ಬೆಂಕಿ ಬಿದ್ದು ಮುಳುಗಿದ ಶ್ರೀಲಂಕಾ ಹಡಗಿನಿಂದ ಪರಿಸರ ಮಾಲಿನ್ಯ : ವಿಶ್ವಸಂಸ್ಥೆ ಆತಂಕ

Update: 2021-06-20 18:50 GMT

ಕೊಲಂಬೋ: ಕೊಲಂಬೋ ಬಂದರಿನಿಂದ ರಾಸಾಯನಿಕಗಳನ್ನು ಸಾಗಿಸುತ್ತಿದ್ದ ಹಡಗು ಬೆಂಕಿಯಿಂದ ಹೊತ್ತಿ ಉರಿದು ಸಮುದ್ರದಲ್ಲಿ ಮುಳುಗಿದ್ದು ಇದರಿಂದ ಹೊರಬಿದ್ದು ಪರಿಸರ ವ್ಯವಸ್ಥೆಗೆ ಸೇರಿಕೊಳ್ಳುವ ಅಪಾಯಕಾರಿ ಅಂಶಗಳು ಭೂಮಿಗೆ ಗಮನಾರ್ಹ ಹಾನಿ ಎಸಗಿವೆ ಎಂದು ಶ್ರೀಲಂಕಾದಲ್ಲಿನ ವಿಶ್ವಸಂಸ್ಥೆಯ ಪ್ರತಿನಿಧಿ ಆತಂಕ ವ್ಯಕ್ತಪಡಿಸಿದ್ದಾರೆ.

ಸಿಂಗಾಪುರದ ಎಕ್ಸ್-ಪ್ರೆಸ್ ಫೀಡರ್ಸ್  ಸಂಸ್ಥೆಗೆ ಸೇರಿರುವ ಎಂವಿ ಎಕ್ಸ್-ಪ್ರೆಸ್ಪರ್ಲ್ ಎಂಬ ಹಡಗು ರಾಸಾಯನಿಕ ವಸ್ತುಗಳನ್ನು ಹೇರಿಕೊಂಡು  ಕೊಲಂಬೋ ಬಂದರಿನಿಂದ ಹೊರಟಿತ್ತು. ಆದರೆ ಕೊಲಂಬೋದಿಂದ ೯.೫ ನಾಟಿಕಲ್ ಮೈಲು ದೂರದಲ್ಲಿ ಮೇ ೨೦ರಂದು ಹಡಗಿಗೆ ಬೆಂಕಿ ಹತ್ತಿಕೊಂಡಿದ್ದು ವಿಶ್ವಸಂಸ್ಥೆಯ ತೈಲ ಮತ್ತು ರಾಸಾಯನಿಕ ಸ್ರಾವ ತಜ್ಞರ ತಂಡ ಸುಮಾರು ೧ ತಿಂಗಳು ನಡೆಸಿದ ಬೆಂಕಿ ನಂದಿಸುವ ಕಾರ್ಯಾಚರಣೆ ವಿಫಲವಾಗಿ ಹಡಗು ಜೂ.೧೭ರಂದು ಸಮುದ್ರದಲ್ಲಿ ಮುಳುಗಿದೆ. ಈ ಕಾರ್ಯಾಚರಣೆಗೆ ತಗುಲಿದ ವೆಚ್ಚದಲ್ಲಿ ಅರ್ಧಾಂಶ, ಅಂದರೆ ೪೦ ಮಿಲಿಯನ್ ಡಾಲರ್ ಮೊತ್ತವನ್ನು ಎಕ್ಸ್-ಪ್ರೆಸ್ ಫೀಡರ್ಸ್  ಭರಿಸಬೇಕು ಎಂದು ಶ್ರೀಲಂಕಾ ಸರಕಾರ ಪ್ರತಿಪಾದಿಸಿದೆ.

ಮುಳುಗಿದ ಹಡಗಿನಿಂದ ಹೊರಬಿದ್ದು ಪರಿಸರ ವ್ಯವಸ್ಥೆಗೆ ಸೇರ್ಪಡೆಯಾಗುವ ಅಪಾಯಕಾರಿ ವಸ್ತುಗಳು ಭೂಮಿಗೆ ಭಾರೀ ಹಾನಿ ಎಸಗಲಿದೆ. ಇದರಿಂದ ಕೊಲಂಬೋ ಕರಾವಳಿ ಪ್ರದೇಶದ ಜನರ ಜೀವಕ್ಕೆ ಅಪಾಯವಿದೆ ಎಂದು ಶ್ರೀಲಂಕಾದಲ್ಲಿನ ವಿಶ್ವಸಂಸ್ಥೆಯ ಸ್ಥಾನಿಕ ಸಂಯೋಜಕ ಹನಾ ಸಿಂಗರ್-ಹಮ್ದಿ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಪರಿಸರ ದುರಂತವನ್ನು ತಡೆಯಲು ವಿಫಲವಾಗಿರುವುದಕ್ಕೆ ಶ್ರೀಲಂಕಾ ಸರಕಾರ ಹಾಗೂ  ಎಕ್ಸ್-ಪ್ರೆಸ್ ಫೀಡರ್ಸ್  ವಿರುದ್ಧ ಪರಿಸರವಾದಿಗಳು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ಬಗ್ಗೆ ಕ್ರಿಮಿನಲ್ ವಿಚಾರಣೆ ಆರಂಭಿಸಿರುವುದಾಗಿ ಶ್ರೀಲಂಕಾ ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News