ಹೊಸ ಡೆಲ್ಟಾ ಪ್ಲಸ್ ಪ್ರಭೇದವು ಕಳವಳಕಾರಿ ತಳಿಯಾಗಬಹುದು: ಏಮ್ಸ್ ಮುಖ್ಯಸ್ಥ

Update: 2021-06-20 18:04 GMT

ಹೊಸದಿಲ್ಲಿ,ಜೂ.20: ಭಾರತದಲ್ಲಿ ಕೋವಿಡ್ ಎರಡನೇ ಅಲೆಯನ್ನುಂಟು ಮಾಡಿದ್ದ ಹೆಚ್ಚು ಆಕ್ರಮಶಾಲಿ ಬಿ.1.617.2 ತಳಿಯ ರೂಪಾಂತರಿತ ಪ್ರಭೇದವಾಗಿರುವ ಡೆಲ್ಟಾ ಪ್ಲಸ್ ತಳಿಯು ಕೆ417ಎನ್ ಎಂಬ ಹೆಚ್ಚುವರಿ ರೂಪಾಂತರವನ್ನು ಪಡೆಯುತ್ತಿದ್ದು,ಇದನ್ನು ತಡೆಯದಿದ್ದರೆ ಇದು ಕಳವಳಕಾರಿ ತಳಿಯಾಗಬಹುದು ಎಂದು ತಿಳಿಸಿರುವ ಏಮ್ಸ್-ದಿಲ್ಲಿಯ ಮುಖ್ಯಸ್ಥ ಡಾ.ರಣದೀಪ ಗುಲೇರಿಯಾ ಅವರು,ಭಾರತವು ಈ ಪ್ರಭೇದದಿಂದಾಗಿ ಕೊರೋನವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬ್ರಿಟನ್ನಿಂದ ಕಲಿತುಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

 ಕೋವಿಡ್ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಭಾರತದಲ್ಲಿ ತೀವ್ರಗತಿಯಲ್ಲಿ ಸೋಂಕು ಹೆಚ್ಚಬಹುದು ಎಂದು ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಡಾ.ಗುಲೇರಿಯಾ,ದೇಶದ ಹಲವೆಡೆಗಳಲ್ಲಿ ಲಾಕ್ಡೌನ್ ತೆರವುಗೊಂಡ ಬಳಿಕ ಕೋವಿಡ್ ಪ್ರಕರಣಗಳಲ್ಲಿ ಯಾವುದೇ ಏರಿಕೆಯನ್ನು ತಡೆಯಲು ತೀವ್ರ ನಿಗಾ ವಹಿಸುವ ಅಗತ್ಯಕ್ಕೆ ಒತ್ತು ನೀಡಿದರು.

ಡೆಲ್ಟಾ ಪ್ಲಸ್ ಡೆಲ್ಟಾ ವಂಶಕ್ಕೆ ಸೇರಿದ ತಳಿಯಾಗಿದ್ದು,ಇನ್ನೊಂದು ರೂಪಾಂತರಿತ ಪ್ರಭೇದ ಪತ್ತೆಯಾಗುವುದರೊಂದಿಗೆ ಸ್ವಲ್ಪ ಬದಲಾವಣೆಯನ್ನು ಹೊಂದಿದೆ. ಇದು ಕಳವಳಕ್ಕೆ ಕಾರಣವಾಗಬಹುದು,ಏಕೆಂದರೆ ಕೆ417ಎನ್ ಎಂಬ ಈ ರೂಪಾಂತರಿತ ಪ್ರಭೇದವು ವೈರಸ್‌ನ ಸಾಂಕ್ರಾಮಿಕತೆಯನ್ನು ಹೆಚ್ಚಿಸಬಹುದು. ರೋಗ ನಿರೋಧಕ ವ್ಯವಸ್ಥೆಯನ್ನು ಭೇದಿಸಬಹುದು. ನಾವು ಈ ಬಗ್ಗೆ ನಿಗಾಯಿರಿಸುವ ಅಗತ್ಯವಿದೆ. ಇದು ಆಸಕ್ತಿದಾಯಕ ಪ್ರಭೇದ ಎಂದು ವಿಶ್ವಸಂಸ್ಥೆ ಹೇಳುತ್ತಿದೆ,ಆದರೆ ಸದ್ಯ ಪ್ರಕರಣಗಳ ಸಂಖ್ಯೆ ಕಡಿಮೆಯಿರುವುದರಿಂದ ಇದು ಕಳವಳಕಾರಿ ಪ್ರಭೇದವಾಗಬಹುದು. ಈ ಡೆಲ್ಟಾ ಪ್ಲಸ್ ಪ್ರಭೇದವು ಹೆಚ್ಚು ಶಕ್ತಿಶಾಲಿ ಪ್ರಭೇದವಾಗಲಿದೆಯೇ ಎನ್ನುವುದನ್ನು ನಾವು ಮುಂದಿನ ಕೆಲವು ವಾರಗಳ ಕಾಲ ಕಾದು ನೋಡಬೇಕಿದೆ ಎಂದು ಗುಲೇರಿಯಾ ತಿಳಿಸಿದರು.

ಈ ಕೆ417ಎನ್ ರೂಪಾಂತರಿತ ವೈರಸ್ ನ್ನು ನಾವು ಲಘುವಾಗಿ ಪರಿಗಣಿಸಬಾರದು. ಈ ವೈರಸ್ ಬದಲಾಗುತ್ತಿದೆ ಮತ್ತು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಾಗೂ ಹೆಚ್ಚೆಚ್ಚು ಜನರಿಗೆ ಸೋಂಕು ಹರಡಲು ಬದಲಾಗುತ್ತಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ನಾವು ಹೆಚ್ಚು ಆಕ್ರಮಕವಾಗಬೇಕಿದೆ ಮತ್ತು ವೈರಸ್ ಗಿಂತ ಒಂದು ಹೆಜ್ಜೆ ಮುಂದೆಯೇ ಇರಲು ಪ್ರಯತ್ನಿಸಬೇಕಿದೆ ಎಂದು ಹೇಳಿದ ಅವರು,ಹಲವಾರು ತಿಂಗಳುಗಳ ಕಟ್ಟುನಿಟ್ಟಿನ ಲಾಕ್ಡೌನ್ ಹೇರುವ ಮೂಲಕ ಬ್ರಿಟನ್ ಒಳ್ಳೆಯ ಕೆಲಸವನ್ನು ಮಾಡಿತ್ತು. ಆದರೆ ಅದು ಲಾಕ್ಡೌನ್ ಹಿಂದೆಗೆದುಕೊಂಡಾಗ ನೂತನ ಪ್ರಭೇದವಾದ ಡೆಲ್ಟಾ ಪ್ರಕರಣಗಳ ಸಂಖ್ಯೆ ಹೆಚ್ಚಲು ಕಾರಣವಾಗಿತ್ತು. ನಾವೂ ಈಗ ಅಂತಹುದೇ ದುರ್ಬಲ ಸ್ಥಿತಿಯಲ್ಲಿದ್ದೇವೆ ಮತ್ತು ಈಗಿನಿಂದಲೇ ಎಚ್ಚರಿಕೆ ವಹಿಸದಿದ್ದರೆ 3-4 ತಿಂಗಳುಗಳಲ್ಲಿ ನಾವು ಮತ್ತೆ ಅಂತಹುದೇ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ವೈರಸ್ ರೂಪಾಂತರಗೊಳ್ಳುತ್ತಿದೆ,ಬದಲಾಗುತ್ತಿದೆ ಮತ್ತು ಹೊಸ ಪ್ರಭೇದವು ತಲೆಯೆತ್ತುತ್ತಿದೆ ಎಂದರು.
ಹೆಚ್ಚಿನ ಡೆಲ್ಟಾ ಅಥವಾ ಡೆಲ್ಟಾ ಪ್ಲಸ್ ಪ್ರಕರಣಗಳಿವೆಯೇ ಮತ್ತು ಸಮುದಾಯದಲ್ಲಿ ಇವೆರಡು ಪ್ರಭೇದಗಳು ಹೇಗೆ ವರ್ತಿಸುತ್ತವೆ ಎನ್ನುವುದನ್ನು ತಿಳಿದುಕೊಳ್ಳಲು ಜೆನೋಮ್ ಸೀಕ್ವೆನ್ಸ್ ನ್ನು ತೀವ್ರವಾಗಿ ಹೆಚ್ಚಿಸುವ ಅಗತ್ಯವಿದೆ ಎಂದು ಡಾ.ಗುಲೇರಿಯಾ ತಿಳಿಸಿದರು.
 
ಡೆಲ್ಟಾ ಪ್ಲಸ್ ಪ್ರಭೇದವು ಈ ವರ್ಷದ ಮಾರ್ಚ್ ನಿಂದಲೇ ಅಸ್ತಿತ್ವದಲ್ಲಿದೆ. ಆದರೆ ಸದ್ಯಕ್ಕೆ ಅದು ಕಳವಳ ಪಡಬೇಕಾದ ಪ್ರಭೇದವಾಗಿಲ್ಲ ಎಂದು ಸರಕಾರವು ಹೇಳಿದೆ. ಡೆಲ್ಟಾ ಪ್ಲಸ್ನ ಅಸ್ತಿತ್ವವನ್ನು ಪತ್ತೆ ಹಚ್ಚಲಾಗಿದೆ ಮತ್ತು ಜಾಗತಿಕ ಡಾಟಾ ವ್ಯವಸ್ಥೆಗೆ ಮಾಹಿತಿ ನೀಡಲಾಗಿದೆ ಎದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪೌಲ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News