ಬ್ರಿಟನ್ ಸಂಸತ್ತಿನ ಮಾಜಿ ಸ್ಪೀಕರ್ ಜಾನ್ ಬೆರ್ಕೊ ಲೇಬರ್ ಪಾರ್ಟಿಗೆ ಸೇರ್ಪಡೆ

Update: 2021-06-20 18:52 GMT

ಲಂಡನ್: ಬ್ರಿಟನ್ ನ ಹೌಸ್ ಆಫ್ ಕಾಮನ್ಸ್(ಸಂಸತ್ತು) ಮಾಜಿ ಸ್ಪೀಕರ್ ಜಾನ್ ಬೆರ್ಕೋ ಕನ್ಸರ್ವೇಟಿವ್ ಪಕ್ಷಕ್ಕೆ ರಾಜೀನಾಮೆ ನೀಡಿ ವಿಪಕ್ಷ ಲೇಬರ್ ಪಾರ್ಟಿಗೆ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ.

ʼದಿ ಅಬ್ಸರ್ವರ್' ಪತ್ರಿಕೆಯ ರವಿವಾರದ ಸಂಚಿಕೆಯಲ್ಲಿ ಪ್ರಕಟವಾದ ಸಂದರ್ಶನದಲ್ಲಿ ಬೆರ್ಕೋ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೋರಿಸ್ ಜಾನ್ಸನ್ ಓರ್ವ ಯಶಸ್ವೀ ಪ್ರಚಾರಕ ಆದರೆ, ಅಸಹ್ಯ ಆಡಳಿತಗಾರ. . ಸಮಾನ ಸಮಾಜದ ಬಗ್ಗೆ ಜಾನ್ಸನ್ಗೆ ಯಾವ ಪರಿಕಲ್ಪನೆಯೂ ಇಲ್ಲ. ಅವರಾಡುವ ಸುಳ್ಳು, ಪೊಳ್ಳು ಘೋಷಣೆ, ಆಡಳಿತ ವೈಫಲ್ಯದಿಂದ ಜನತೆ ರೋಸಿಹೋಗಿದ್ದಾರೆ.  

ಜಾನ್ಸನ್ ನಾಯಕತ್ವದಡಿ ಕನ್ಸರ್ವೇಟಿವ್ ಪಕ್ಷವು ಪ್ರತಿಗಾಮಿ ಚಿಂತನೆಯ, ರಾಷ್ಟ್ರೀಯತಾವಾದದ ಮತ್ತು ವಿದೇಶೀಯರ ಬಗ್ಗೆ ಭೀತಿ ಹೊಂದಿರುವ ಪಕ್ಷವಾಗಿದೆ. ಲೇಬರ್ ಪಾರ್ಟಿ ಸಮಾನತೆಗೆ, ಸಾಮಾಜಿಕ ನ್ಯಾಯಕ್ಕೆ ಮತ್ತು ಅಂತರಾಷ್ಟ್ರೀಯತಾ ವಾದಕ್ಕೆ ನೀಡುವ ಬೆಂಬಲದಿಂದ ಪ್ರೇರಿತನಾಗಿದ್ದೇನೆ. ಬ್ರಿಟನ್ ನ ಈಗಿನ ಸರಕಾರ ಬದಲಾಗಬೇಕಿದೆ.  ಈ ಉದ್ದೇಶ ಈಡೇರಿಸಲು ಲೇಬರ್ ಪಾರ್ಟಿಯಿಂದ ಮಾತ್ರ ಸಾಧ್ಯ. ಬೇರೆ ಯಾವ ವಿಶ್ವಾಸಾರ್ಹ ಆಯ್ಕೆಯೂ ಇಲ್ಲ ಎಂದು ಬೆರ್ಕೋ ಹೇಳಿದ್ದಾರೆ.

ಬ್ರಿಟನ್ ಸಂಸತ್ತಿನ ಸ್ಪೀಕರ್ ಆಗಿ 10 ವರ್ಷ ಕಾರ್ಯನಿರ್ವಹಿಸಿದ್ದ ಬೆರ್ಕೋ ೨೦೧೯ರ ಅಕ್ಟೋಬರ್ನಲ್ಲಿ ಹುದ್ದೆ ತ್ಯಜಿಸಿದ್ದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News