ಪಾಕಿಸ್ತಾನದಲ್ಲಿ ಅಮೆರಿಕ ಸೇನಾನೆಲೆಗೆ ಅವಕಾಶವಿಲ್ಲ: ಇಮ್ರಾನ್ ಖಾನ್

Update: 2021-06-21 05:07 GMT

ಇಸ್ಲಮಾಬಾದ್, ಜೂ.: ಅಪಘಾನಿಸ್ತಾನದಲ್ಲಿ ಸೇನಾ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಅಮೆರಿಕವು ಪಾಕಿಸ್ತಾನದಲ್ಲಿ ಸೇನಾನೆಲೆ ಸ್ಥಾಪಿಸಲು ಅಥವಾ ಪಾಕಿಸ್ತಾನದ ಪ್ರದೇಶವನ್ನು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ. 

‘ಅಪಘಾನಿಸ್ತಾನದಲ್ಲಿ ಸೇನಾ ಕಾರ್ಯಾಚರಣೆಗೆ ಪಾಕ್ನ ನೆಲವನ್ನು ಬಳಸಲು ಅಥವಾ ಪಾಕಿಸ್ತಾನದಲ್ಲಿ ಸೇನಾನೆಲೆ ಸ್ಥಾಪಿಸಲು ಅಮೆರಿಕಕ್ಕೆ ಅವಕಾಶ ನೀಡುವ ಮಾತೇ ಇಲ್ಲ ಎಂದು ಎಚ್‌ಬಿಒ ಆಕ್ಸಿಯಾಸ್ ನ ಪತ್ರಕರ್ತ ಜೊನಾಥನ್ ಸ್ವಾನ್ ಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಹೇಳಿದ್ದಾರೆ. ಈ ಸಂದರ್ಶನ ಆಕ್ಸಿಯಾಸ್ ವೆಬ್ಸೈಟ್ ನಲ್ಲಿ ರವಿವಾರ ಪ್ರಸಾರವಾಗುತ್ತದೆ ಎಂದು ವರದಿ ತಿಳಿಸಿದೆ. ಅಲ್ ಖೈದಾ, ಐಸಿಸ್ ಅಥವಾ ತಾಲಿಬಾನ್ ವಿರುದ್ಧ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ಅಮೆರಿಕದ ಸಿಐಎಗೆ ಪಾಕಿಸ್ತಾನದಲ್ಲಿ ನೆಲೆ ಸ್ಥಾಪಿಸಲು ಅವಕಾಶ ನೀಡಲಾಗುವುದೇ ಎಂಬ ಪ್ರಶ್ನೆಗೆ ಇಮ್ರಾನ್ ಉತ್ತರಿಸುತ್ತಿದ್ದರು.
 
ಅಪಘಾನಿಸ್ತಾನದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ನಡೆಸಲು ಅಮೆರಿಕಕ್ಕೆ ಪಾಕಿಸ್ತಾನದಲ್ಲಿ ಸೇನಾನೆಲೆ ಸ್ಥಾಪಿಸಲು ಅವಕಾಶ ನೀಡಲಾಗದು ಎಂದು ಈ ಹಿಂದೆ ಪಾಕಿಸ್ತಾನದ ವಿದೇಶ ವ್ಯವಹಾರ ಸಚಿವ ಶಹ ಮುಹಮ್ಮದ್ ಖುರೇಶಿ ಹೇಳಿಕೆ ನೀಡಿದ್ದರು. ಅಪಘಾನಿಸ್ತಾನದಲ್ಲಿ ಕಾರ್ಯಾಚರಣೆ ನಡೆಸಲು ಅಮೆರಿಕಕ್ಕೆ ಸೇನಾನೆಲೆ ಸ್ಥಾಪನೆಯ ಅವಕಾಶ ನಿರಾಕರಿಸಿದ ಪಾಕಿಸ್ತಾನದ ನಿಲುವನ್ನು ಸ್ವಾಗತಿಸುವುದಾಗಿ ತಾಲಿಬಾನ್ ನ ವಕ್ತಾರ ಸೊಹೈಲ್ ಶಹೀನ್ ದೋಹಾದಿಂದ ಕರೆ ಮಾಡಿ ಹೇಳಿರುವುದಾಗಿ ‘ದಿ ನೇಷನ್’ ವರದಿ ಮಾಡಿದೆ. ಪಾಕಿಸ್ತಾನದಲ್ಲಿ ಸೇನಾನೆಲೆ ಸ್ಥಾಪಿಸುವ ಅಮೆರಿಕದ ಆಗ್ರಹ ಅಸಮರ್ಥನೀಯವಾಗಿದೆ ಮತ್ತು ಇದಕ್ಕೆ ಪಾಕಿಸ್ತಾನ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿದೆ ಎಂದು ಶಹೀನ್ ಹೇಳಿರುವುದಾಗಿ ವರದಿಯಾಗಿದೆ.

ಈ ಮಧ್ಯೆ, ಸೇನಾನೆಲೆಯ ವಿಷಯದಲ್ಲಿ ಪಾಕಿಸ್ತಾನದ ಅಧಿಕಾರಿಗಳೊಂದಿಗೆ ನಡೆಯುತ್ತಿರುವ ಮಾತುಕತೆ ಸದ್ಯಕ್ಕೆ ಜಟಿಲವಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿರುವುದಾಗಿ ‘ದಿ ನ್ಯೂಯಾರ್ಕ್ ಟೈಮ್ಸ್’ನ ವರದಿ ಸತ್ಯಕ್ಕೆ ದೂರವಾದುದು ಎಂದು ಮುಹಮ್ಮದ್ ಖುರೇಶಿ ತಳ್ಳಿಹಾಕಿದ್ದಾರೆ. ಅಮೆರಿಕಕ್ಕೆ ಪಾಕ್ನಲ್ಲಿ ಸೇನಾನೆಲೆ ಸ್ಥಾಪಿಸಲು ಅಥವಾ ಪಾಕ್ನ ನೆಲದಿಂದ ಡ್ರೋನ್ ದಾಳಿ ನಡೆಸಲು ಅವಕಾಶವಿಲ್ಲ ಎಂದು ಖುರೇಶಿ ಹೇಳಿದ್ದಾರೆ ಎಂದು ‘ಡಾನ್’ ವರದಿ ಮಾಡಿದೆ. ಪಾಕಿಸ್ತಾನದಲ್ಲಿ ಅಮೆರಿಕದ ಸೇನಾ ನೆಲೆ ಸ್ಥಾಪನೆಯ ಸಾಧ್ಯತೆಯನ್ನು ಪಾಕ್ನ ಮಾಹಿತಿ ಇಲಾಖೆ ಸಚಿವ ಫವದ್ ಹುಸೈನ್ ಕೂಡಾ ತಳ್ಳಿಹಾಕಿದ್ದಾರೆ.

ಯುದ್ಧದಿಂದ ಜರ್ಝರಿತವಾಗಿರುವ ಅಪಘಾನಿಸ್ತಾನದಲ್ಲಿ ಉಗ್ರವಾದಿಗಳ ಕೃತ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಭವಿಷ್ಯದಲ್ಲಿ ನಡೆಸುವ ಸೇನಾಕಾರ್ಯಾಚರಣೆಗೆ ಪ್ರಾದೇಶಿಕ ದೇಶಗಳ ಸಹಕಾರವನ್ನು ಅಮೆರಿಕ ಬಯಸಿದೆ ಎಂದು ‘ದಿ ನ್ಯೂಸ್ ಇಂಟರ್ನ್ಯಾಷನಲ್’ ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News