಸುಗಳ ಕಾಲ ತರಬೇತಿ ಪಡೆಯುತ್ತಿದ್ದರು. ಬೆಟ್ಟಗುಡ್ಡಗಳಲ್ಲಿ, ಯಮುನಾ ನದಿಯ ಮರಳ ದಂಡೆಯಲ್ಲಿ ಅವರು ಓಟದ ಅಭ್ಯಾಸ ನಡೆಸಿದರು. ಮಿಲ್ಖಾ ಸಿಂಗ್ ಓಟದ ಗೀಳು ಎಷ್ಟು ಹಚ್ಚಿತ್ತೆಂದರೆ ವೇಗವಾಗಿ ಓಡುವ ಮೀಟರ್‌ಗೇಜ್ ರೈಲಿನ ಜೊತೆಗೂ ಅವರು ಸ್ಪರ್ಧೆಗಿಳಿದುಬಿಡುತ್ತಿದ್ದರು. ಅವರು ತನ್ನನ್ನು ತರಬೇತಿಯಲ್ಲಿ ಎಷ್ಟು ತೀವ್ರವಾಗಿ ತೊಡಗಿಸಿಕೊಂಡಿದ್ದರೆಂದರೆ ಕೆಲವೊಮ್ಮೆ ರಕ್ತವನ್ನು ಕೂಡಾ ಕಾರಿದ್ದರು ಹಾಗೂ ಆಯಾಸಗೊಂಡು ಕುಸಿದುಬೀಳುತ್ತಿದ್ದರು.

1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಮಿಲ್ಖಾ ಸಿಂಗ್ 400 ಮೀಟರ್ ಓಟವನ್ನು 45.73 ಸೆಕೆಂಡ್‌ಗಳಲ್ಲಿ ಕ್ರಮಿಸಿದ ಅವರ ರಾಷ್ಟ್ರೀಯ ದಾಖಲೆಯನ್ನು 38 ವರ್ಷಗಳ ಕಾಲ ಯಾವ ಭಾರತೀಯ ಕ್ರೀಡಾಪಟುವಿಗೂ ಮುರಿಯಲು ಸಾಧ್ಯವಾಗಿರಲಿಲ್ಲ. ರೋಮ್ ಒಲಿಂಪಿಕ್ಸ್ ಕ್ರೀಡಾಕೂಟದ 400 ಮೀಟರ್ ರೇಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದುದು ಮಾತ್ರ ಮಿಲ್ಖಾಗೆ ತೀವ್ರ ವಿಷಾದವುಂಟು ಮಾಡಿತ್ತು. ರೋಮ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಒಂದು ಪದಕವನ್ನಾದರೂ ತಂದುಕೊಡಲು ಸಾಧ್ಯವಾಗದೆ ಇದ್ದುದಕ್ಕಾಗಿ ಮಿಲ್ಖಾ ಹಲವಾರು ದಿನಗಳ ಕಾಲ ಅತ್ತಿದ್ದರು. ತನ್ನ ತಂದೆ-ತಾಯಿಗಳ ನಿಧನದ ಘಟನೆಗಳನ್ನು ಬಿಟ್ಟರೆ ಒಲಿಂಪಿಕ್ಸ್ ಪದಕದಿಂದ ವಂಚಿತನಾದುದು ತನ್ನ ಜೀವನದ ಅತ್ಯಂತ ಆಘಾತಕಾರಿ ಸಂಗತಿ ಎಂದವರು ಹೇಳುತ್ತಿದ್ದರು.

 ಮಿಲ್ಖಾ ಸಿಂಗ್ ಇನ್ನಿಲ್ಲವಾದರೂ ಕ್ರೀಡಾಳುವಾಗಿ ಅವರ ಪರಿಶ್ರಮ ಹಾಗೂ ಸಾಧನೆಗಳು ಹೊಸ ತಲೆಮಾರಿಗೆ ಸದಾ ಪ್ರೇರಣೆಯಾಗಿರುವುದರಲ್ಲಿ ಸಂದೇಹವೇ ಇಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News